ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಗಾರು ಮಳೆ ಅಬ್ಬರ

ಈ ಸುದ್ದಿಯನ್ನು ಶೇರ್ ಮಾಡಿ

Mansoon--02

ಬೆಂಗಳೂರು, ಜೂ.4-ರಾಜ್ಯಾದ್ಯಂತ ನಿನ್ನೆ ಸಂಜೆಯಿಂದ ಸತತವಾಗಿ ಸುರಿದ ಮಳೆಯಿಂದ ಹಲವು ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಮೈಸೂರು, ಬಳ್ಳಾರಿ, ತುಮಕೂರು, ಶಿವಮೊಗ್ಗ ಜಿಲ್ಲೆಗಳ ಜನತೆ ಭಾರೀ ಮಳೆಗೆ ತತ್ತರಗೊಂಡಿದ್ದಾರೆ. ಬಿಸಿಲು ನಾಡು ಬಳ್ಳಾರಿಯಲ್ಲಿ ನಿನ್ನೆ ಸಂಜೆ ಸುರಿದ ಮಳೆಯಿಂದ ಜನ ಸಂತಸಗೊಂಡಿದ್ದರೆ, ಶಿವಮೊಗ್ಗದಲ್ಲಿ ನಿರಂತರವಾಗಿ ಸುರಿದ ಮಳೆಯಿಂದ ತುಂಗಾ ನದಿ ತುಂಬಿ ಹರಿಯುತ್ತಿದೆ. ಮೈಸೂರಿನಲ್ಲಿ ಹಲವು ಅನಾಹುತಗಳು ಸಂಭವಿಸಿದೆಯಾದರೂ ಯಾವುದೇ ಪ್ರಾಣಾಪಾಯವಾಗಿಲ್ಲ. ತುಮಕೂರು ಗ್ರಾಮಾಂತರ ಪ್ರದೇಶದಲ್ಲಿ ಸುರಿದ ಭಾರೀ ಮಳೆಗೆ ಹಳ್ಳ-ಕೊಳ್ಳ ಕೆರೆಕಟ್ಟೆಗಳು ತುಂಬಿ ಹರಿದಿವೆ.

Mansoon--01

ಹಲವೆಡೆ ಬೆಳೆ ಹಾನಿಗೀಡಾಗಿದೆ. ಬೆಳೆದು ನಿಂತ ಬೆಳೆಗಳು ಭಾರೀ ಮಳೆಯಿಂದ ಹಾನಿಗೊಳಗಾಗಿದ್ದು, ಅಪಾರ ನಷ್ಟ ಸಂಭವಿಸಿದೆ. ನಿನ್ನೆ ಸಂಜೆ 7 ಗಂಟೆಯಿಂದ ರಾತ್ರಿ 11ರವರೆಗೆ ಗುಡುಗು ಮಿಂಚು, ಬಿರುಗಾಳಿಯಿಂದ ಕೂಡಿದ ಭಾರೀ ಮಳೆಯಿಂದ ಭಾರೀ ಗಾತ್ರದ ಮರಗಳು ಧರೆಗುರುಳಿದ್ದು, ಹಲವೆಡೆ ಸಂಚಾರ ಅಸ್ತವ್ಯಸ್ತವಾಗಿವೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಗಂಟೆಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದು, ಸಂಚಾರಕ್ಕೆ ಅಡಚಣೆಯಾಗಿ ಸಾರ್ವಜನಿಕರು ಪರದಾಡುವಂತಾಗಿದೆ. ಬೆಂಗಳೂರು ನಗರದಲ್ಲೂ ಕೂಡ ವರುಣನ ಆರ್ಭಟ ಮುಂದುವರೆದಿದೆ.

Mansoon--05

ಬೆಂಗಳೂರಿನ ಎಚ್‍ಎಸ್‍ಆರ್ ಲೇಔಟ್‍ನಲ್ಲಿ ನಿರ್ಮಾಣ ಹಂತದ ಕಟ್ಟಡವೊಂದು ಕುಸಿದು ಬಿದ್ದು, ನೇಪಾಳ ಮೂಲದ ಗೋಪಾಲ್(52) ಎಂಬುವರು ಮೃತಪಟ್ಟಿದ್ದಾರೆ. ತುಮಕೂರು ಜಿಲ್ಲೆ ಗುಬ್ಬಿ, ಕೊರಟಗೆರೆ ಮುಂತಾದೆಡೆ ಭಾರೀ ಮಳೆ ಸುರಿದಿದೆ. ವರ್ಷಧಾರೆಗೆ ರೈತ ಸಮುದಾಯ ಹರುಷ ವ್ಯಕ್ತಪಡಿಸಿದೆ.
ಗುಬ್ಬಿ ತಾಲೂಕಿನಲ್ಲಿ ಸುರಿದ ಭಾರೀ ಮಳೆಯಿಂದ ರೈಲ್ವೆ ಅಂಡರ್‍ಪಾಸ್ ಜಲಾವೃತಗೊಂಡಿದೆ. ಹತ್ತಾರು ಹಳ್ಳಿಗೆ ಸಂಪರ್ಕ ಕಲ್ಪಿಸುವ ಸೇತುವೆಗಳು ಮುಳುಗಡೆಯಾಗಿವೆ.

Mansoon--04

ಹೇಮಾವತಿ ನಾಲೆ ಮಳೆ ನೀರಿನಿಂದ ತುಂಬಿ ನೀರು ನಾಲೆಯಿಂದ ಹೊರಕ್ಕೆ ಹರಿಯುತ್ತಿದೆ. ರೈಲ್ವೆ ಅಂಡರ್‍ಪಾಸ್‍ಗಳು ಕೆರೆಯಂತಾಗಿವೆ. ಕೆಳಸೇತುವೆ ಬಳಿ ವಾಹನಗಳು ಸಾಲುಗಟ್ಟಿ ನಿಂತಿರುವುದು ಕಂಡು ಬಂತು. ಮನೆ ಸೇರಲು ಜನ ಪರದಾಡುತ್ತಿದ್ದರು.  ತುಮಕೂರು ಜಿಲ್ಲೆಯಾದ್ಯಂತ ಕಳೆದ ರಾತ್ರಿ ವರುಣನ ಅಬ್ಬರಕ್ಕೆ ಹಳ್ಳ-ಕೊಳ್ಳಗಳು ಭರ್ತಿಯಾಗಿದ್ದವು. ಕೊರಟಗೆರೆ, ಮಧುಗಿರಿ, ಗುಬ್ಬಿ ಸೇರಿದಂತೆ ಹಲವೆಡೆ ಮಳೆರಾಯ ಅಬ್ಬರಿಸಿದ ಪರಿಣಾಮ ರಸ್ತೆಯಲ್ಲೆಲ್ಲ ನೀರು ತುಂಬಿಕೊಂಡು ವಾಹನ ಸವಾರರು ಪರದಾಡುವಂತಾಯಿತು.

‘ತಿಪಟೂರಿನ ನಗರಾದ್ಯಂತ ನಿನ್ನೆ ಸುರಿದ ಧಾರಾಕಾರ ಮಳೆಯಿಂದ ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿ ಕಾರು ಶೆಡ್‍ಗಳೆಲ್ಲ ಜಲಾವೃತಗೊಂಡಿದ್ದು ಜನರು ಪರದಾಡುವಂತಾಯಿತು. ರಾಜಕಾಲುವೆಗಳೆಲ್ಲ ತುಂಬಿ ಹರಿಯುತ್ತಿದ್ದವು. ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ.  ವರುಣನ ಆರ್ಭಟಕ್ಕೆ ಬಳ್ಳಾರಿ ತತ್ತರಗೊಂಡಿತ್ತು. ಸತತ ನಾಲ್ಕು ಗಂಟೆ ಸುರಿದ ಮಳೆಗೆ ಬಳ್ಳಾರಿ ನಗರದ ಜನಜೀವನ ಅಸ್ತವ್ಯಸ್ತಗೊಂಡು ವಿದ್ಯುತ್ ಸಂಪರ್ಕ ಕಡಿತವಾಗಿತ್ತು. ಭಾರೀ ಮರಗಳು ಧರೆಗುರುಳಿ ಹಲವು ವಾಹನಗಳು ಜಖಂಗೊಂಡಿದ್ದವು. ಬಳ್ಳಾರಿನಗರ, ಶಿರಗುಪ್ಪ ಮುಂತಾದೆಡೆ ಸುರಿದ ಭಾರೀ ಮಳೆಯಿಂದ ರಸ್ತೆಯೆಲ್ಲೆಲ್ಲ ನೀರು ಹರಿದಿತ್ತು.
ಬಳ್ಳಾರಿಯ ಶಾಸ್ತ್ರೀನಗರದಲ್ಲಿ ಭಾರೀ ಮರವೊಂದು ವಾಹನಗಳ ಮೇಲೆ ಉರುಳಿ ಬಿದ್ದ ಪರಿಣಾಮ ಹಲವು ದ್ವಿಚಕ್ರ ವಾಹನಗಳು ಜಖಂಗೊಂಡಿದ್ದವು.
ಮೈಸೂರಿನಲ್ಲಿ ಶನಿವಾರ ಸುರಿದ ಭಾರೀ ಮಳೆಗೆ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಫೈರೋಜ್ ಖಾನ್ ಎಂಬುವರಿಗೆ ಸೇರಿದ ಎರಡಂತಸ್ತಿನ ಕಟ್ಟಡವೊಂದು ಕುಸಿದು ಬಿದ್ದು, ಮೂರು ಕುಟುಂಬಗಳು ಪ್ರಾಣಾಪಾಯದಿಂದ ಪಾರಾಗಿವೆ.

Mansoon--03

ಮಳೆಯಿಂದ ಸಂಪೂರ್ಣವಾಗಿ ಶಿಥಿಲಗೊಂಡಿದ್ದ ಮನೆ ಒಂದೆರಡು ಕಡೆ ಬಿರುಕು ಬಿಟ್ಟಿತ್ತು. ಇದನ್ನು ಗಮನಿಸಿದ ನಿವಾಸಿಗಳು ಕೂಡಲೇ ಮನೆಯಿಂದ ಹೊರಬಂದಿದ್ದಾರೆ. ಉದಯಗಿರಿಯ ಗೌಸಿಯಾನಗರದ ಎ ಬ್ಲಾಕ್‍ನಲ್ಲಿರುವ ಈ ಕಟ್ಟಡ ಕುಸಿತದಿಂದ ಲಕ್ಷಾಂತರ ಮೌಲ್ಯದ ಪೀಠೋಪಕರಣಗಳು ನಾಶವಾಗಿವೆ.
ಮೈಸೂರು ಜಿಲ್ಲೆಯ ಹಲವೆಡೆ ನಿನ್ನೆ ಕೂಡ ವರುಣನ ಆರ್ಭಟ ಮುಂದುವರೆದಿತ್ತು. ನಿನ್ನೆ ಸಂಜೆ ಸುರಿದ ಮಳೆಗೆ ರಸ್ತೆಗಳೆಲ್ಲ ಜಲಾವೃತಗೊಂಡಿದ್ದು, ಹಲವೆಡೆ ವಿದ್ಯುತ್‍ಸಂಪರ್ಕ ಕಡಿತಗೊಂಡಿತ್ತು. ಸಂಚಾರ ದಟ್ಟಣೆಯಿಂದ ಸಾರ್ವಜನಿಕರು ಪರದಾಡುವಂತಾಗಿತ್ತು. ಹುಣಸೂರು ತಾಲೂಕಿನಾದ್ಯಂತ ಸುರಿದ ಭಾರೀ ಮಳೆಯಿಂದಾಗಿ ಹೊಲ-ಗದ್ದೆಗಳೆಲ್ಲ ಜಲಾವೃತಗೊಂಡಿದ್ದವು.

Bellary 1

Bellary 2

ಕಟ್ಟೆಚ್ಚರಕ್ಕೆ ಸೂಚನೆ:
ರಾಜ್ಯಾದ್ಯಂತ ಮುಂಗಾರು ಮಳೆ ತೀವ್ರಗೊಂಡಿದ್ದು, ಹಲವೆಡೆ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕರಾವಳಿ ಪ್ರದೇಶ ಹಾಗೂ ಮಲೆನಾಡು, ಹೆಚ್ಚು ಮಳೆ ಬೀಳುತ್ತಿರುವ ತುಮಕೂರು, ಬಳ್ಳಾರಿ, ಉತ್ತರಕರ್ನಾಟಕ, ಶಿವಮೊಗ್ಗ ಭಾಗಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಲಾಗಿದೆ.  ನದಿಗಳು ಅಪಾಯದ ಮಟ್ಟ ತಲುಪುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ನದಿ ಪಾತ್ರದ ಜನರು ಎಚ್ಚರದಿಂದಿರುವಂತೆ ತಿಳಿಸಲಾಗಿದೆ.

Bellary 3

Facebook Comments

Sri Raghav

Admin