ರಾಜ್ಯಕ್ಕೆ ಮುಂಗಾರು ಪ್ರವೇಶ..! ರೈತರಿಗೆ ಇಲ್ಲಿದೆ ಗುಡ್ ನ್ಯೂಸ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.2-ನೈರುತ್ಯ ಮುಂಗಾರು ನಾಳೆ ಸಂಜೆಯೊಳಗೆ ರಾಜ್ಯ ಪ್ರವೇಶ ಮಾಡುವ ಸಾಧ್ಯತೆಗಳಿವೆ. ನಿನ್ನೆಯೇ ಕೇರಳ ಪ್ರವೇಶ ಮಾಡಿರುವ ಮುಂಗಾರು ಮಳೆ ಈಗಾಗಲೇ ಕರಾವಳಿ ಪ್ರವೇಶ ಮಾಡಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸರೆಡ್ಡಿ ತಿಳಿಸಿದರು.

ಈ ಸಂಜೆಯೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ ಮುಂಗಾರು ಪ್ರವೇಶ ಮಾಡಿರುವುದನ್ನು ಅಧಿಕೃತವಾಗಿ ಪ್ರಕಟ ಮಾಡಬೇಕಿದೆ. ಜೂನ್ ಐದರ ವೇಳೆಗೆ ಮುಂಗಾರು ರಾಜ್ಯ ಪ್ರವೇಶ ಮಾಡಲಿದೆ ಎಂಬ ನಿರೀಕ್ಷೆ ಇತ್ತು.

ನಿನ್ನೆಕೇರಳ ಪ್ರವೇಶ ಮಾಡಿರುವುದರಿಂದ ಒಂದೆರಡು ದಿನದಲ್ಲಿ ರಾಜ್ಯಕ್ಕೆ ಪ್ರವೇಶ ಮಾಡುವ ಸಾಧ್ಯತೆಗಳಿವೆ. ಈಗಾಗಲೇ ರಾಜ್ಯದ ಹಲವು ಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ನಾಳೆಯಿಂದ ಮೂರು ನಾಲ್ಕು ದಿನಗಳ ಕಾಲ ಮಳೆ ಪ್ರಮಾಣ ಇಳಿಕೆಯಾಗುವ ಮುನ್ಸೂಚನೆಗಳಿವೆ ಎಂದು ಹೇಳಿದರು.

ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿ ರುವುದರಿಂದ ಮುಂಗಾರು ಹಂಗಾಮಿನ ಬಿತ್ತನೆ ಸಿದ್ಧತೆಯಲ್ಲಿ ರೈತರು ತೊಡಗಿದ್ದಾರೆ. ಈ ಭಾರಿಯ ಮುಂಗಾರಿನಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆಗಳಿವೆ. ಅರಬ್ಬೀ ಸಮುದ್ರದಲ್ಲಿ ಉಂಟಾಗಿರುವ ವಾಯು ಭಾರ ಕುಸಿತ ಸಂಜೆ ವೇಳೆ ಚಂಡಮಾರುತವಾಗಿ ಮಾರ್ಪಾಡು ಆಗುವ ಸಂಭವವಿದೆ. ಈ ಚಂಡ ಮಾರುತಕ್ಕೆ ನಿಸರ್ಗವೆಂದು ಹೆಸರಿಡಲಾಗಿದೆ.

ಬಂಗಾಳ ಕೊಲ್ಲಿಯಲ್ಲಿ ಇತ್ತೀಚೆಗೆ ಉಂಟಾಗಿದ್ದ ಅಂಫಾನ್ ಚಂಡ ಮಾರುತದಷ್ಟು ತೀಕ್ಷ್ಣವಾಗಿಲ್ಲ. ಅದು ಸೂಪರ್ ಸೈಕ್ಲೋನ್ ಆಗಿತ್ತು. ನಿಸರ್ಗ ಚಂಡಮಾರುತವೂ ತೀವ್ರ ಸ್ವರೂಪದ ಚಂಡಮಾರುತವಾಗುವಷ್ಟರಲ್ಲಿ ದುರ್ಬಲ ಗೊಳ್ಳಲಿದೆ. ರಾಜ್ಯದ ಕರಾವಳಿಯ 300 ಕಿ.ಮೀ. ದೂರದಲ್ಲಿರುವುದರಿಂದ ರಾಜ್ಯಕ್ಕೆ ಹೆಚ್ಚಿನ ತೊಂದರೆ ಆಗುವುದಿಲ್ಲ. ಮಹಾರಾಷ್ಟ್ರಕ್ಕೆ ಚಂಡಮಾರುತದ ಪರಿಣಾಮ ಹೆಚ್ಚಾಗಿರಲಿದೆ ಎಂದರು.

ಚಂಡ ಮಾರುತದ ಪರಿಣಾಮದಿಂದಾಗಿ ರಾಜ್ಯದ ಕರಾವಳಿ, ಉತ್ತರ ಕರ್ನಾಟಕದ ಭಾಗದಲ್ಲಿ ನಾಳೆಯವರೆಗೆ ಹೆಚ್ಚು ಮಳೆಯಾಗುವ ಸಾಧ್ಯತೆಗಳಿವೆ. ಮುಂಗಾರು ಆರಂಭವಾಗಿರುವುದರಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲೂ ಇದೇ ರೀತಿ ಮಳೆ ಮುಂದುವರೆಯಲಿದೆ.

ಬಂಗಾಳ ಕೊಲ್ಲಿಯಲ್ಲೂ ಈ ವಾರಂತ್ಯದಲ್ಲಿ ಮತ್ತೊಂದು ವಾಯುಭಾರ ಕುಸಿತ ಉಂಟಾಗುವ ಸಂಭವವಿದ್ದು, ಆನಂತರ ರಾಜ್ಯದಲ್ಲಿ ಮಳೆ ಮತ್ತಷ್ಟು ಹೆಚ್ಚಾಗುವ ಸಂಭವವಿದೆ ಎಂದು ಹೇಳಿದರು.

ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಾಮರಾಜ ನಗರ, ಬೀದರ್, ಯಾದಗಿರಿ, ರಾಯಚೂರು, ಕಲಬುರಗಿ, ಬಳ್ಳಾರಿ, ಉತ್ತರ ಕನ್ನಡ , ಬಾಗಲಕೋಟೆ, ಶಿವಮೊಗ್ಗ, ಧಾರವಾಡ, ಬೆಳಗಾವಿ, ವಿಜಯಪುರ ಸೇರಿದಂತೆ ರಾಜ್ಯದ ಹಲವೆಡೆ ಉತ್ತಮ ಮಳೆಯಾಗಿದೆ. ಯ ಹವಾ ಮುನ್ಸೂಚನೆ ಪ್ರಕಾರ ಭಾಗಶಃ ಮೋಡ ಕವಿದ ವಾತಾವರಣವಿದ್ದು, ಸಂಜೆ ಹಾಗೂ ರಾತ್ರಿವೇಳೆ ಮಿಂಚು, ಗುಡುಗಿನಿಂದ ಕೂಡಿದ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹೇಳಿದರು.

Facebook Comments