‘ಮಾಯಾ’ ಬಜಾರನಲ್ಲಿ ಮೋದಿ ಹವಾ, ಅಯೋಧ್ಯೆಯಲ್ಲಿ ಸ್ಪೀಚ್ ಫೈಟ್

ಈ ಸುದ್ದಿಯನ್ನು ಶೇರ್ ಮಾಡಿ

ಮಾಯಾಬಜಾರ(ಅಯೋಧ್ಯೆ) ಮೇ. 1-ಉತ್ತರ ಪ್ರದೇಶದ ಅಯೋಧ್ಯೆ ಬಳಿ ಇರುವ ಮಾಯಾಬಜಾರನಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ ವಿರುದ್ಧ ಬಿರುಸಿನ ವಾಗ್ದಾಳಿ ನಡೆಸಿದರು.

ಪ್ರಧಾನ ಮಂತ್ರಿಯಾದ ನಂತರ ಇದೇ ಮೊದಲ ಬಾರಿಗೆ ಅಯೋಧ್ಯೆ ಭೇಟಿ ನೀಡಿದ ಮೋದಿ 27ಕಿ.ಮೀ. ದೂರದಲ್ಲಿರುವ ಮಾಯಾಬಜಾರನಲ್ಲಿ ಭರ್ಜರಿ ಚುನಾವಣಾ ಪ್ರಚಾರ ನಡೆಸಿದರು. ಮರ್ಯಾದಾ ಪುರುಷೋತ್ತಮ್ ಶ್ರೀರಾಮನ ಪುಣ್ಯಭೂಮಿ ಇದು ಎಂದು ಅಯೋಧ್ಯೆ ಜನತೆಗೆ ನಮಿಸುತ್ತಾ ಭಾಷಣ ಮಾಡಿದರು.

ಎಂದಿನಂತೆ ತಮ್ಮ ಭಾಷಣದಲ್ಲಿ ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳ ವಿರುದ್ದ ತೀಕ್ಷ್ಣ ವಾಗ್ದಾಳಿ ನಡೆಸಿದ ಮೋದಿ, ಸ್ವಾರ್ಥ ಮತ್ತು ಸ್ವಹಿತಾಸಕ್ತಿ ಈ ಪಕ್ಷಗಳಿಂದ ಬಡವರ ಉದ್ಧಾರ ಅಸಾಧ್ಯ ಎಂದು ಟೀಕಿಸಿದರು.

ಕಾಂಗ್ರೆಸ್ ಪಕ್ಷ ಓಟು ಗಳಿಕೆಗಾಗಿ ಮಾತ್ರ ಬಡವರನ್ನು ದುರುಪಯೋಗ ಮಾಡಿಕೊಂಡಿದೆ ಹೊರತು ಆರ್ಥಿಕ ದುರ್ಬಲರ ಏಳಿಗೆಗೆ ಶ್ರಮಿಸಿಲ್ಲ ಎಂದರು. ಸಮಾಜವಾದಿ ಪಕ್ಷ(ಎಸ್‍ಪಿ)-ಬಹುಜನ ಸಮಾಜ ಪಕ್ಷ(ಬಿಎಸ್‍ಪಿ) ಮೈತ್ರಿ ವಿರುದ್ಧ ವಾಗ್ದಾಳಿ ಮುಂದುವರೆಸಿದ ಅವರು ಸ್ವಾರ್ಥ ಮತ್ತು ಅಸ್ಥಿತ್ವ ಉಳಿಸಿಕೊಳ್ಳಲು ರಚನೆಯಾಗಿರುವ ದುರ್ಬಲ ಮೈತ್ರಿಕೂಟ ಇದಾಗಿದೆ ಎಂದು ಟೀಕಿಸಿದರು.

ಎಸ್‍ಪಿ ಕುಟುಂಬ ರಾಜಕಾರಣಕ್ಕೆ ಮಾತ್ರ ಸೀಮಿತವಾದ ಪ್ರಾದೇಶಿಕ ಪಕ್ಷ. ಮಾಯಾವತಿ ನೇತೃತ್ವದ ಬಿಎಸ್‍ಪಿ ಪಕ್ಷದ ಚಿಹ್ನೆ ಮತ್ತು ಆ ಪಕ್ಷದ ಮುಖಂಡರ ಪ್ರತಿಮೆಗಳನ್ನು ಸ್ಥಾಪಿಸುವುದರಲ್ಲಿ ಕಾಲ ಕಳೆಯುತ್ತಿದೆ. ದಲಿತರ ಉದ್ಧಾರ ಮಾಡುತ್ತೇನೆ ಎಂದು ಘೋಷಿಸಿದ್ದ ಮಾಯಾವತಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ತತ್ವಾದರ್ಶಗಳಿಗೆ ತಿಲಾಂಜಲಿ ನೀಡಿದ್ದಾರೆ ಎಂದು ಮೋದಿ ಛೇಡಿಸಿದರು.

ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ ದೇಶದ ಬಡವರು, ಶ್ರಮಿಕ ವರ್ಗದವರು ಮತ್ತು ರೈತರ ಹಿತಾಸಕ್ತಿಗಾಗಿ ಅನೇಕ ಪ್ರಗತಿಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ. ನಮ್ಮ ಸಾಧನೆಗಳು ವಿರೋಧ ಪಕ್ಷಗಳಲ್ಲಿ ಅಸೂಯೆಗೆ ಕಾರಣವಾಗಿವೆ ಎಂದು ಜರಿದರು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜ್ಯ ಸಚಿವ ಸಂಪುಟ ಮಂತ್ರಿಮಹೋದಯರು, ಬಿಜೆಪಿ ಹಿರಿಯ ಮುಖಂಡರು ಮತ್ತು ಅಯೋಧ್ಯಯ ಸಾಧು-ಸಂತರು, ಧಾರ್ಮಿಕ ಮುಖಂಡರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಮೇ 6ರಂದು ಅಯೋಧ್ಯೆ ಲೋಕಸಭಾ ಕ್ಷೇತ್ರ ಸೇರಿದಂತೆ ಉತ್ತರಪ್ರದೇಶದ ಕೆಲವೆಡೆ 5ನೇ ಹಂತದ ಮತದಾನ ನಡೆಯಲಿದೆ.

ಅಖಿಲೇಶ್-ಮಾಯಾ ಬಿರುಸಿನ ಪ್ರಚಾರ:
ಅಯೋಧ್ಯೆ ಇಂದು ಬಿಜೆಪಿ ಮತ್ತು ಎಸ್‍ಪಿ-ಬಿಎಸ್‍ಪಿ ತಾರಾ ಪ್ರಚಾರಕ ಬಿರುಸಿನ ಚುನಾವಣಾ ಪ್ರಚಾರಕ್ಕೆ ಸಾಕ್ಷಿಯಾಯಿತು. ಅಯೋಧ್ಯೆಯ ಮಾಯಾಬಜಾರ್‍ನಲ್ಲಿ ಪ್ರಧಾನಿ ಮೋದಿ ಹವಾ ವಿಜೃಂಭಿಸಿದರೆ ರಾಮ ಜನ್ಮಭೂಮಿ ಸ್ಥಳದ ರಾಮ್‍ಸಹೆನಿ ಘಾಟ್‍ನಲ್ಲಿ ಎಸ್‍ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಮಾಜಿಮುಖ್ಯಮಂತ್ರಿ ಮಾಯಾವತಿ ಅಬ್ಬರದ ಪ್ರಚಾರ ನಡೆಸಿದರು.

ಅಖಿಲೇಶ್ ಮತ್ತು ಮಾಯಾ ಎಂದಿನಂತೆ ಎನ್‍ಡಿಎ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

Facebook Comments

Sri Raghav

Admin