ಬಿಟ್‌ಕಾಯಿನ್ ಪ್ರಕರಣದಲ್ಲಿ ನನ್ನ ಪಾತ್ರ ಇಲ್ಲ, ಮಾನಸಿಕ ಹಿಂಸೆ ನೀಡಬೇಡಿ : ನಲಪಾಡ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.14- ಬಿಟ್ ಕಾಯಿನ್ ಪ್ರಕರಣದಲ್ಲಿ ನನ್ನ ಪಾತ್ರ ಇಲ್ಲ. ಅನಗತ್ಯವಾಗಿ ನನ್ನ ಹೆಸರನ್ನು ಪ್ರಸ್ತಾಪಿಸಿ ಮಾನಸಿಕ ಕಿರುಕುಳ ನೀಡಬೇಡಿ ಎಂದು ಕಾಂಗ್ರೆಸ್ ಯುವ ಮುಖಂಡ ಮೊಹಮ್ಮದ್ ನಲಪಾಡ್ ಮನವಿ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, 2021ರ ಜನವರಿಯಲ್ಲಿ ಬಿಟ್ ಕಾಯಿನ್ ಪ್ರಕರಣ ಬಯಲಿಗೆ ಬಂದಿದೆ. ನನ್ನ ಪಾತ್ರ ಇದ್ದಿದ್ದರೆ ಇಷ್ಟು ದಿನ ಸುಮ್ಮನೆ ಬಿಡುತ್ತಿದ್ದರಾ. ಪ್ರಭಾವ ಬೀರಿ ತಪ್ಪಿಸಿಕೊಳ್ಳಲು ನಮ್ಮ ಪಕ್ಷ ಅಕಾರದಲ್ಲಿ ಇದ್ಯಾ. ನಮ್ಮ ತಂದೆ ಸಚಿವರಾಗಿದ್ದಾರಾ ಎಂದು ಪ್ರಶ್ನಿಸಿದರು.

ನನ್ನ ಏಳಿಗೆ ಸಹಿಸಲಾಗದ ನಮ್ಮ ಪಕ್ಷದವರು ಅಥವಾ ಹೊರಗಿನ ಯಾರೋ ನನ್ನ ವಿರುದ್ಧ ಪಿತ್ತೂರಿ ಮಾಡುತ್ತಿದ್ದಾರೆ. ಒಂದೇ ಒಂದು ಕೇಸನ್ನ ಎಷ್ಟು ಬಾರಿ ಅನುಭವಿಸಬೇಕು. ನಿಮ್ಮ ಮನೆಯಲ್ಲಿ ಯಾರು ತಪ್ಪು ಮಾಡಲ್ಲವಾ.

ನಿಮ್ಮ ಮಕ್ಕಳು ತಪ್ಪು ಮಾಡಿಲ್ವಾ. ನಿಮ್ಮ ಮಕ್ಕಳು ತಪ್ಪು ಮಾಡಿದಾಗ ಹೀಗೆ ತೊಂದರೆ ಕೊಡುತ್ತಿದ್ರಾ ಎಂದು ಯು.ಬಿ.ಸಿಟಿ ಪಬ್‍ನಲ್ಲಿ ನಡೆದ ಗಲಾಟೆ ಪ್ರಕರಣವನ್ನು ಪರೋಕ್ಷವಾಗಿ ಪ್ರಸ್ತಾಪಿಸಿ ತಮ್ಮ ವಿರೋಧಿಗಳ ಕುರಿತು ವಾಗ್ದಾಳಿ ನಡೆಸಿದರು.

ಎಷ್ಟೋ ಭಾರಿ ನಮ್ಮ ತಂದೆ ಹಾಗೂ ನಮ್ಮ ಕುಟುಂಬವನ್ನು ನೆನಪಿಸಿಕೊಂಡರೆ ತುಂಬಾ ಬೇಸರವಾಗುತ್ತದೆ. ಶಾಸಕನ ಮಗನಲ್ಲದಿದ್ದರೆ ಆ ಗಲಾಟೆ ಪ್ರಕರಣ ಇಷ್ಟು ದೊಡ್ಡದಾಗುತ್ತಿರಲಿಲ್ಲ. ನಾನು ಶಾಸಕನ ಮಗ, ಗಾಜಿನ ಮನೆಯಲ್ಲಿದ್ದೇನೆ, ಹುಷಾರಾಗಿರಬೇಕಿತ್ತು. ತಪ್ಪು ಮಾಡಿಕೊಂಡೆ. ಆ ಒಂದು ತಪ್ಪಿಗೆ ಎಷ್ಟು ಶಿಕ್ಷೆ ಕೊಡುತ್ತಿರಾ.

117 ದಿನ ಜೈಲಿನಲ್ಲಿದ್ದೆ.2020ರಲ್ಲಿ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ನಿಂತು ಗೆದ್ದೆ, ಗೆದ್ದ ಮೇಲೂ ಇದೇ ಪ್ರಕರಣ ನನಗೆ ಸಂಕಟವಾಯಿತು. ಅಲ್ಲಿಂದ ಜನವರಿವರೆಗೂ ತೊಂದರೆ ಮಾಡಿದರು. ಈಗ ಮತ್ತೆ ಅದೇ ಪ್ರಕರಣವನ್ನು ಮುಂದಿಟ್ಟುಕೊಂಡು ಕುತ್ತಿಗೆ ತಂದಿಟ್ಟಿದ್ದಾರೆ . ನಾನು ಒಬ್ಬ ವ್ಯಕ್ತಿಯಲ್ಲವಾ. ನನಗೂ ಕುಟುಂಬ ಇಲ್ಲವಾ, ತಂದೆ ತಾಯಿ, ಅಜ್ಜಿತಾತ ಇಲ್ಲವಾ ಎಂದು ಭಾವನಾತ್ಮಕವಾಗಿ ಮಾತನಾಡಿದ್ದಾರೆ.

ನನ್ನ ತಂದೆ 14 ವರ್ಷ ಶಾಸಕರಾಗಿ, ಅದಕ್ಕೂ ಮೊದಲು ಸಮಾಜ ಸೇವೆಯಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದೆ ಬದುಕಿದ್ದರು. ಒಂದೇ ಒಂದು ಕಪ್ಪು ಚುಕ್ಕೆ ಅಂದರೆ ಇಂತಹ ಒಬ್ಬ ಮಗ ಹುಟ್ಟಿದ್ದಾನೆ ಎಂಬುದು. ನನಗೆ ಆ ಬಗ್ಗೆ ಎಷ್ಟು ಕೊರಗು ಇರಲ್ಲ. ನನಗೆ ಎಷ್ಟು ಕಷ್ಟ ಆಗುತ್ತಿರಲ್ಲ. ಆಯ್ತು ತಪ್ಪಾಯ್ತು. ಮುಂದೆ ಜನರ ನಡುವೆ ಇರೋಣ, ಯುವಕರ ಧ್ವನಿಯಾಗೋಣ ಎಂದು ಕಷ್ಟ ಪಟ್ಟು ಯುವ ಕಾಂಗ್ರೆಸ್‍ಗೆ ಬಂದೇ. ಅಲ್ಲೂ ನಮ್ಮನ್ನು ಸಹಿಸಲಾಗದಿದ್ದರೆ ನಾನೇನು ಮಾಡ್ಲಿ.

ತಪ್ಪನ್ನು ಖಂಡಿಸಿ ನಾನು ಹೋರಾಟ ಮಾಡೇ ಮಾಡುತ್ತೇನೆ. ನಾನು ಆಕ್ರಮಣಕಾರಿ ರಾಜಕೀಯ ಮಾಡುತ್ತಾನೆ. ಬೀದಿಗಿಳಿದು ಹೋರಾಡುತ್ತಾನೆ ಎಂದು ಕೆಲವರಿಗೆ ಭಯ ಇದೆ. ನಾನು ನನ್ನ ಜಾಗದಲ್ಲಿ ಯಾರಿಗೂ ಕೇಡಾಗದಂತೆ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ತಪ್ಪು ಮಾಡಿದ್ದೆ ಸಾಕು, ಒಬ್ಬ ವ್ಯಕ್ತಿಯನ್ನು ಇದಕ್ಕಿಂತ ಜಾಸ್ತಿ ಶಿಕ್ಷಿಸಬೇಡಿ. ರಾಜ್ಯದ ಜನರಲ್ಲಿ ಕೈ ಮುಗಿದು ಕೇಳಿಕೊಳ್ಳುತ್ತೇನೆ. ನನಗೂ ಬದಲಾಗಲು ಒಂದು ಅವಕಾಶ ಕೊಡಿ. ಪದೇ ಪದೇ ಒಂದೇ ತಪ್ಪನ್ನು ಮುಂದಿಟ್ಟುಕೊಂಡು ತೊಂದರೆ ಕೊಡಬೇಡಿ ಎಂದು ಮನವಿ ಮಾಡಿದರು.

Facebook Comments

Sri Raghav

Admin