500 ದಶಲಕ್ಷ ಜಾನುವಾರುಗಳ ಲಸಿಕೆ ಕಾರ್ಯಕ್ರಮಕ್ಕೆ ಮೋದಿ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

ಉತ್ತರ ಪ್ರದೇಶ, ಸೆ.11- ಜಾನುವಾರುಗಳನ್ನು ಬಾಧಿಸುತ್ತಿರುವ ಮಾರಕ ಕಾಲು ಮತ್ತು ಬಾಯಿ ರೋಗ (ಎಫ್‍ಎಂಡಿ) ಹಾಗೂ ಬ್ರುಸೆಲೋಸಿಸ್ ರೋಗ ನಿರ್ಮೂಲನೆಗಾಗಿ ಮಹತ್ವದ ರಾಷ್ಟ್ರೀಯ ಪ್ರಾಣಿ ರೋಗ ನಿಯಂತ್ರಣ ಕಾರ್ಯಕ್ರಮ (ಎನ್‍ಎಡಿಸಿಪಿ)ಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದರು. ಈ ಯೋಜನೆಯನ್ವಯ 12,652 ಕೋಟಿ ವೆಚ್ಚದಲ್ಲಿ 500 ದಶಲಕ್ಷ ಜಾನುವಾರುಗಳಿಗೆ ರೋಗ ನಿರೋಧಕ ಲಸಿಕೆ ಹಾಕುವ ಗುರಿ ಹೊಂದಲಾಗಿದೆ.

ಹಸು, ಎತ್ತು, ಎಮ್ಮೆ, ಕುರಿ, ಮೇಕೆ ಮತ್ತು ಹಂದಿಗಳು ಈ ಲಸಿಕೆ ಕಾರ್ಯಕ್ರಮದ ವ್ಯಾಪ್ತಿಗೆ ಒಳಪಡಲಿವೆ. 2024ರ ವರೆಗೂ ಕೇಂದ್ರ ಸರ್ಕಾರ ಶೇ.100ರಷ್ಟು ಅನುದಾನವನ್ನು ಈ ಮಹತ್ವದ ಯೋಜನೆಗೆ ನೀಡಲಿದೆ.  ಇದಲ್ಲದೆ, 36 ದಶಲಕ್ಷ ಹೆಣ್ಣು ಕರುಗಳನ್ನು ಬ್ರುಸೆಲೋಸಿಸ್ ರೋಗದಿಂದ ನಿರ್ಮೂಲನೆ ಮಾಡಲು ಲಸಿಕೆ ಕಾರ್ಯಕ್ರಮ ಗುರಿಯನ್ನು ಸಹ ಹೊಂದಲಾಗಿದೆ.

ಉತ್ತರ ಪ್ರದೇಶದ ಮಥುರಾದಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದು ಎರಡು ಮುಖ್ಯ ಉದ್ದೇಶಗಳನ್ನು ಒಳಗೊಂಡಿದೆ. 2025ರ ವೇಳೆಗೆ ಎಫ್‍ಎಂಡಿ ಮತ್ತು ಬ್ರುಸೆಲೋಸಿಸ್ ರೋಗ ನಿಯಂತ್ರಣ ಮತ್ತು 2030ರೊಳಗೆ ಸಂಪೂರ್ಣ ನಿರ್ಮೂಲನೆ ಗುರಿ ಹೊಂದಲಾಗಿದೆ.

ಇದೇ ಸಂದರ್ಭದಲ್ಲಿ ರೈತರೊಂದಿಗೆ ಸಂವಾದ ನಡೆಸಿದ ಮೋದಿ, ರಾಷ್ಟ್ರೀಯ ಕೃತಕ ಗರ್ಭಧಾರಣೆ ಕಾರ್ಯಕ್ರಮಕ್ಕೂ ಸಹ ಚಾಲನೆ ನೀಡಿದರು.  ಮೋದಿ ಅವರು ಈ ಸಂದರ್ಭದಲ್ಲಿ ಸ್ವಚ್ಛತೆಯೇ ಸೇವೆ ಕಾರ್ಯಕ್ರಮದಡಿ ತ್ಯಾಜ್ಯದಿಂದ ಪ್ಲಾಸ್ಟಿಕ್ ಬೇರ್ಪಡಿಸುವ ಮಹಿಳೆಯರ ಉಪಕ್ರಮಕ್ಕೆ ಸಾಥ್ ನೀಡಿದರು.

Facebook Comments