ಶಿವಮೊಗ್ಗದಲ್ಲಿ ಮಕ್ಕಳಿಂದ ಅಣಕು ಮತದಾನ, ದೇಶದಲ್ಲಿಯೇ ಇದೇ ಮೊದಲು..!

ಈ ಸುದ್ದಿಯನ್ನು ಶೇರ್ ಮಾಡಿ

ಶಿವಮೊಗ್ಗ, ಏ.20-ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ಕಡ್ಡಾಯ ಮತದಾನದ ಕುರಿತಂತೆ ವ್ಯಾಪಕ ಜನಜಾಗೃತಿ ಕಾರ್ಯಕ್ರಮ ಆಯೋಜಿಸಿ ಗಮನ ಸೆಳೆದಿರುವ ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಎ.ದಯಾನಂದ್‍ರವರು, ಮಕ್ಕಳಲ್ಲಿ ಚುನಾವಣೆಗಳ ಬಗ್ಗೆ ಅರಿವು ಮೂಡಿಸಲು ದೇಶದಲ್ಲಿಯೇ ಮೊದಲ ಬಾರಿಗೆ ಜಿಲ್ಲಾಡಳಿತದ ವತಿಯಿಂದ ಮಕ್ಕಳ ಅಣುಕು ಮತದಾನ ಕಾರ್ಯಕ್ರಮವನ್ನು ಆಯೋಜಿಸಿದ್ದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಕಾರ್ಯಕ್ರಮ ನಡೆಯಿತು. ಇದಕ್ಕಾಗಿ ಕಚೇರಿಯ ಪ್ರವೇಶ ದ್ವಾರವನ್ನು ಆಕರ್ಷಕವಾಗಿ ಸಿಂಗರಿಸಲಾಗಿತ್ತು. ನೂರಾರು ಮಕ್ಕಳ ಅಣುಕು ಮತದಾನ ಸಂಭ್ರಮಕ್ಕೆ ಸಾಕ್ಷಿಯಾದರು. ಕಚೇರಿಯು ಮಕ್ಕಳಿಂದ ಗಿಜಿಗುಡುತ್ತಿತ್ತು.

ಹೆಸರು ನೊಂದಾವಣೆ: ಅಣುಕು ಮತದಾನದಲ್ಲಿ ಭಾಗವಹಿಸಲಿಚ್ಚಿಸುವ ಮಕ್ಕಳು ಮೊದಲೇ ಹೆಸರು ನೊಂದಾಯಿಸಿಕೊಳ್ಳುವಂತೆ ಜಿಲ್ಲಾಡಳಿತ ಸೂಚನೆ ನೀಡಿತ್ತು. ಅದರಂತೆ ಸುಮಾರು ಮುನ್ನೂರು ಮಕ್ಕಳು ಮತದಾನಕ್ಕೆ ಹೆಸರು ನೋಂದಾಯಿಸಿಕೊಂಡಿದ್ದು ಮತದಾನ ಮಾಡಿ ಸಂಭ್ರಮಿಸಿದ್ದು ವಿಶೇಷವಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಕೆ.ಎ ದಯಾನಂದ್‍ರವರು, ‘ಮುಂದುವರೆದ ದೇಶಗಳಲ್ಲಿ ಮಕ್ಕಳಿಗೆ ಮತದಾನದ ಕುರಿತು ಶಿಕ್ಷಣ ನೀಡಲು ಇಂತಹ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಅದೇ ಮಾದರಿಯಲ್ಲೇ ದೇಶದಲ್ಲಿ ಪ್ರಥಮ ಪ್ರಯತ್ನ ನಮ್ಮ ಜಿಲ್ಲೆಯಲ್ಲಾಗಿದೆ ಎಂದರು.

ಮತದಾನ ಮಾಡಿ ಬೆರಳಿನ ಶಾಯಿ ಗುರುತಿನೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡ ಚಿಣ್ಣರು ಸಾರ್ವಜನಿಕರಿಗೆ ‘ನಾವು ಮತದಾನ ಮಾಡಿದ್ದೇವೆ, ನೀವು ಸಹ ಮತದಾನ ಮಾಡಿ’ ಎಂದು ಕರೆ ಕೊಡುವ ಮೂಲಕ ಜೀವನದ ಮೊದಲ ಮತದಾನದ ಸವಿಕ್ಷಣವನ್ನು ಸಂಭ್ರಮಿಸಿದರು. ಸ್ಥಳದಲ್ಲಿ ಅಪರ ಜಿಲ್ಲಾಧಿಕಾರಿ ಪೂರ್ಣಿಮ ಹಾಜರಿದ್ದರು.

ಸಂತಸವಾಯ್ತು: ಅಪ್ಪ-ಅಮ್ಮ ಮತ ಹಾಕಲು ಹೋದಾಗ ಅವರ ಜೊತೆ ಹೋಗುತ್ತಿದ್ದೆ. ಇಲ್ಲಿ ನಾನೇ ಮತ ಹಾಕಿದೆ. ಕೈ ಬೆರಳಿಗೆ ಕಪ್ಪು ಇಂಕ್ ಹಚ್ಚಲಾಯಿತು. ಸಾಕಷ್ಟು ಖುಷಿಯಾಯ್ತು. ಓಟ್ ಹಾಕಿದ್ದು ಸಂತಸ ಉಂಟು ಮಾಡಿತು ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 5 ನೇ ತರಗತಿ ವಿದ್ಯಾರ್ಥಿಯೋರ್ವ ಅಭಿಪ್ರಾಯಪಟ್ಟರು.

Facebook Comments

Sri Raghav

Admin