ವಾಣಿಜ್ಯ ಬಾಂಧವ್ಯ ವೃದ್ಧಿಯಿಂದ ಭಯೋತ್ಪಾದನೆ ನಿಗ್ರಹದವರೆಗೆ ಮೋದಿ-ಕ್ಸಿ ಚರ್ಚೆ

ಈ ಸುದ್ದಿಯನ್ನು ಶೇರ್ ಮಾಡಿ

ಮಾಮಲ್ಲಪುರಂ, ಅ.12- ಭಾರತ ಪ್ರವಾಸದಲ್ಲಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಉಭಯದೇಶಗಳ ನಡುವೆ ವಾಣಿಜ್ಯ ಬಾಂಧವ್ಯ ಬಲವರ್ಧನೆ ವಿಷಯದಿಂದ ಹಿಡಿದು ಭಯೋತ್ಪಾದನೆ ನಿಗ್ರಹತದ ತನಕ ಅನೇಕ ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು.

ನಿನ್ನೆ ಉಭಯ ನಾಯಕರ ನಡುವೆ ಮುಕ್ತಾಯಗೊಂಡ ಸುದೀರ್ಘ ಕಾರ್ಯಕ್ರಮಗಳ ನಂತರ ಅಂತ್ಯದಲ್ಲಿ ಸುದ್ದಿಗಾರರಿಗೆ ಸಭೆಯ ವಿವರಗಳನ್ನು ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ನೀಡಿದರು. ಮೋದಿ ಮತ್ತು ಕ್ಸಿ ನಿನ್ನೆ ಸುಮಾರು 5 ಗಂಟೆಗಳ ಕಾಲ ಜೊತೆಯಲ್ಲಿದ್ದರು.

ಈ ಸಂದರ್ಭದಲ್ಲಿ ಅವರು, ಭಾರತ-ಚೀನಾ ನಡುವೆ ವ್ಯಾಪಾರ ಸಂಬಂಧ ವೃದ್ಧಿ, ಭಯೋತ್ಪಾದನೆ ನಿಗ್ರಹ ಸೇರಿದಂತೆ ಪ್ರಚಲಿತ ವಿದ್ಯಮಾನ ಕುರಿತು ಗಹನ ಸಮಾಲೋಚನೆ ನಡೆಸಿದರು ಎಂದು ಅವರು ತಿಳಿಸಿದರು. ಜಾಗತಿಕ ಆರ್ಥಿಕ ಹಿನ್ನೆಡೆ ಮತ್ತು ಏಷ್ಯಾ ಖಂಡಕ್ಕೆ ಪೀಡುಗಾಗಿ ಪರಿಣಮಿಸಿರುವ ಭಯೋತ್ಪಾದನೆ ವಿಷಯಗಳ ಕುರಿತು ಉಭಯ ನಾಯಕರು ಪ್ರಮುಖವಾಗಿ ಚರ್ಚಿಸಿದರು ಎಂದು ಗೋಖಲೆ ಹೇಳಿದರು. ಏಷ್ಯಾ ಉಪಖಂಡದಲ್ಲಿ ಆರ್ಥಿಕ ಪ್ರಗತಿಗೆ ಅಗತ್ಯವಾದ ಸಹಕಾರವನ್ನು ಚೀನಾ ನೀಡಲಿದೆ.

ಇದೇ ವೇಳೆ ಉಗ್ರಗಾಮಿಗಳ ಪೀಡುಗನ್ನು ಹತ್ತಿಕ್ಕಲು ಬೆಂಬಲ ನೀಡುವುದಾಗಿ ಚೀನಿ ಅಧ್ಯಕ್ಷರು ಪ್ರಧಾನಿಯವರಿಗೆ ಭರವಸೆ ನೀಡಿದರು ಎಂದು ವಿದೇಶಾಂಗ ಕಾರ್ಯದರ್ಶಿ ವಿವರಿಸಿದರು. ಇಂದು ಸಹ ಮೋದಿ-ಕ್ಸಿ ಅಧಿಕೃತ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದು, ಮಹತ್ವದ ವಿಷಯಗಳ ಚರ್ಚೆ ಮುಂದುವರೆದಿದೆ.

Facebook Comments