ಚೀನಾ ನಿದ್ದೆಗೆಡಿಸಿದ ಪ್ರಧಾನಿ ಮೋದಿ ಲೇಹ್ ಭೇಟಿ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜು.3- ಪ್ರಧಾನಿ ನರೇಂದ್ರ ಮೋದಿ ದಿಢೀರನೆ ಲೇಹ್‍ನ ಗಡಿಪ್ರದೇಶಕ್ಕೆ ಭೇಟಿ ಕೊಟ್ಟಿರುವುದು ನೆರೆಯ ಚೀನಾವನ್ನು ನಿದ್ದೆಗೆಡುವಂತೆ ಮಾಡಿದೆ.  ಯಾವುದೇ ಸಣ್ಣ ಸುಳಿವೂ ಬಿಟ್ಟುಕೊಡದೆ ಏಕಾಏಕಿ ದಿಢೀರನೆ ಇಂದು ಮೋದಿ ಲೇಹ್‍ನ ನಿಮೋಗೆ ಭೇಟಿ ನೀಡಿ ಸೈನಿಕರಲ್ಲಿ ಆತ್ಮಸ್ಥೈರ್ಯ ತುಂಬಿರುವುದು ಚೀನಾವನ್ನು ಅಚ್ಚರಿಗೊಳಿಸಿದೆ.

ಪ್ರಧಾನಿ ಮೋದಿ ಅವರ ದಿಢೀರ್ ಭೇಟಿಯಿಂದ ಚೀನಾ ಅಕ್ಷರಶಃ ಕಂಗಾಲಾಗಿದೆ. ಮೋದಿ ಹೀಗೆ ಲೇಹ್‍ನ ಮುಂಚೂಣಿ ಸೇನಾ ನೆಲೆಗಳಿಗೆ ಭೇಟಿ ನೀಡಬಹುದು ಎಂಬ ಸಣ್ಣ ಸುಳಿವು ಹೊಂದಿರದ ಚೀನಾ, ಇದೀಗ ಮೋದಿ ಅವರನ್ನು ನೋಡಿ ದಂಗಾಗಿದೆ.

ಪ್ರಧಾನಿ ಮೋದಿ ಅವರ ಭೇಟಿಯಿಂದ ಸಹಜವಾಗಿ ಭಾರತೀಯ ಸೇನೆಯಲ್ಲಿ ಹೊಸ ಹುಮ್ಮಸ್ಸು ಕಾಣಿಸಿಕೊಂಡಿದೆ. ಆದರೆ ಗಡಿಯಲ್ಲಿ ತನ್ನ ಚಟುವಟಿಕೆಗಳಿಗೆ ಅಡ್ಡಿಯಾಗಲಿದೆ ಎಂಬ ಆತಂಕ ಚೀನಾದಲ್ಲಿ ಮನೆ ಮಾಡಿದೆ.

ಮಿಲಿಟರಿ ಮಾತುಕತೆಗಳಲ್ಲಿ ಸೈನ್ಯ ಹಿಂಪಡೆಯವುದಾಗಿ ಸುಳ್ಳು ಹೇಳುತ್ತಾ ಬಂದಿರುವ ಚೀನಾ, ಇದೀಗ ಪ್ರಧಾನಿ ಮೋದಿ ಅವರ ಲೇಹ್‍ನ ಭೇಟಿ ಬಳಿಕ ಏನು ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಪ್ರಧಾನಿ ಮೋದಿ ಅವರ ಲೇಹ್ ಭೇಟಿಯನ್ನು ಕೊನೆ ಕ್ಷಣದವರೆಗೂ ಅತ್ಯಂತ ಗುಪ್ತವಾಗಿ ಇಡಲಾಗಿತ್ತು. ಈ ಮೊದಲು ಕೇವಲ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ(ಸಿಡಿಎಸ್) ಬಿಪಿನ್ ರಾವತ್ ಮಾತ್ರ ಲಡಾಖ್‍ಗೆ ಭೇಟಿ ನೀಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಬಿಪಿನ್ ರಾವತ್ ಹಾಗೂ ಎಂಎಂ ನರವಣೆ ಅವರ ಜೊತೆಗೆ ಪ್ರಧಾನಿ ಮೋದಿ ಕೂಡ ಲೇಹ್‍ನಲ್ಲಿ ಪ್ರತ್ಯಕ್ಷವಾಗಿದ್ದು ಎಲ್ಲರಿಗೂ ಆಶ್ಚರ್ಯ ತರಿಸಿತ್ತು.

ಪ್ರಧಾನಿ ಮೋದಿ ಭೇಟಿಯನ್ನು ಸುರಕ್ಷತೆಯ ಕಾರಣಕ್ಕೆ ಗೌಪ್ಯವಾಗಿ ಇರಿಸಲಾಗಿತ್ತು ಎಂದು ಸೇನಾ ಮೂಲಗಳು ತಿಳಿಸಿವೆ. ಪ್ರಧಾನಿ ಭೇಟಿಯಿಂದ ಚೀನಾ ಸೇನೆ ಚುರುಕಾಗಬಹುದು ಎಂಬ ಅಂದಾಜಿನ ಹಿನ್ನೆಲೆಯಲ್ಲಿ ಮೋದಿ ಭೇಟಿಯನ್ನು ಕೊನೆಯ ಕ್ಷಣದವರೆಗೂ ಘೋಷಣೆ ಮಾಡಿರಲಿಲ್ಲ.

Facebook Comments