ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೇಗುಲಕ್ಕೆ ಚಿನ್ನದ ಕಿರೀಟ ಸಮರ್ಪಿಸಿದ ಅಭಿಮಾನಿ..!

ಈ ಸುದ್ದಿಯನ್ನು ಶೇರ್ ಮಾಡಿ

ವಾರಣಾಸಿ, ಸೆ.17- ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನದ ಪ್ರಯುಕ್ತ ಅವರ ಅಭಿಮಾನಿಯೊಬ್ಬರು ವಾರಣಾಸಿಯ ದೇವಾಲಯವೊಂದಕ್ಕೆ ಸುಮಾರು 45 ಲಕ್ಷ ರೂ.ಗಳ 1.25 ಕೆಜಿ ತೂಕದ ಬಂಗಾರದ ಕಿರೀಟ ಸಮರ್ಪಿಸಿ ಅಪಾರ ಅಭಿಮಾನ ಪ್ರದರ್ಶಿಸಿದ್ದಾರೆ.

ವಾರಣಾಸಿಯ ನಿವಾಸಿ ಆನಂದ್‍ಸಿಂಗ್ ಅವರು ತಮ್ಮ ನಗರದ ಸಂಕಟಮೋಚನ ಹನುಮಾನ್ ದೇವಾಲಯಕ್ಕೆ 1.25 ಕೆಜಿ ತೂಕದ ಸ್ವರ್ಣಕಿರೀಟ ಸಮರ್ಪಿಸಿದ್ದಾರೆ. ಮೋದಿ ಅಭಿಮಾನಿಯಾದ ಇವರು ಲೋಕಸಭಾ ಚುನಾವಣೆಗೂ ಮುನ್ನ ಕೇಂದ್ರದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದು ನರೇಂದ್ರ ಮೋದಿ ಅವರು ಎರಡನೆ ಬಾರಿ ಪ್ರಧಾನಮಂತ್ರಿಯಾದರೆ ಬಂಗಾರದ ಕಿರೀಟ ನೀಡುವುದಾಗಿ ಹರಕೆ ಹೊತ್ತಿದ್ದರು.

ನಾನು ಚುನಾವಣೆಗೂ ಮುನ್ನ ಹರಕೆ ಹೊತ್ತಿದ್ದೆ. ವಾರಣಾಸಿ ಕ್ಷೇತ್ರದ ಜನತೆ ಸೇರಿದಂತೆ ಇಡೀ ದೇಶದ ಜನರ ಅಭಿಲಾಷೆಯಂತೆ ಬಿಜೆಪಿ ಅಧಿಕಾರಕ್ಕೆ ಬಂದು ಮೋದಿ ಎರಡನೆ ಬಾರಿ ಪ್ರಧಾನಿಯಾದರು. ಇಂದು ಅವರ ಜನ್ಮದಿನ. ಈ ಪ್ರಯುಕ್ತ ದೇಗುಲಕ್ಕೆ ಹೊನ್ನಿನ ಕಿರೀಟವನ್ನು ಕೊಡುಗೆಯಾಗಿ ನೀಡಿರುವುದಾಗಿ ಆನಂದ್‍ಸಿಂಗ್ ಹೇಳಿದರು. ಮೋದಿ ಅವರು ಅತ್ಯಂತ ಜನಪ್ರಿಯ ಪ್ರಧಾನಿಯಾಗಿದ್ದಾರೆ.

ಈ ಹಿಂದೆ ಯಾವ ಪ್ರಧಾನಮಂತ್ರಿಯೂ ಮಾಡದಿರುವಂತಹ ಅತ್ಯುತ್ತಮ ಕಾರ್ಯಗಳನ್ನು ನಿರ್ವಹಿಸಿದ್ದಾರೆ. ಅವರು ಇನ್ನೂ ಹಲವು ವರ್ಷಗಳ ಕಾಲ ಇದೇ ಹುದ್ದೆಯಲ್ಲಿ ಮುಂದುವರಿಯಬೇಕೆಂಬುದು ನಮ್ಮೆಲ್ಲರ ಅಭಿಲಾಷೆ ಎಂದು ಆನಂದ್‍ಸಿಂಗ್ ಹೇಳಿದರು.

Facebook Comments