ಮೋದಿ ವಿರುದ್ಧ ಕಾಂಗ್ರೆಸ್ ಗರಂ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.- ಭೀಕರ ಪ್ರಕೃತಿ ವಿಕೋಪವನ್ನು ಈ ಮಟ್ಟಕ್ಕೆ ನಿರ್ಲಕ್ಷಿಸಿರುವ ದೇಶದ ಏಕೈಕ ಪ್ರಧಾನಿ ನರೇಂದ್ರ ಮೋದಿ ಎಂದು ಕಾಂಗ್ರೆಸ್ ಟೀಕಿಸಿದೆ. ಪ್ರಕೃತಿ ವಿಕೋಪ ಪರಿಹಾರ ಕಾರ್ಯಗಳಿಗೆ ನೆರವು ಕೇಳಲು ದೆಹಲಿಗೆ ತೆರಳಿದ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಲು ಪ್ರಧಾನಿ ನರೇಂದ್ರ ಮೋದಿ ಸಮಯ ನೀಡದೆ ಇರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಕಾಂಗ್ರೆಸ್ ಕೂಡ ಇದಕ್ಕೆ ದನಿಗೂಡಿಸಿದ್ದು , ದುರ್ಬಲ ಸಿಎಂ ಯಡಿಯೂರಪ್ಪ ಅವರಿಗೆ ಈ ಬಾರಿಯೂ ಸಮಯ ನೀಡದಿರುವ ಹೊಣೆಗೇಡಿ ಪ್ರಧಾನಿ ಎಂದು ಮೋದಿ ಅವರನ್ನು ಟೀಕಿಸಿದೆ. ಬಿಜೆಪಿಯ 25 ಮಂದಿ ಅಸಮರ್ಥ ಮತ್ತು ಬೇಜವಾಬ್ದಾರಿ ಸಂಸದರಿದ್ದಾರೆ. ಕರ್ನಾಟಕಕ್ಕೆ ಈ ರೀತಿಯ ದ್ರೋಹ ಹಿಂದೆಂದೂ ಆಗಿರಲಿಲ್ಲ ಎಂದು ಕಾಂಗ್ರೆಸ್ ಅಧಿಕೃತ ಟ್ವೀಟರ್ ಖಾತೆಯಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು , ಅತಿವೃಷ್ಟಿ ಪರಿಸ್ಥಿತಿ ಕುರಿತು ಚರ್ಚೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಸಮಯ ನಿರಾಕರಿಸಿರುವುದು ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯ ಎಂದಿದ್ದಾರೆ.  ಸ್ವಾಭಿಮಾನ ಇರುವ ಕನ್ನಡಿಗರು ಇದನ್ನು ಸಹಿಸುವುದಿಲ್ಲ . ಭೇಟಿಗೆ ಸಮಯ ನೀಡದೆ ಮೋದಿ ಅವರು ಯಡಿಯೂರಪ್ಪ ಅವರನ್ನು ಅವಮಾನಿಸಿದ್ದಾರೆ. ಇದು ರಾಜ್ಯ ಬಿಜೆಪಿಗೆ ಮತ್ತು ಕರ್ನಾಟಕದ ಜನತೆಗೆ ಮಾಡಿದ ಅಪಮಾನ ಎಂದು ವಿಶ್ಲೇಷಿಸಿದ್ದಾರೆ.

ರಾಜ್ಯ ಸರ್ಕಾರ ಕೂಡ ನೆರೆ ಸಂತ್ರಸ್ತರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಒಟ್ಟು ನಷ್ಟ 35,160 ಕೋಟಿ ಎಂದು ಸರ್ಕಾರವೇ ಅಂದಾಜು ಮಾಡಿದೆ. ಆದರೆ ಪರಿಹಾರಕ್ಕೆ 1500 ಕೋಟಿ ರೂ.ಗಳನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಇದು ಸಂತ್ರಸ್ತರಿಗೆ ಮಾಡಿರುವ ಘೋರ ಅನ್ಯಾಯ. ಯಡಿಯೂರಪ್ಪ ಅವರೇ ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

Facebook Comments