ಮಂಗ-ಬೆಕ್ಕುಗಳ ಕಾಟದಿಂದ ಬೇಸತ್ತ ಬಿಬಿಎಂಪಿಯಿಂದ ‘ಮಂಕೀ ಪಾರ್ಕ್’ ನಿರ್ಮಾಣ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.27- ನಗರದಲ್ಲಿ ಬೀದಿ ನಾಯಿಗಳ ಹಾವಳಿ ತಪ್ಪಿಸಲು ಹರ ಸಾಹಸ ನಡೆಸುತ್ತಿರುವ ಬಿಬಿಎಂಪಿಗೆ ಇದೀಗ ಮಂಗಗಳು ಮತ್ತು ಬೆಕ್ಕುಗಳ ಕಾಟ ತಲೆ ಬಿಸಿ ಮಾಡಿದೆ. ನಗರದಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಮಂಗಗಳಿವೆ ಎಂಬ ಮಾಹಿತಿ ಬೆನ್ನಲ್ಲೆ ಬಿಬಿಎಂಪಿಯವರು ಮಂಗಗಳ ರಕ್ಷಣೆಗೆ ನಗರದ ಹೊರ ವಲಯದಲ್ಲಿ ಮಂಕೀ ಪಾರ್ಕ್ ನಿರ್ಮಾಣ ಮಾಡಲು ತೀರ್ಮಾನಿಸಿದೆ.

ನಗರದದ ಹೊರ ವಲಯದಲ್ಲಿರುವ ಅಪಾರ್ಟ್‍ಮೆಂಟ್ ನಿವಾಸಿಗಳು ಮಂಗಗಳ ಕಾಟದಿಂದ ರೋಸಿ ಹೋಗಿ. ಮಂಗಗಳಿಂದ ನಮಗೆ ಮುಕ್ತಿ ಕೊಡಿಸಿ ಎಂದು ಕೆಲವು ಅಪಾರ್ಟ್‍ಮೆಂಟ್ ನಿವಾಸಿಗಳು ಹಾಗೂ ಸರ್ಕಾರೇತರ ಸಂಸ್ಥೆಗಳು ಹೈಕೋರ್ಟ್ ಮೆಟ್ಟಿಲೇರಿದ್ದವು. ಮಂಗಗಳ ಹಾವಳಿ ತಪ್ಪಿಸುವಂತೆ ಸಲ್ಲಿಕೆಯಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಬಿಬಿಎಂಪಿಗೆ ಛೀಮಾರಿ ಹಾಕಿ ಮಂಗಗಳ ಹಾವಳಿ ತಪ್ಪಿಸುವಂತೆ ಖಡಕ್ ಸೂಚನೆ ನೀಡಿತ್ತು.

ಹೈಕೋರ್ಟ್ ಆದೇಶದಂತೆ ಮಂಗಗಳ ರಕ್ಷಣೆಗೆ ಮುಂದಾಗಿರುವ ಬಿಬಿಎಂಪಿ ಅಧಿಕಾರಿಗಳು ದನಗಳ ದೊಡ್ಡಿ ಮಾದರಿಯಲ್ಲೇ ನಗರದ ಹೊರ ವಲಯದಲ್ಲಿ ಮಂಕೀ ಪಾರ್ಕ್ ಸ್ಥಾಪನೆ ಮಾಡಲು ಮುಂದಾಗಿದೆ. ಮಂಕೀ ಪಾರ್ಕ್ ಸ್ಥಾಪನೆ ಮಾಡಿ ನಗರದಲ್ಲಿರುವ ಒಂದು ಲಕ್ಷಕ್ಕೂ ಹೆಚ್ಚು ಮಂಗಗಳನ್ನು ಹಿಡಿದು ಮಂಕೀ ಪಾರ್ಕ್‍ಗೆ ಸಾಗಿಸುವುದು ಬಿಬಿಎಂಪಿಗೆ ಸವಾಲಾಗಿದೆ ಎನ್ನುತ್ತಾರೆ ಆರಣ್ಯ ವಿಭಾಗದ ಅಧಿಕಾರಿಗಳು.

ಮಂಗಗಳ ಹಾವಳಿಗೆ ಕಡಿವಾಣ ಹಾಕಲೇಬೇಕು ಎಂದು ನ್ಯಾಯಾಲಯ ಸೂಚನೆ ನೀಡಿರುವುದರಿಂದ ಅದಷ್ಟು ಶೀಘ್ರ ಮಂಕೀ ಪಾರ್ಕ್ ಸ್ಥಾಪನೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ. ಬೆಕ್ಕುಗಳಿಗೂ ಸಂತಾನಹರಣ ಚಿಕಿತ್ಸೆ: ಬೀದಿ ನಾಯಿಗಳು ಮತ್ತು ಮಂಗಗಳ ಸಂತತಿ ಹೆಚ್ಚುತ್ತಿರುವಂತೆ ಬೆಕ್ಕುಗಳ ಸಂತಾನ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಹೀಗಾಗಿ ಬೆಕ್ಕುಗಳಿಗೂ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಬೇಕು ಎಂದು ಪಶುಸಂಗೋಪನಾ ಸಚಿವಾಲಯ ಆದೇಶ ಹೊರಡಿಸಿದೆ ಎಂದು ತಿಳಿದುಬಂದಿದೆ. ಹೀಗಾಗಿ ನಗರದಲ್ಲಿರುವ ಬೆಕ್ಕುಗಳನ್ನು ಹಿಡಿದು ಎಬಿಸಿ ನಡೆಸಲು ಬಿಬಿಎಂಪಿ ಸಿದ್ದತೆ ಮಾಡಿಕೊಂಡಿದೆ. ಬೆಕ್ಕು ಒಂದು ಭಾರಿಗೆ ಮೂರ್ನಾಲ್ಕು ಮರಿಗಳನ್ನು ಹಾಕುವುದರಿಂದ ಬೆಕ್ಕುಗಳ ಸಂತತಿ ವಿಪರೀತವಾಗುತ್ತಿದೆ. ಹೀಗಾಗಿ ಬೆಕ್ಕುಗಳ ಹಾವಳಿ ತಪ್ಪಿಸುವ ಹೊಣೆಯೂ ಬಿಬಿಎಂಪಿ ಹೆಗಲೇರಿದೆ.

ನಾಯಿಗಳನ್ನು ಹಿಡಿದು ಶಸ್ತ್ರಚಿಕಿತ್ಸೆ ಮಾಡಲು ಮುಂದಾಗುವ ಸಿಬ್ಬಂದಿಗಳ ನಾಯಿಪಾಡು ಎಲ್ಲರಿಗೂ ಗೊತ್ತು. ಇನ್ನು ಮನೆಯಿಂದ ಮನೆಗಳಿಗೆ ಹಾರಿ ತಪ್ಪಿಸಿಕೊಳ್ಳುವ ಬೆಕ್ಕುಗಳನ್ನು ಹಿಡಿಯಲು ಬಿಬಿಎಂಪಿ ಸಿಬ್ಬಂದಿಗಳು ಇನ್ನೆಷ್ಟು ಸರ್ಕಸ್ ನಡೆಸುತ್ತಾರೋ ಆ ದೇವರೆ ಬಲ್ಲ.

Facebook Comments