ಪ್ರಿಯಕರನಿಂದ ಹಲ್ಲೆಗೊಳಗಾಗಿ ಗಂಭೀರ ಗಾಯಗೊಂಡಿದ್ದ ಯುವತಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.12- ಪ್ರಿಯಕರನಿಂದ ಹಲ್ಲೆಗೊಳಗಾಗಿ ಗಂಭೀರ ಗಾಯಗೊಂಡಿದ್ದ ಯುವತಿ ಚಿಕಿತ್ಸೆ ಫಲಿಸದೆ ಇಂದು ಬೆಳಗ್ಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಸಿಡೇದಹಳ್ಳಿಯ ನಿವಾಸಿ ಮೋನಿಕಾ( 20) ಮೃತಪಟ್ಟ ಯುವತಿ.

ಘಟನೆ ವಿವರ: ಮೂರನೆ ವರ್ಷದ ಬಿಇ ವ್ಯಾಸಂಗ ಮಾಡುತ್ತಿದ್ದ ಮೋನಿಕಾಳನ್ನು ಬಬಿತ್ ಎಂಬಾತ ಪ್ರೀತಿಸುತ್ತಿದ್ದನು.ಕಳೆದ ಮೂರ್ನಾಲ್ಕು ತಿಂಗಳಿನಿಂದ ಬಬಿತ್‍ನಿಂದ ದೂರಾಗಿ ಈಕೆ ರಾಹುಲ್ ಜೊತೆ ಓಡಾಡುತ್ತಿದ್ದಳು. ಇದನ್ನು ಗಮನಿಸಿದ್ದ ಬಬಿತ್ ಆಕೆಗೆ ಎಚ್ಚರಿಕೆ ಸಹ ನೀಡಿದ್ದನು ಎನ್ನಲಾಗಿದೆ. ಈತನ ಮಾತನ್ನು ಲೆಕ್ಕಿಸದೆ ರಾಹುಲ್ ಜೊತೆಗೆ ಸ್ನೇಹ ಬೆಳೆಸಿದ್ದರಿಂದ ಬಬಿತ್ ಕೋಪಗೊಂಡಿದ್ದನು.

ಮೋನಿಕಾ ಕಳೆದ ಭಾನುವಾರ ರಾಹುಲ್ ಮನೆಗೆ ಹೋಗಿದ್ದ ವಿಷಯ ತಿಳಿದು ಬಬಿತ್ ಸಹ ಅಲ್ಲಿಗೆ ಹೋಗಿ ಬಾಗಿಲು ತಟ್ಟಿದ್ದಾನೆ. ರಾಹುತ್ ಬಾಗಿಲು ತೆಗೆಯುತ್ತಿದ್ದಂತೆ ಮೋನಿಕಾ ಮೇಲೆ ಹಲ್ಲೆ ನಡೆಸಿ ಇದೆಲ್ಲಾ ನಿನ್ನಂದಾನೇ ಆಗಿದ್ದು ಎಂದು ರಾಹುಲ್ ಸಹ ಮೋನಿಕಾಗೆ ಮೊಬೈಲ್ ಚಾರ್ಜರ್‍ನಿಂದ ಹೊಡೆದಿದ್ದಾನೆ.

ನಂತರ ಮೋನಿಕಾಳನ್ನು ಬೈಕ್‍ನಲ್ಲಿ ಕರೆದುಕೊಂಡು ಬಬಿತ್ ತನ್ನ ಮನೆಗೆ ಬಂದಿದ್ದಾನೆ. ಕೊಠಡಿಯಲ್ಲಿ ಮೋನಿಕಾ ಜೊತೆ ಜಗಳವಾಡುತ್ತಿದ್ದುದನ್ನು ಬಟ್ಟೆ ಒಗೆಯುತ್ತಿದ್ದ ಬಬಿತ್ ತಾಯಿ ಪ್ರಶ್ನಿಸಿದಾಗ ಈಕೆಗೆ ಬುದ್ಧಿ ಕಲಿಸುತ್ತೇನೆ ಎಂದು ಹೇಳಿ ಏಕಾಏಕಿ ಹೆಲ್ಮೆಟ್‍ನಿಂದ ಮೋನಿಕಾ ತಲೆಗೆ ಬಲವಾಗಿ ಹೊಡೆದು ಕಾಲಿನಿಂದ ಒದ್ದಿದ್ದಾನೆ.

ಈ ವೇಳೆ ಮೋನಿಕಾ ಕುಸಿದು ಬಿದ್ದಿದ್ದಾಳೆ. ತಕ್ಷಣ ಬಬಿತ್ ಆಕೆಯ ಪೊಷಕರಿಗೆ ವಿಷಯ ತಿಳಿಸಿದ್ದಾನೆ. ಸ್ಥಳಕ್ಕೆ ಬಂದು ಮಗಳು ಮೋನಿಕಾಳನ್ನು ಸಪ್ತಗಿರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಸೋಲದೇವನಹಳ್ಳಿ ಠಾಣೆ ಪೊಲೀಸರು ಆರೋಪಿ ಬಬಿತ್‍ನನ್ನು ಬಂಧಿಸಿ ರಾಹುಲ್‍ನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಹಲ್ಲೆಯಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೋನಿಕಾ ಗುಣಮುಖವಾಗದೆ ಇಂದು ಬೆಳಗ್ಗೆ ಸಾವನ್ನಪ್ಪಿದ್ದಾರೆ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ಈ ಸಂಜೆಗೆ ತಿಳಿಸಿದ್ದಾರೆ. ಘಟನೆ ಸಂಬಂಧ ಸೋಲದೇವನಹಳ್ಳಿ ಠಾಣೆ ಪೊಲೀಸರು ಬಬಿತ್ ಮತ್ತು ರಾಹುಲ್ ಇಬ್ಬರನ್ನೂ ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments