ಇಂದು ಬ್ರಿಕ್ಸ್ ಶೃಂಗಸಭೆ : ಕಾನ್ಫೆರನ್ಸ್ ನಲ್ಲಿ ಮೋದಿ-ಜಿನ್‍ಪಿಂಗ್ ಮುಖಾಮುಖಿ

ಈ ಸುದ್ದಿಯನ್ನು ಶೇರ್ ಮಾಡಿ

ಮಾಸ್ಕೋ/ರಷ್ಯಾ, ನ.17- ರಷ್ಯಾದಲ್ಲಿ ಇಂದಿನಿಂದ ಬ್ರಿಕ್ಸ್ (ಬ್ರೆಜಿಲ್-ರಷ್ಯಾ-ಇಂಡಿಯಾ-ಚೀನಾ-ಸೌತ್ ಆಫ್ರಿಕಾ) ದೇಶಗಳ 12ನೇ ಶೃಂಗಸಭೆ ಆರಂಭವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫೆರನ್ಸ್ ಮೂಲಕ ಭಾಗವಹಿಸಲಿದ್ದಾರೆ.  ಬ್ರಿಕ್ಸ್ ರಾಷ್ಟ್ರಗಳ ಪ್ರಧಾನಮಂತ್ರಿಗಳು ಮತ್ತು ಅಧ್ಯಕ್ಷರು ಈ ಶೃಂಗಸಭೆಯಲ್ಲಿ ಭಾಗವಹಿಸಿದ್ದು, ಮೋದಿ ಮತ್ತು ಚೀನಿ ಅಧ್ಯಕ್ಷ ಕ್ಷಿ ಜಿನ್‍ಪಿಂಗ್ ವಿಡಿಯೋ ಕಾನ್ಫೆರೆನ್ಸ್‍ನಲ್ಲಿ ವೇದಿಕೆ ಹಂಚಿಕೊಳ್ಳಲಿದ್ದಾರೆ.

ಪೂರ್ವ ಲಡಾಖ್‍ನ ಇಂಡೋ-ಚೀನಾ ಗಡಿ ಭಾಗದಲ್ಲಿ ಎರಡೂ ಸೇನೆಗಳು ಜಮಾವಣೆಗೊಂಡು ಸಂಘರ್ಷದ ಉದ್ವಿಗ್ನ ಪರಿಸ್ಥಿತಿ ನೆಲೆಸಿರುವುದರಿಂದ ಇವರಿಬ್ಬರ ಭೇಟಿ ಭಾರೀ ಮಹತ್ವ ಪಡೆದುಕೊಂಡಿದೆ.  ಈ ತಿಂಗಳ ಆರಂಭದಲ್ಲಿ ಮೋದಿ ಮತ್ತು ಜಿನ್‍ಪಿಂಗ್ ಶಾಂಘೈ ಸಹಕಾರ ಸಂಘಟನೆ (ಎಸ್‍ಸಿಒ) ಸಭೆಯಲ್ಲಿ ವಿಡಿಯೋ ಕಾನ್ಫೆರೆನ್ಸ್ ಮೂಲಕ ಭಾಗವಹಿಸಿದ್ದು.

ಆ ಸಂದರ್ಭದಲ್ಲಿ ಮೋದಿ ಅವರು ಇಂಡೋ-ಚೀನಾ ಗಡಿಯಲ್ಲಿ ಸೌಹಾರ್ದಯುತ ವಾತಾವರಣ ಮತ್ತು ಪ್ರಾದೇಶಿಕ ಸಮಗ್ರತೆ ಗೌರವಿಸುವಂತೆ ಚೀನಿ ಅಧ್ಯಕ್ಷರಿಗೆ ತಿಳಿಸಿದ್ದರು. 12ನೇ ಬ್ರಿಕ್ಸ್ ಶೃಂಗಸಭೆಯಲ್ಲಿಯೂ ಪ್ರಧಾನಿ ಅವರು ಚೀನಾಗೆ ಇದೇ ವಿಷಯ ಪುನರ್ ಮನವರಿಕೆ ಮಾಡಿಕೊಡುವ ನಿರೀಕ್ಷೆ ಇದೆ.

ಬ್ರಿಕ್ಸ್ ಶೃಂಗಸಭೆಯಲ್ಲಿ ಭಯೋತ್ಪಾದನೆ, ನಿಗ್ರಹ, ವಾಣಿಜ್ಯ-ವ್ಯಾಪಾರ, ಆರೋಗ್ಯ, ರಕ್ಷಣೆ, ಸಹಕಾರ ಸೇರಿದಂತೆ ಪ್ರಮುಖ ವಿಷಯಗಳು ಚರ್ಚೆಯಾಗಲಿವೆ. ಅಲ್ಲದೇ ಲೋಕಕಂಟಕವಾಗಿರುವ ಕೋವಿಡ್ ನಿಯಂತ್ರಣಕ್ಕಾಗಿ ಕೈಗೊಳ್ಳಬೇಕಾಗಿರುವ ಕ್ರವಗಳ ಕುರಿತ ಮಹತ್ವದ ಸಮಾಲೋಚನೆ ನಡೆಯಲಿದೆ.

Facebook Comments