ಮುಂಗುಸಿ ಕೂದಲಿನಿಂದ ತಯಾರಿಸಿದ್ದ 13,206 ಬ್ರಷ್‍ಗಳ ವಶ..!

ಈ ಸುದ್ದಿಯನ್ನು ಶೇರ್ ಮಾಡಿ

ಥಾಣೆ, ಅ.27-ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರನ್ನು ಬಂಧಿಸಿರುವ ಅರಣ್ಯ ಇಲಾಖೆ ಸಿಬ್ಬಂದಿ, ಮುಂಗುಸಿ ಕೂದಲಿನಿಂದ ತಯಾರಿಸಿದ್ದ 13,206 ಪೈಂಟ್ ಬ್ರಷ್‍ಗಳನ್ನು ವಶಪಡಿಸಿಕೊಂಡಿದ್ದಾರೆ.  ಮಹಮದ್ ಫೈರೋಜ್ ಅಸಾಬುಲ್ ಅಲಾಮ್(32) ಬಂಧಿತ ಆರೋಪಿ.

ವನ್ಯಜೀವಿ ಸಂರಕ್ಷಣೆ ಕಾಯ್ದೆ ಅಡಿ ಮುಂಗುಸಿ ಸಸ್ತನಿಯನ್ನು ಸಂರಕ್ಷಿತ ಪ್ರಾಣಿಯನ್ನಾಗಿ ಪರಿಗಣಿಸಲಾಗಿದೆ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ನರೇಶ್ ಜರ್ಮುರೆ ತಿಳಿಸಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳು ಥಾಣೆ ನಗರದ ಮೀರಾ ರಸ್ತೆಯಲ್ಲಿನ ಮನೆಯೊಂದರ ಮೇಲೆ ದಾಳಿ ನಡೆಸಿ ಫೈರೋಜ್‍ನನ್ನು ಬಂಧಿಸಿದರು.

ವರ್ಣಚಿತ್ರ ಕಲಾವಿದರು ತೈಲ ಮತ್ತು ಆಕ್ರಿಲಿಕ್ ಪೇಂಟಿಂಗ್ ಮತ್ತು ಕಲಾಕೃತಿಗಳನ್ನು ಸೃಷ್ಟಿಸಲು ಮುಂಗುಸಿ ಕೂದಲಿನ ಬ್ರಷ್‍ಗಳನ್ನು ಬಳಸುತ್ತಾರೆ. ಮುಂಗುಸಿ ಕೂದಲಿನಿಂದ ತಯಾರಿಸಿದ ಇಂಥ ಬ್ರಷ್‍ಗಳು ದುಬಾರಿಯಾಗಿದ್ದು, ಭಾರೀ ಬೇಡಿಕೆ ಇದೆ ಎಂದು ಅರಣ್ಯ ಇಲಾಖೆ ಉನ್ನತಾಧಿಕಾರಿ ತಿಳಿಸಿದ್ದಾರೆ.

ಇದೇ ಕಾರಣಕ್ಕಾಗಿ ಮಹಾರಾಷ್ಟ್ರ ಮತ್ತು ಸುತ್ತಮುತ್ತಲ ಅರಣ್ಯ ಪ್ರದೇಶಗಳಲ್ಲಿ ಪ್ರತಿ ವರ್ಷ ಸಹಸ್ರಾರು ಮುಂಗುಸಿಗಳನ್ನು ಕೊಂದು ಅವುಗಳ ಚರ್ಮ ಮತ್ತು ರೋಮಗಳನ್ನು ಅಕ್ರಮವಾಗಿ ಕಳ್ಳ ಸಾಗಣೆ ಮತ್ತು ಮಾರಾಟ ಮಾಡುವ ದಂಧೆ ಅವ್ಯಾಹತವಾಗಿ ಮುಂದುವರಿದಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

Facebook Comments