ರಾಜ್ಯದ 4 ಸಂಸದರಿಗೆ ಮಂತ್ರಿ ಭಾಗ್ಯ..!? ಇಂದಿನಿಂದ ‘ನಮೋ’ ರಾಜ್ಯಭಾರ ಶುರು

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮೇ 30-ಲೋಕಸಭಾ ಚುನಾವಣೆಯಲ್ಲಿ ಹತ್ತು-ಹಲವು ದಾಖಲೆಗಳೊಂದಿಗೆ ಪ್ರಚಂಡ ಜಯ ದುಂದುಭಿ ಮೊಳಗಿಸಿದ ನರೇಂದ್ರ ಮೋದಿ ಇಂದು ವಿಶ್ವದ ಅತ್ಯಂತ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಎರಡನೇ ಭಾರಿ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಕ್ಷಣಗಣನೆ ಆರಂಭವಾಗಿದೆ. ಇದರೊಂದಿಗೆ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ ಎರಡನೇ ಭಾರಿ ಅಧಿಕಾರ ಗದ್ದುಗೆ ಏರಲಿದೆ.

ರಾಷ್ಟ್ರಪತಿ ಭವನದಲ್ಲಿ ಮೋದಿ ಪ್ರಮಾಣ ವಚನ ಸಮಾರಂಭ ಅದ್ದೂರಿಯಾಗಿ ನಡೆಯಲಿದೆ. ನೂತನ ಪ್ರಧಾನಮಂತ್ರಿ ಅವರೊಂದಿಗೆ ರಾಜ್ಯ ನಾಲ್ವರು ಸಂಸದರೂ ಸೇರಿದಂತೆ 50 ರಿಂದ 60 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಹಿರಿಯ ಮುಖಂಡರಾದ ರಾಜನಾಥ್ ಸಿಂಗ್ ನಿತಿನ್ ಗಡ್ಕರಿ, ರವಿಶಂಕರ್ ಪ್ರಸಾದ್, ಪಿಯೂಷ್ ಗೋಯೆಲ್, ಪ್ರಕಾಶ್ ಜಾವ್ಡೇಕರ್, ನಿರ್ಮಲಾ ಸೀತಾರಾಮನ್, ನರೇಂದ್ರ ಸಿಂಗ್ ತೋಮರ್ ಸೇರಿದಂತೆ ಅಗ್ರಮಾನ್ಯರು ಪ್ರಮಾಣವಚನ ಸ್ವೀಕರಿಸುವುದು ಬಹುತೇಕ ಖಚಿತವಾಗಿದೆ.

ಅನಾರೋಗ್ಯದ ಕಾರಣ ಸಚಿವರಾಗಲು ನಿರಾಕರಿಸಿರುವ ಅರುಣ್ ಜೇಟ್ಲಿ ಮತ್ತು ಸುಷ್ಮಾ ಸ್ವರಾಜ್ ಅವರ ಮನವೊಲಿಸಲು ಮೋದಿ ಮತ್ತು ಅಮಿತ್ ಶಾ ಮಧ್ಯಾಹ್ನದವರೆಗೂ ಯತ್ನಿಸಿದರು.  ಕರ್ನಾಟಕದಿಂದ ಡಿ..ಸದಾನಂದಗೌಡ, .ಶ್ರೀನಿವಾಸ ಪ್ರಸಾದ್, ಸುರೇಶ್ ಅಂಗಡಿ ಮತ್ತು ಪ್ರಹ್ಲಾದ್ ಜೋಷಿ ಸ್ಥಾನ ಪಡೆಯಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಮೋದಿ ಮತ್ತು ನೂತನ ಸಚಿವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರಮಾಣ ವಚನ ಬೋಧಿಸುವರು. ಸಾರ್ಕ್ ಮತ್ತು ಬಿಮ್‍ಸ್ಟೆಕ್ ರಾಷ್ಟ್ರಗಳ ಅಧಿಪತಿಗಳು, ರಾಷ್ಟ್ರಾಧ್ಯಕ್ಷರು, ಪ್ರಧಾನಮಂತ್ರಿಗಳು, ವಿವಿಧ ರಾಜ್ಯಗಳ ರಾಜ್ಯಪಾಲರು, ಮುಖ್ಯಮಂತ್ರಿಗಳು, ಹಲವು ಕ್ಷೇತ್ರಗಳ ಗಣ್ಯಾತಿಗಣ್ಯರು ಈ ಭವ್ಯ ಸಮಾರಂಭವನ್ನು ಸಾಕ್ಷಿಕರಿಸಲಿದ್ದಾರೆ.

ಬಾಂಗ್ಲಾದೇಶ ರಾಷ್ಟಾಧ್ಯಕ್ಷ ಮಹಮದ್ ಅಬ್ದುಲ್ ಹಮೀದ್, ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲಾ ಸಿರಿಸೇನಾ, ಕಿರ್ಜಿಸ್ಥಾನ್ ಅಧ್ಯಕ್ಷ ಸೂರೋನ್‍ಬೆ ಜೀನ್‍ಬೇಕೌ, ಮ್ಯಾನ್ಮರ್ ಅಧ್ಯಕ್ಷ ಯು ವಿನ್ ಮುಂಟ್, ನೇಪಾಳ ಪ್ರಧಾನಮಂತ್ರಿ ಕೆ.ಪಿ.ಶರ್ಮ ಒಲಿ, ಭೂತಾನ್ ಪ್ರಧಾನಿ ಡಾ. ಲೊಟಯ್ ಷೇರಿಂಗ್, ಮಾರಿಷಸ್ ಪ್ರಧಾನಿ ಪ್ರಂದ್ ಜುಗ್ನೌಥ್ ಮೊದಲಾದವರು ಸಮಾರಂಭದಲ್ಲಿ ಪಾಲ್ಗೊಳ್ಳುವರು. ಆಹ್ವಾನ ನೀಡದ ಹಿನ್ನೆಲೆಯಲ್ಲಿ ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್‍ಖಾನ್ ಅನುಪಸ್ಥಿತಿ ಎದ್ದುಕಾಣುತ್ತಿತ್ತು.

ಏಷ್ಯಾದ ಅತ್ಯಂತ ಸಿರಿವಂತ ಉದ್ಯಮಿ ಮುಕೇಶ್ ಅಂಬಾನಿ ಸೇರಿದಂತೆ ಅನೇಕ ಗಣ್ಯ ಉದ್ಯಮಿಗಳು, ಬಾಲಿವುಡ್ ತಾರೆಯರು, ವಿವಿಧ ರಂಗಗಳ ಖ್ಯಾತನಾಮರು ಹಾಜರಿರುವರು  ಪುಲ್ವಾಮಾ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬ ವರ್ಗದವರು ಮತ್ತು ಚುನಾವಣೆ ವೇಳೆ ಮೃತಪಟ್ಟ ಬಿಜೆಪಿ ಕಾರ್ಯಕರ್ತರ ಕುಟುಂಬ ವರ್ಗದವರು ಭಾಗವಹಿಸುವರು.  ಮೋದಿ ಪ್ರಮಾಣ ವಚನ ಸ್ವೀಕಾರ ಹಿನ್ನೆಲೆಯಲ್ಲಿ ಅಭೂತಪೂರ್ವ ಬಂದೋಬಸ್ತ್ ಮಾಡಲಾಗಿದೆ.

# ಹೊಸ ಸಂಪುಟದಲ್ಲಿ ಯಾರ್ಯಾರಿಗೆ ಸ್ಥಾನ :
ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ ರಚನೆಗಾಗಿ ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತೀಯ ಜನತಾಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಿನ್ನೆ ತಡರಾತ್ರಿವರೆಗೆ ಮತ್ತು ಇಂದು ಮಧ್ಯಾಹ್ನದವರೆಗೆ ಗಹನ ಚರ್ಚೆ ಸಮಾಲೋಚನೆ ನಡೆಸಿದರು.

ಪ್ರಮಾಣ ವಚನ ಸ್ವೀಕರಿಸಲಿರುವ ಸಚಿವರನ್ನು ಆಯ್ಕೆಗಾಗಿಯೂ ಮೊನ್ನೆಯಿಂದಲೇ ಈ ಇಬ್ಬರು ನಾಯಕರು ಮಹತ್ವದ ಮಾತುಕತೆ ಮುಂದುವರಿಸಿ ನಿನ್ನೆ ತಡರಾತ್ರಿ ಪಟ್ಟಿಯೊಂದನ್ನು ಅಂತಿಮಗೊಳಿಸಿದರು. ಇಂದು ಬೆಳಿಗ್ಗೆಯಿಂದ ಸಣ್ಣಪುಟ್ಟ ಬದಲಾವಣೆಯೊಂದಿಗೆ ಅದನ್ನು ಅಖೈರುಗೊಳಿಸಿ ರಾಷ್ಟ್ರಪತಿ ಅವರಿಗೆ ರವಾನಿಸಲಾಗಿದೆ.

ಮೋದಿ ಮತ್ತು ಶಾ ಸುಮಾರು ಐದು ತಾಸುಗಳಿಗೂ ಹೆಚ್ಚು ಕಾಲ ನೂತನ ಮಂತ್ರಿಮಂಡಲ ರಚನೆಯ ಮಂತ್ರಾಲೋಚನೆಯಲ್ಲಿ ತೊಡಗಿದ್ದರು. ಹದಿನೇಳನೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ಗೆಲುವಿಗೆ ಕಾರಣಿಕರ್ತರಾದ ಅಮಿತ್ ಅವರು ಈಗ ಕೇಂದ್ರ ಸಚಿವರಾಗುವುದು ಬಹುತೇಕ ಖಚಿತವಾಗಿದ್ದು, ಇಂದು ಪ್ರಮಾಣವಚನ ಸ್ವೀಕರಿಸುವವರಲ್ಲಿ ಮೊದಲಿಗರಾಗಲಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಮೋದಿ, ಅಮಿತ್ ಶಾ ಸೇರಿದಂತೆ 50 ರಿಂದ 60 ಸಚಿವರ ಮಂತ್ರಿಮಂಡಲ ರಚನೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ. ಎನ್‍ಡಿಎ ಪ್ರಮುಖ ಮಿತ್ರಪಕ್ಷಗಳನ್ನು ಓಲೈಸಲು ಮೋದಿ ಮತ್ತು ಶಾ ಚಾಣಾಕ್ಷತೆಯಿಂದ ಹೊಸ ಸಂಪುಟ ರಚನೆಗೆ ಮುಂದಾಗಿದ್ದಾರೆ. ಬಿಜೆಪಿ ಪ್ರಮುಖ ಮಿತ್ರಪಕ್ಷವಾದ ಶಿವಸೇನೆ ಮತ್ತು ಜೆಡಿಯುಗೆ ತಲಾ ಎರಡು ಸ್ಥಾನಗಳು (ಒಂದು ಸಂಪುಟ ಸ್ಥಾನಮಾನ ಮತ್ತು ಮತ್ತೊಂದು ಸಹಾಯಕ ಸಚಿವರ ಹುದ್ದೆ) ನೀಡಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

ಅದೇ ರೀತಿ ರಾಮ್‍ಲಾಸ್ ಪಾಸ್ವಾನ್ ನೇತೃತ್ವದ ಎಲ್‍ಜೆಪಿ ಮತ್ತು ಶಿರೋಮಣಿ ಅಕಾಲಿ ದಳಕ್ಕೆ ತಲಾ ಒಂದೊಂದು ಸಚಿವ ಸ್ಥಾನ ಲಭಿಸಲಿದೆ ಎಂದು ಹೇಳಲಾಗುತ್ತಿದೆ.

ಕರ್ನಾಟಕದಿಂದ ಶೋಭಾ ಕರಂದ್ಲಾಜೆ, ಪಿ.ಸಿ.ಗದ್ದಿಗೌಡರ್, ರಮೇಶ್ ಜಿಗಜಿಣಗಿ, ಸಂಗಣ್ಣ ಕರಡಿ, ಡಾ. ಉಮೇಶ್ ಜಾಧವ್, ಶಿವಕುಮಾರ್ ಉದಾಸಿ ಸೇರಿ ಪ್ರಮುಖರು ಸಚಿವ ಸ್ಥಾನಕ್ಕಾಗಿ ರೇಸ್‍ನಲ್ಲಿದ್ದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಶೋಭಾ ಕರಂದ್ಲಾಜೆ ಅವರನ್ನು ಆಯ್ಕೆ ಮಾಡಬೇಕೆಂದು ಬಿಜೆಪಿ ವರಿಷ್ಠರಲ್ಲಿ ಮನವಿ ಮಾಡಿದ್ಧಾರೆ. ರಾಜ್ಯ ಬಿಜೆಪಿ ನಾಯಕರು ಸಲ್ಲಿಸಿದ ಪಟ್ಟಿಗಳನ್ನು ಪರಾಮರ್ಶಿಸಿದ ನಂತರ ಮೋದಿ ಮತ್ತು ಶಾ ಅಳೆದು ತೂಗಿ ರಾಜ್ಯದಿಂದ ಅಂತಿಮವಾಗಿ ನಾಲ್ವರನ್ನು ಆಯ್ಕೆ ಮಾಡಿದರೆಂದು ಮೂಲಗಳು ಹೇಳಿವೆ.  ಎನ್‍ಡಿಎ ಮಿತ್ರಪಕ್ಷವಾದ ತಮಿಳುನಾಡಿನ ಎಐಎಡಿಂಎಕೆಯಿಂದ ಒಬ್ಬರು ಮಂತ್ರಿಯಾಗಲಿದ್ಧಾರೆ.

ಯಾರಿಗೂ ಅಸಮಾಧಾನವಾಗದ ರೀತಿಯಲ್ಲಿ ಮೋದಿ ಮತ್ತು ಶಾ ಅತ್ಯಂತ ಜಾಣ್ಮೆಯಿಂದ ಹೆಜ್ಜೆ ಇಟ್ಟಿದ್ದಾರೆ. ಸಚಿವ ಸ್ಥಾನ ವಂಚಿತ ಹಿರಿಯ ಮುಖಂಡರು ಮತ್ತು ಮಿತ್ರ ಪಕ್ಷಗಳ ಇತರ ಧುರೀಣರಿಗೆ ಕೇಂದ್ರದ ವಿವಿಧ ನಿಗಮ-ಮಂಡಳಿಗಳ ಅತ್ಯುನ್ನತ ಹುದ್ದೆಗಳಿಗೆ ನೇಮಕ ಮಾಡುವ ಸಾಧ್ಯತೆ ಇದೆ.

# ಒಟ್ಟು 543 ಸದಸ್ಯ ಬಲ :
ಒಟ್ಟು 543 ಸದಸ್ಯ ಬಲದ ಲೋಕಸಭೆಯಲ್ಲಿ ಶೇ.15ರಷ್ಟು ಅಂದರೆ 81 ಸಚಿವರನ್ನು ನೇಮಕ ಮಾಡಲು ಅವಕಾಶವಿದ್ದು, ಮುಂದೆ ಮಂತ್ರಿಮಂಡಲ ವಿಸ್ತರಣೆಯಾಗುವ ಸಾಧ್ಯತೆ ಇದೆ.

 

Facebook Comments

Sri Raghav

Admin