BIG BREAKING : ಗಲ್ವಾನ್ ಗಡಿ `ಲೇಹ್’ಗೆ ದಿಢೀರ್ ಭೇಟಿ ನೀಡಿದ ಪ್ರಧಾನಿ ಮೋದಿ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜು.3-ಭಾರತ ಮತ್ತು ಚೀನಾ ನಡುವೆ ಗಡಿ ವಿವಾದದ ಸಂಘರ್ಷ ತಾರಕಕ್ಕೇರಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದಿಢೀರನೇ ಲಡಾಕ್‍ನ ಲೇಹ್‍ಗೆ ಭೇಟಿಕೊಟ್ಟು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.

ಪ್ರಧಾನಿಯವರ ಈ ದಿಢೀರ್ ಭೇಟಿ ಗಡಿ ವಿಷಯದಲ್ಲಿ ಭಾರತ ಎಂದಿಗೂ, ಯಾವುದೇ ಕಾರಣಕ್ಕೂ ಸಾರ್ವಭೌತೆಯಲ್ಲಿ ಸಂಧಾನ ಮಾಡಿಕೊಳ್ಳುವ ಅಥವಾ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂಬ ಕಠಿಣ ಸಂದೇಶವನ್ನು ಚೀನಾಕ್ಕೆ ರವಾನಿಸಿದೆ.

ಪ್ರಧಾನಿಯವರೊಂದಿಗೆ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ , ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ ಕೆಲವೇ ಕೆಲವು ಅಧಿಕಾರಿಗಳು ಲೇಹ್‍ನ ನಿಮೋ ಸ್ಥಳಕ್ಕೆ ಭೇಟಿ ಕೊಟ್ಟಿದ್ದರು.

ಲೇಹ್‍ಗೆ ಇಂದು ಪ್ರಧಾನಿಯವರು ಆಗಮಿಸಲಿದ್ದಾರೆ ಎಂಬ ಸಣ್ಣ ಸುಳಿವನ್ನೂ ಕೂಡ ಯಾರಿಗೂ ಬಿಟ್ಟುಕೊಟ್ಟಿರಲಿಲ್ಲ. ಅಷ್ಟೂ ಗೌಪ್ಯತೆಯನ್ನು ಕಾಪಾಡಿಕೊಳ್ಳಲಾಗಿತ್ತು.

ನವದೆಹಲಿಯಿಂದ ವಿಶೇಷ ವಿಮಾನದಲ್ಲಿ ಲೇಹ್‍ಗೆ ಆಗಮಿಸಿದ ಮೋದಿ ಅಲ್ಲಿಂದ ನಿಮೋಕ್ಕೆ ತೆರಳಿ ಸೈನಿಕರನ್ನು ಭೇಟಿಯಾಗಿ ಗಲ್ವಾನ್ ಕಣಿವೆ ಪ್ರದೇಶದಲ್ಲಿ ಭದ್ರತೆಯ ಪರಾಮರ್ಶೆ ನಡೆಸಿದರು.

ನಂತರ ಲೇಹ್‍ನಲ್ಲಿರುವ ಸೇನಾ ಆಸ್ಪತ್ರೆಗೆ ಭೇಟಿ ನೀಡಿದ ಪ್ರಧಾನಿ ಚೀನಾ ಸೈನಿಕರ ಜೊತೆ ಹೋರಾಟ ನಡೆಸಿ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಯೋಧರ ಆರೋಗ್ಯ ವಿಚಾರಿಸಿದರು.ತಾಯ್ನಾಡಿನ ರಕ್ಷಣೆಗಾಗಿ ತಮ್ಮ ಜೀವದ ಹಂಗು ತೊರೆದು ಚೀನಾ ಯೋಧರನ್ನು ಹಿಮ್ಮೆಟಿಸಿದ ಸೈನಿಕರ ಶೌರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.

# ಭದ್ರತಾ ಪರಾಮರ್ಶೆ:
ಪ್ರಧಾನಿಯವರು ತಮ್ಮ ಭೇಟಿಯ ಸಂದರ್ಭದಲ್ಲಿ ಭೂ ಮತ್ತು ವಾಯುಸೇನೆಯ ಮುಖ್ಯಸ್ಥರು ಮತ್ತು ವಿವಿಧ ಹಂತದ ಕಮಾಂಡರ್‍ಗಳ ಜೊತೆ ಗಡಿ ಸಂಬಂಧ ಭದ್ರತೆಯನ್ನು ಪರಾಮರ್ಶಿಸಿದರು.

ಸೈನಿಕರ ಜೊತೆ ಸುಮಾರು 30 ನಿಮಿಷಕ್ಕೂ ಹೆಚ್ಚು ಕಾಲ ಮುಖಾಮುಖಿಯಾಗಿ ಚರ್ಚೆ ನಡೆಸಿದ ಮೋದಿ ಅವರು ಯಾವುದೇ ಕಾರಣಕ್ಕೂ ಒಂದಿಂಚೂ ನೆಲವನ್ನು ನೆರೆ ರಾಷ್ಟ್ರಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ.

ಭಾರತ ತನ್ನ ಸಾರ್ವಭೌತೆ ಹಾಗೂ ಭೂಪ್ರದೇಶವನ್ನು ರಕ್ಷಣೆ ಮಾಡಿಕೊಳ್ಳಲು ಬದ್ಧವಿದೆ. ಸೈನಿಕರಿಗೆ ಬೇಕಾದ ಎಲ್ಲ ಸವಲತ್ತು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಕೊಡುವ ವಾಗ್ದಾನ ಮಾಡಿದರು.  ಸೈನಿಕರ ಜೊತೆ ಮಾತನಾಡುವ ವೇಳೆ ಮೋದಿ ಅವರು ಭಾರತ ಶಾಂತಿಪ್ರಿಯ ರಾಷ್ಟ್ರವಾಗಿದೆ.

ತನ್ನ ಭೂ ಪ್ರದೇಶವನ್ನು ಯಾವುದೇ ಬೆಲೆ ತೆತ್ತಾದರೂ ರಕ್ಷಣೆ ಮಾಡಿಕೊಳ್ಳುತ್ತೇವೆ. ಒಂದು ವೇಳೆ ನಮ್ಮ ಸಹನೆಯನ್ನು ಯಾರಾದರೂ ದೌರ್ಬಲ್ಯ ಎಂದು ಪರಿಗಣಿಸಿದರೆ ತಕ್ಕ ಪಾಠ ಕಲಿಸಲಿದ್ದೇವೆ ಎಂದು ಪರೋಕ್ಷವಾಗಿ ಚೀನಾಗೆ ಎಚ್ಚರಿಕೆ ಸಂದೇಶವನ್ನು ರವಾನಿಸಿದರು.

ಭಾರತ ತನ್ನ ನೆರೆಯ ರಾಷ್ಟ್ರಗಳೊಂದಿಗೆ ಸ್ನೇಹ ಮತ್ತು ಶಾಂತಿಯಿಂದ ಬದುಕಲು ಇಚ್ಚಿಸುತ್ತದೆ. ಅನಗತ್ಯವಾಗಿ ನಮ್ಮನ್ನು ಯಾರಾದರೂ ಕೆಣಕಿದರೆ ಅಂತವರಿಗೆ ಸೂಕ್ತ ಕಾಲದಲ್ಲಿ ಎದುರೇಟು ನೀಡುವುದು ಗೊತ್ತು ಎಂದು ಚೀನಾ ವಿರುದ್ಧ ಕಿಡಿಕಾರಿದರು.  ಪ್ರಧಾನಿಯವರು ಗಡಿ ಪ್ರದೇಶಕ್ಕೆ ತೆರಳುವ ವಿಷಯ ಅತ್ಯಂತ ಗೌಪ್ಯವಾಗಿ ಇಡಲಾಗಿತ್ತು. ಇಂದು ಸೇನಾ ಮುಖ್ಯಸ್ಥರು, ಗಡಿ ಭಾಗಕ್ಕೆ ತೆರಳಬೇಕಿತ್ತು.

ಆದರೆ ಖುದ್ದು ಪ್ರಧಾನಿಯವರೇ ಭೇಟಿ ನೀಡುತ್ತಾರೆಂಬುದು ಅನೇಕರಿಗೆ ತಿಳಿದಿರಲಿಲ್ಲ. ಕಳೆದ ಜೂ.15ರಂದು ಲಡಾಕ್‍ನ ಗಲ್ವಾನ್ ಕಣಿವೆ ಪ್ರದೇಶದಲ್ಲಿ ಭಾರತ ಮತ್ತು ಚೀನಾ ನಡುವೆ ಸಂಭವಿಸಿ 20 ಯೋಧರು ಸಾವನ್ನಪ್ಪಿ ಅನೇಕರು ಗಾಯಗೊಂಡಿದ್ದರು.  ಈ ಘಟನೆ ನಂತರ ಉಭಯ ರಾಷ್ಟ್ರಗಳ ನಡುವೆ ಪರಿಸ್ಥಿತಿ ದಿನದಿಂದ ದಿನಕ್ಕೆ ಕೈ ಮೀರುತ್ತಿದೆ. ಡ್ರಾಗನ್ ರಾಷ್ಟ್ರದ ವಿರುದ್ಧ ಅಮೆರಿಕ, ಆಸ್ಟ್ರೇಲಿಯ, ಜಪಾನ್, ದಕ್ಷಿಣ ಕೋರಿಯ, ಇಸ್ರೇಲ್, ಆಸಿಯನ್ ರಾಷ್ಟ್ರಗಳು ಸೇರಿದಂತೆ ಅನೇಕರು ಮುಗಿಬೀಳಲು ಸಜ್ಜಾಗಿದೆ.

ಭಾರತ ಕೂಡ ಗಡಿಪ್ರದೇಶದಲ್ಲಿ ಚೀನಾಕ್ಕೆ ತಕ್ಕ ಪಾಠ ಕಲಿಸುತ್ತಿದೆ. ಘಟನೆ ನಡೆದ ಬಳಿಕ ಗಲ್ವಾನ್ ಸೇರಿದಂತೆ ಚೀನಾದ ಗಡಿಯಲ್ಲಿ ಭಾರೀ ಪ್ರಮಾಣದ ಸೇನೆಯನ್ನು ನಿಯೋಜಿಸಲಾಗಿದೆ.

ಚೀನಾ ಯಾವಾಗ ತನ್ನ ಕುತಂತ್ರ ಬುದ್ದಿ ತೋರಿಸಿತೋ ಭಾರತ ಈಗಾಗಲೇ 59 ಚೀನಾದ ಆಪ್‍ಗಳನ್ನು ನಿಷೇಧಿಸಿದೆ. ಹೀಗೆ ಎರಡೂ ರಾಷ್ಟ್ರಗಳ ನಡುವೆ ಸಂಘರ್ಷ ತಾರಕಕ್ಕೇರಿರುವ ವೇಳೆಯೇ ಪ್ರಧಾನಿ ಮೋದಿ ಇಂದು ಗಡಿ ಪ್ರದೇಶಕ್ಕೆ ಭೇಟಿ ಕೊಟ್ಟಿರುವುದು ವಿಶ್ವದ ಎರಡು ಅಣ್ವಸ್ತ್ರ ರಾಷ್ಟ್ರಗಳ ನಡುವೆ ಯುದ್ಧದ ಕಾರ್ಮೋಡ ಆವರಿಸುವ ಲಕ್ಷಣಗಳು ಕಂಡುಬಂದಿದೆ.

Facebook Comments