ಹೊಟೇಲ್ ಮೇಲೆ ಉಗ್ರರ ದಾಳಿ : 8 ಸಾವು, 80 ಜನರ ರಕ್ಷಣೆ

ಈ ಸುದ್ದಿಯನ್ನು ಶೇರ್ ಮಾಡಿ

ಮೊಗಡಿಶು, ಡಿ.11-ಸೋಮಾಲಿಯಾ ರಾಜಧಾನಿಯಲ್ಲಿ ಮತ್ತೆ ಜಿಹಾದ್ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಹೊಟೇಲ್‍ವೊಂದರ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಇಬ್ಬರು ಯೋಧರೂ ಸೇರಿದಂತೆ ಐವರು ಹತರಾಗಿದ್ದಾರೆ.

ನಂತರ ನಡೆದ ಕಾರ್ಯಾಚರಣೆಯಲ್ಲಿ ಐವರು ಭಯೋತ್ಪಾದಕರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ. ಉಗ್ರರ ದಾಳಿಯಲ್ಲಿ ಅನೇಕ ನಾಗರಿಕರು ಗಾಯಗೊಂಡಿದ್ದು, ಕೆಲವರ ಸ್ಥಿತಿ ಶೋಚನೀಯವಾಗಿದೆ. ಉಗ್ರರಿಂದ ದಾಳಿಗೊಳಗಾದ ಮೊಗಡಿಶು ನಗರಿಯ ಎಫ್‍ಐಎಲ್ ತಾರಾ ಹೊಟೇಲ್‍ನಿಂದ 80ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ಇವರಲ್ಲಿ ಸರ್ಕಾರಿ ಅಧಿಕಾರಿಗಳೂ ಸಹ ಇದ್ದಾರೆ.

ಅಲ್ ಶಾಬಾ ಉಗ್ರಗಾಮಿ ಸಂಘಟನೆಯ ಐವರು ಭಯೋತ್ಪಾದಕರು ಹೊಟೇಲ್‍ಗೆ ನುಗ್ಗಿ ಏಕಾಏಕಿ ದಾಳಿ ನಡೆಸಿದರು. ಈ ಆಕ್ರಮಣದಲ್ಲಿ ಇಬ್ಬರು ಯೋಧರು ಮತ್ತು ಮೂವರು ನಾಗರಿಕರು ಹತರಾದರು ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹುತಾತ್ಮರಾದ ಇಬ್ಬರು ಯೋಧರು ಅನೇಕ ಜನರನ್ನು ಹೊಟೇಲ್‍ನಿಂದ ರಕ್ಷಿಸುವ ಕಾರ್ಯಾಚರಣೆಯಲ್ಲಿ ಮೃತಪಟ್ಟರು ಎಂದು ಉನ್ನತಾಧಿಕಾರಿ ವಿಷಾದಿಸಿದ್ದಾರೆ.

Facebook Comments