ಕೈ ಕೈ ಮಿಲಾಯಿಸುವ ಹಂತಕ್ಕೆ ಸಚಿವರು-ಶಾಸಕರ ನಡುವೆ ಚಕಮಕಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.21- ಸಚಿವ ಮತ್ತು ಆಡಳಿತ ಪಕ್ಷದ ಶಾಸಕರ ನಡುವೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಘಟನೆಗೆ ವಿಧಾನಸೌಧ ಸಾಕ್ಷಿಯಾಯಿತು. ತೋಟಗಾರಿಕಾ ಸಚಿವ ನಾರಾಯಣಗೌಡ ಮತ್ತು ಕಡೂರಿನ ಬಿಜೆಪಿ ಶಾಸಕ ಬೆಳ್ಳಿ ಪ್ರಕಾಶ್ ನಡುವೆ ನಡೆದ ಮಾತಿನ ಚಕಮಕಿಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಸತೀಶ್ ಜಾರಕಿಹೊಳಿ ಮತ್ತಿತರರು ಮೂಕಸಾಕ್ಷಿಯಾದರು.

ವಿಧಾನಸೌಧದ ಕ್ಯಾಂಟಿನ್‍ಗೆ ತೋಟಗಾರಿಕಾ ಸಚಿವ ನಾರಾಯಣಗೌಡ ಅವರು ಆಗಮಿಸಿದಾಗ ಅಲ್ಲಿದ್ದ ಶಾಸಕ ಬೆಳ್ಳಿ ಪ್ರಕಾಶ್ ಅವರು ಕೆಲವು ಫೈಲ್‍ಗಳನ್ನು ನೀಡಿ ನನ್ನ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿಕೊಂಡರು. ಶಾಸಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ನಾರಾಯಣಗೌಡ ಅವರು ನಿಮ್ಮ ಕೆಲಸ ಮಾಡಿಕೊಡುವುದಾಗಿ ಭರವಸೆ ನೀಡಿದರು.

ಆದರೆ, ಸಚಿವರ ಭರವಸೆಯಿಂದ ಸಮಾಧಾನಗೊಳ್ಳದ ಬೆಳ್ಳಿ ಪ್ರಕಾಶ್ ನಾನು ಈಗಾಗಲೇ ತಮ್ಮ ಕಚೇರಿಗೆ ಸಾಕಷ್ಟು ಬಾರಿ ಮನವಿ ಪತ್ರ ನೀಡಿದ್ದೇನೆ. ಸರ್ಕಾರಕ್ಕೂ ಮನವಿ ಮಾಡಿಕೊಂಡಿದ್ದೇನೆ. ಆದರೂ ಆಡಳಿತ ಪಕ್ಷದ ಸದಸ್ಯನಾದ ನನ್ನ ಮಾತಿಗೆ ಕವಡೆ ಕಾಸಿನ ಕಿಮ್ಮತ್ತೂ ನೀಡುತ್ತಿಲ್ಲ ಎಂದು ಏಕವಚನದಲ್ಲಿ ಸಚಿವರ ವಿರುದ್ಧ ಹರಿಹಾಯ್ದರು.

ಶಾಸಕರ ಈ ಏಕಾಏಕಿ ವರ್ತನೆಯಿಂದ ತಬ್ಬಿಬ್ಬಾದ ನಾರಾಯಣಗೌಡರು ಸಮಾಧಾನದಿಂದಲೇ ಉತ್ತರ ನೀಡಲು ಮುಂದಾದರೂ ಬೆಳ್ಳಿ ಪ್ರಕಾಶ್ ಸಮಾಧಾನಗೊಳ್ಳದ ಹಿನ್ನೆಲೆಯಲ್ಲಿ ಸಚಿವರು, ಶಾಸಕರ ವಿರುದ್ಧ ತಿರುಗಿಬಿದ್ದರು. ಸಚಿವರು ಮತ್ತು ಆಡಳಿತ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ತೀವ್ರಗೊಂಡು ಒಂದು ಹಂತದಲ್ಲಿ ಕೈ ಕೈ ಮಿಲಾಯಿಸುವ ಹಂತಕ್ಕೂ ತಲುಪಿದಾಗ ಅಲ್ಲೇ ಇದ್ದ ಕೆಲ ಶಾಸಕರು ಇಬ್ಬರನ್ನೂ ಸಮಾಧಾನಪಡಿಸಿದರು.

ಸಚಿವರು ಮತ್ತು ಶಾಸಕರ ನಡುವೆ ಮಾತಿನ ಚಕಮಕಿ ನಡೆಯುತ್ತಿದ್ದ ಸ್ಥಳದಲ್ಲೇ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಸತೀಶ್ ಜಾರಕಿಹೊಳಿ ಮತ್ತಿತರ ಕೆಲ ಕಾಂಗ್ರೆಸ್ ಶಾಸಕರು ಘಟನೆಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ಸುಮ್ಮನಿದ್ದರು.  ಅಂತಿಮವಾಗಿ ಶಾಸಕ ಅನ್ನದಾನಿ ಅವರು ಸಚಿವರು ಮತ್ತು ಶಾಸಕರ ನಡುವಿನ ಜಗಳವನ್ನು ಬಿಡಿಸುವಲ್ಲಿ ಯಶಸ್ವಿಯಾದರು.

Facebook Comments