ದೇವರ ಸ್ವಂತ ನಾಡು ಕೇರಳದಲ್ಲಿ ಸತತ 3ನೇ ವರ್ಷ ಆಗಸ್ಟ್ ಗಂಡಾಂತರ..!

ಈ ಸುದ್ದಿಯನ್ನು ಶೇರ್ ಮಾಡಿ

ಇಡುಕ್ಕಿ, ಆ.11-ಕೇರಳಕ್ಕೆ ಮುಂಗಾರು ಋತು ಗಂಡಾಂತರಕಾರಿಯಾಗಿ ಪರಿಣಮಿಸಿದ್ದು, ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆ, ಪ್ರವಾಹ ಮತ್ತು ಭೂಕುಸಿತಗಳಿಂದ ತತ್ತರಿಸಿ ಸಾವು-ನೋವು ಹೆಚ್ಚಾಗುತ್ತಲೇ ಇವೆ.

ಸತತ ಮೂರನೆ ವರ್ಷ ಆಗಸ್ಟ್ ತಿಂಗಳಲ್ಲಿ ಕೇರಳದ ಅನೇಕ ಜಿಲ್ಲೆಗಳಲ್ಲಿ ಜಲಪ್ರಳಯ ರೌದ್ರಾವತಾರ ತಾಳಿದೆ. ಕುಂಭದ್ರೋಣ ಮಳೆಯಿಂದ ಕೇರಳ ತತ್ತರಿಸಿದ್ದು, ಇಡುಕಿ ಜಿಲ್ಲೆಯ ಮನ್ನಾರ್ ಪರ್ವತ ಸ್ತೋಮದ ಹಲವೆಡೆ ಮೊನ್ನೆ ನಸುಕಿನಲ್ಲಿ ಭೂಕುಸಿತಗಳು ಸಂಭವಿಸಿದ್ದು, ಮೃತರ ಸಂಖ್ಯೆ 52ಕ್ಕೇರಿದೆ.

ಈ ದುರ್ಘಟನೆಯಲ್ಲಿ ಸುಮಾರು 50 ಮಂದಿ ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಗುಡ್ಡ ಮತ್ತು ಭೂಕುಸಿತಗಳಿಂದಾಗಿ ಕಣ್ಣನ್ ದೇವನ್ ಚಹಾ ತೋಟಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಂದೇ ಕುಟುಂಬದ 100ಕ್ಕೂ ಹೆಚ್ಚು ಕಾರ್ಮಿಕರು ಮಣ್ಣಿನ ಆವಶೇಷಗಳಡಿ ಸಿಲುಕಿದರು.

ಈವರೆಗೆ 52 ಶವಗಳನ್ನು ಹೊರ ತೆಗೆಯಲಾಗಿದ್ದು, ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. ಇಡುಕ್ಕಿ ಜಿಲ್ಲೆಯ ರಾಜಮಾಲಾ ಮತ್ತು ಮನ್ನಾರ್ ಪರ್ವತ ಶ್ರೇಣಿಯ ಪೆಟ್ಟಿಮುಡಿಯ ಹಲವೆಡೆ ನಿನ್ನೆ ಕೂಡ ಧಾರಾಕಾರ ಮಳೆಯಿಂದ ಭೂಕುಸಿತಗಳು ಸಂಭವಿಸಿವೆ.

ಕೇರಳದ ಹಲವು ಜಿಲೆಗಳಲ್ಲಿ ವರುಣಾಸುರನ ಆರ್ಭಟ ತೀವ್ರಗೊಂಡಿದೆ. ಇಡುಕ್ಕಿ, ಪಾಲಾಕ್ಕಾಡ್, ಶ್ರಿಶೂರ್, ವಯನಾಡ್, ಕಣ್ಣೂರು, ಗುರುವಾಯೂರು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಭಾರೀ ಮಳೆ, ಭೀಕರ ಪ್ರವಾಹ ಮತ್ತು ಭೂಕುಸಿತಗಳು ಸಂಭವಿಸಿದ್ದು, ಸಾವು-ನೋವು ಮತ್ತು ಭಾರೀ ಹಾನಿಯ ವರದಿಯಾಗಿದೆ. ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆ ಸಮರೋಪಾದಿಯಲ್ಲಿ ಸಾಗಿದೆ.

ಮುಂದಿನ 24 ತಾಸುಗಳಲ್ಲಿ ಕೇರಳದ ವಿವಿಧೆಡೆ ಭಾರೀ ಮಳೆಯಾಗುವ ಬಗ್ಗೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.

ರೆಡ್ ಅಲರ್ಟ್ ಘೋಷಣೆ ಹಿನ್ನೆಲೆಯಲ್ಲಿ ಕೇರಳದ ವಿವಿಧ ಜಿಲ್ಲೆಗಳಲ್ಲಿ ಭಾರೀ ಕಟ್ಟೆಚ್ಚರ ವಹಿಸಲಾಗಿದ್ದು, ಪ್ರಕೃತಿ ವಿಕೋಪ ನಿರ್ವಹಣಾ ಪಡೆಗಳಾದ ಎನ್‍ಡಿಆರ್‍ಎಫ್ ಮತ್ತು ಎಸ್‍ಡಿಆರ್‍ಪಿ ಯೋಧರು ಪರಿಸ್ಥಿತಿ ನಿಭಾಯಿಸಲು ಸಜ್ಜಾಗಿದ್ದಾರೆ.

Facebook Comments

Sri Raghav

Admin