ಅಂಫಾನ್ ಎಫೆಕ್ಟ್ : ರಾಜ್ಯದಲ್ಲಿ ಮುಂಗಾರು ಮಳೆ ವಿಳಂಬ ಸಾಧ್ಯತೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 23- ಅಂಫಾನ್ ಚಂಡಮಾರುತದ ಪರಿಣಾಮದಿಂದ ಈ ವರ್ಷದ ನೈರುತ್ಯ ಮುಂಗಾರು ಮಳೆ ವಿಳಂಬವಾಗುವ ಸಾಧ್ಯತೆಗಳಿವೆ. ಚಂಡ ಮಾರುತದ ಪರಿಣಾಮದಿಂದ ವಾತಾವರಣದಲ್ಲಿ ತೇವಾಂಶ ಕಡಿಮೆಯಾಗಿದ್ದು, ಒಣಹವೆ ಮುಂದುವರೆಯುವ ಲಕ್ಷಣಗಳಿವೆ.

ನೈರುತ್ಯ ಮುಂಗಾರು ಮಳೆ ಕೇರಳಕ್ಕೆ ಜೂನ್ ಒಂದರ ವೇಳೆಗೆ ಪ್ರವೇಶಿಸುವುದು ವಾಡಿಕೆಯಾಗಿದ್ದು, ಈ ಬಾರಿ ಜೂನ್ ಐದರ ವೇಳೆಗೆ ಪ್ರವೇಶ ಮಾಡುವ ನಿರೀಕ್ಷೆ ಇದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೆಶಕ ಡಾ.ಜಿ.ಎಸ್.ಶ್ರೀನಿವಾಸರೆಡ್ಡಿ ಈ ಸಂಜೆಗೆ ತಿಳಿಸಿದರು.

ಚಂಡಮಾರುತದ ಪರಿಣಾಮದಿಂದ ಮುಂಗಾರು ಆಗಮನ ನಾಲ್ಕೈದು ದಿನ ವಿಳಂಬವಾಗಬಹದು ಎಂದು ಅಂದಾಜಿಸಲಾಗಿದೆ. ಜೂನ್ ಮೊದಲ ವಾರದಲ್ಲಿ ರಾಜ್ಯಕ್ಕೆ ಮುಂಗಾರು ಆಗಮನವಾಗುವುದು ವಾಡಿಕೆ.

ಆದರೆ, ಈ ಬಾರಿ ಕೇರಳ ಪ್ರವೇಶಿಸುವುದೇ ವಿಳಂಬವಾಗುವ ಸಂಭವವಿದೆ. ಕೇರಳ ಪ್ರವೇಶಿಸಿದ ಎರಡು-ಮೂರು ದಿನಗಳಲ್ಲಿ ರಾಜ್ಯವನ್ನು ಪ್ರವೇಶಿಸಲಿದೆ ಎಂದು ಹೇಳಿದರು. ಅಂದರೆ ಜೂನ್ ಮೊದಲ ವಾರದ ಕೊನೆ ವೇಳೆಗೆ ಮುಂಗಾರು ರಾಜ್ಯ ಪ್ರವೇಶಿಸಲಿದೆ.

ರಾಜ್ಯದಲ್ಲಿ ಇನ್ನೊಂದು ವಾರ ಒಣ ಹವೆ ಮುಂದುವರೆಯಲಿದೆ. ಆದರೂ ಚದುರಿದಂತೆ ಅಲ್ಲಲ್ಲಿ ಮಳೆ ಮುಂದುವರೆಯಲಿದೆ ಎಂದರು. ಮೇ 28ರ ನಂತರ ಮುಂಗಾರು ಪೂರ್ವ ಮಳೆ ಚುರುಕಾಗುವ ಮುನ್ಸೂಚನೆಗಳಿವೆ.

ನಿನ್ನೆ ರಾತ್ರಿ ರಾಮನಗರ, ಮಂಡ್ಯ, ಹಾಸನ, ಮೈಸೂರು, ಚಾಮರಾಜನಗರ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಚದುರಿದಂತೆ ಮಳೆಯಾಗಿದೆ. ರಾಜ್ಯದ ಒಳನಾಡಿನ ಕೆಲವು ಭಾಗಗಳಲ್ಲಿ ಚದುರಿದಂತೆ ಮಳೆಯಾಗಲಿದೆ ಎಂದು ಹೇಳಿದರು.

Facebook Comments

Sri Raghav

Admin