ರಾಜಕೀಯ ಕಾರ್ಯಕ್ರಮಕ್ಕೆ ಪಾರ್ಕ್ ಬಳಸಿಕೊಂಡ ಶಾಸಕ ರಾಮದಾಸ್

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಸೆ.19- ಸಾರ್ವಜನಿಕರ ಉಪಯೋಗಕ್ಕೆ ಅಭಿವೃದ್ಧಿ ಪಡಿಸಿರುವ ಉದ್ಯಾನವನವನ್ನು ರಾಜಕೀಯ ಕಾರ್ಯಕ್ರಮಕ್ಕೆ ಬಳಸಿಕೊಂಡು ಪಾರ್ಕ್ ಹಾಳುಗೆಡವಿರುವ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೆಪಿಸಿಸಿ ವಕ್ತಾರ ಎಚ್.ಎ ವೆಂಕಟೇಶ್ ಒತ್ತಾಯಿಸಿದ್ದಾರೆ.

ವಿದ್ಯಾರಣ್ಯಪುರಂನಲ್ಲಿರುವ ಪಾರ್ಕ್‍ನಲ್ಲಿ ಮೋದಿ ಯುಗ್ ಉತ್ಸವ ಕಾರ್ಯಕ್ರಮವನ್ನು ಆಯೋಜನೆ ಮಾಡಲು ವೇದಿಕೆ ನಿರ್ಮಿಸಲಾಗಿತ್ತು. ವಸ್ತುಪ್ರದರ್ಶನದ ಮಳಿಗೆಗಳನ್ನು ನಿರ್ಮಿಸಲು ಸಣ್ಣಸಣ್ಣ ಮರಗಳನ್ನು ಕಡಿಯಲಾಗಿದೆ.

ಸಾರ್ವಜನಿಕರ ಓಡಾಟಕ್ಕೆ ಮೀಸಲಿಟ್ಟಿದ್ದ ಜಾಗದಲ್ಲಿ ಕುರ್ಚಿಗಳನ್ನು ಹಾಕಿ ಹಸಿರಿನ ಪ್ರದೇಶವನ್ನು ನಾಶ ಮಾಡಲಾಗಿದೆ. ಪರಿಸರ ಕಾಳಜಿ ಬಗ್ಗೆ ಮಾತನಾಡುವ ಶಾಸಕರಿಗೆ ಇಂತಹ ಕೆಲಸ ಮಾಡಬಾರದೆಂದು ಗೊತ್ತಿಲ್ಲವೇ ಎಂದು ಎಚ್.ಎ ವೆಂಕಟೇಶ್ ಪ್ರಶ್ನಿಸಿದ್ದಾರೆ.

ಪಾರ್ಕ್‍ನಲ್ಲಿ ರಾಜಕೀಯ ಸಮಾರಂಭ, ಕಾರ್ಯಕ್ರಮ ಮಾಡುವಂತಿಲ್ಲ, ಮೋದಿ ಹೆಸರಿನಲ್ಲಿ ಪ್ರಚಾರ ಪಡೆಯಲು ಪಾರ್ಕ್ ಅನ್ನು ಬಳಸಿಕೊಂಡು ಅಲ್ಲಿರುವ ಮರಗಿಡಗಳನ್ನು ನಾಶ ಮಾಡಿದ್ದು ಖಂಡನೀಯ. ಪಾರ್ಕ್ ಅಭಿವೃದ್ಧಿಗೆ ಲಕ್ಷಾಂತರ ರೂ.ಖರ್ಚು ಮಾಡುವ ನಗರಪಾಲಿಕೆ ಅಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿರುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

ಜಿಲ್ಲಾಡಳಿತ ಕೂಡಲೇ ವರದಿ ಪಡೆದುಕೊಂಡು ತೆರವುಗೊಳಿಸಬೇಕು. ಮೋದಿ ಹೆಸರಿನಲ್ಲಿ 20 ದಿನಗಳ ಕಾಲ ಕಾರ್ಯಕ್ರಮ ಆಯೋಜಿಸಿರುವುದರಿಂದ ಅಲ್ಲಿಯ ತನಕ ಪಾರ್ಕ್ ನ ಹಸಿರಿನ ವಾತಾವರಣ ಹಾಳಾಗಲಿದೆ. ಹಾಗಾಗಿ ಹಾಕಿರುವ ವೇದಿಕೆ ಸೇರಿ ಎಲ್ಲವನ್ನು ತೆರವುಗೊಳಿಸಲು ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಎಚ್.ಎ.ವೆಂಕಟೇಶ್ ಒತ್ತಾಯಿಸಿದ್ದಾರೆ.

Facebook Comments

Sri Raghav

Admin