ಕೇಂದ್ರ ಸಚಿವ ಸುರೇಶ ಅಂಗಡಿ ನಿಧನಕ್ಕೆ ವಿಧಾನಸಭೆಯಲ್ಲಿ ಸಂತಾಪ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.24- ಕೇಂದ್ರದ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸುರೇಶ ಅಂಗಡಿ ಅವರ ನಿಧನಕ್ಕೆ ವಿಧಾನಸಭೆಯಲ್ಲಿಂದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಇಂದು ಬೆಳಗ್ಗೆ ವಿಧಾನಸಭೆ ಸಮಾವೇಶಗೊಂಡ ಕೂಡಲೇ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಂತಾಪ ಸೂಚನಾ ನಿರ್ಣಯವನ್ನು ಮಂಡಿಸಿದರು.

ನಿನ್ನೆ ಸುರೇಶ ಅಂಗಡಿ ಅವರು ನಿಧನರಾಗಿದ್ದಾರೆ ಎಂದು ವಿಷಾದದಿಂದ ಸದನಕ್ಕೆ ತಿಳಿಸಿದರು. 1955, ಜೂ.1ರಂದು ಬೆಳಗಾವಿ ಜಿಲ್ಲೆಯ ಕೆ.ಕೊಪ್ಪ ಗ್ರಾಮದಲ್ಲಿ ಜನಿಸಿದ್ದರು. ಬಿಕಾಂ ಮತ್ತು ಎಲ್‍ಎಲ್‍ಬಿ ಪದವೀಧರರಾಗಿದ್ದರು. ವೃತ್ತಿಯಲ್ಲಿ ಉದ್ಯಮಿಯಾಗಿದ್ದು, ಸಾಮಾಜಿಕ ಸೇವೆಗಳಲ್ಲಿ ಆಸಕ್ತಿ ಹೊಂದಿದ್ದರು.

2004ರಲ್ಲಿ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾದರು. ನಂತರ 2009 ಮತ್ತು 2014 ಹಾಗೂ 2019ರಲ್ಲಿ ಸತತವಾಗಿ ನಾಲ್ಕನೇ ಬಾರಿ ಲೋಕಸಭೆಗೆ ಚುನಾಯಿತರಾಗಿದ್ದರು. ಸಂಸತ್‍ನ ವಿವಿಧ ಸ್ಥಾಯಿ ಸಮಿತಿಗಳಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದ್ದ ಅವರು 2019ರಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವರಾಗಿ ಬೆಳಗಾವಿ-ಬೆಂಗಳೂರು ಸೂಪರ್ ಫಾಸ್ಟ್ ರೈಲು , ಬೆಳಗಾವಿ- ಕಿತ್ತೂರು-ಧಾರವಾಡ ರೈಲು ಮಾರ್ಗಕ್ಕೆ ಅನುಮೋದನೆ ಸೇರಿದಂತೆ ರಾಜ್ಯಕ್ಕೆ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ.

ಉತ್ತರ ಕರ್ನಾಟಕದಲ್ಲಿ ನೆನೆಗುದಿಗೆ ಬಿದ್ದಿದ್ದ ಹಲವು ರೈಲ್ವೆ ಯೋಜನೆಗಳಿಗೆ ಜೀವ ತುಂಬುವ ಗುರಿ ಹೊಂದಿದ್ದರು. ಬಡ ಜನರ ಶಿಕ್ಷಣದ ಕುರಿತು ವಿಶೇಷ ಕಾಳಜಿ ಹೊಂದಿದ್ದ ಅಂಗಡಿ ಅವರು ನರ್ಸರಿಯಿಂದ ಇಂಜಿನಿಯರ್‍ವರೆಗೂ ಅತ್ಯಾಧುನಿಕ ಅನುಕೂಲವಿರುವ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಜನರಿಂದಲೇ ಬಂದಿದ್ದೇನೆ. ಯಾವಾಗಲೂ ಜನರಿಗಾಗಿಯೇ ದುಡಿಯುತ್ತೇನೆ ಎಂಬುದು ಅವರ ಧ್ಯೇಯವಾಗಿತ್ತು ಎಂದು ಸಭಾಧ್ಯಕ್ಷರು ಇದೇ ವೇಳೆ ಸ್ಮರಿಸಿದರು.

ಸಭಾಧ್ಯಕ್ಷರು ಮಂಡಿಸಿದ ಸಂತಾಪ ಸೂಚನಾ ನಿರ್ಣಯವನ್ನು ಬೆಂಬಲಿಸಿದ ಮಾತನಾಡಿದ ಸಚಿವ ಜೆ.ಸಿ.ಮಾಧುಸ್ವಾಮಿ ಸುರೇಶ್ ಅಂಗಡಿ ಅವರು ನಿಧನರಾಗಿರುವುದು ದುಃಖದ ಸಂಗತಿ. ಕೊರೊನಾಗೆ ತುತ್ತಾಗಿದ್ದ ಅವರು ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ನಿಧನರಾಗಿರುವುದು ತುಂಬಲಾರದ ನಷ್ಟ ಎಂದರು. ಶಿವಮೊಗ್ಗ ಸೇರಿದಂತೆ ರಾಜ್ಯದ ನಾಲ್ಕೈದು ಕಡೆ ಇತ್ತೀಚೆಗೆ ಮೇಲ್ಸೇತುವೆಗೂ ಅನುಮೋದನೆ ಕೊಟ್ಟಿದ್ದರು. ಬೆಳಗಾವಿ ಭಾಗದಲ್ಲಿ ರಾಜಕೀಯವಾಗಿ ಪಕ್ಷಕ್ಕೆ ಶಕ್ತಿ ತುಂಬಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಾರೈಸಿದರು.

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ರಾಷ್ಟ್ರ ಮಟ್ಟದ ಏಮ್ಸ್ ಅಂತಹ ಸಂಸ್ಥೆಯಲ್ಲೇ ಸುರೇಶ್ ಅಂಗಡಿ ಅವರು ಗುಣಮುಖವಾಗಲಿಲ್ಲ ಎಂದರೆ ಬೇರೆಯವರ ಪಾಡೇನು. ಅವರಿಗೆ ಅತ್ಯುನ್ನತ ಮಟ್ಟದ ಚಿಕಿತ್ಸೆಗೆ ಅವಕಾಶವಿತ್ತು. ಶಾಸಕ ನಾರಾಯಣ ರಾವ್ ಅವರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ ಎಂದರು.

ಸದನದ ಹಲವು ಸದಸ್ಯರು ಕೊರೊನಾದಿಂದ ಗುಣಮುಖರಾಗಿ ಬಂದಿದ್ದಾರೆ. ಮತ್ತೆ ಬರುವುದಿಲ್ಲ ಎಂಬುದು ಖಾತ್ರಿ ಇಲ್ಲ. ಎಲ್ಲರೂ ಎಚ್ಚರಿಕೆ ವಹಿಸುವುದು ಅತ್ಯಗತ್ಯ ಎಂದರು.
ಉಪಾಧ್ಯಕ್ಷ ಆನಂದ ಚಂದ್ರಶೇಖರ ಮಹಾಮನಿ ಮಾತನಾಡಿ, ಸುರೇಶ್ ಅಂಗಡಿ ಅವರು ಬೆಳಗಾವಿ-ಕಿತ್ತೂರು-ಧಾರವಾಡ ರೈಲು ಮಾರ್ಗ ಆರಂಭಕ್ಕೆ ಕಾರಣರಾದವರು. ಬೆಂಗಳೂರು-ಬೆಳಗಾವಿ ರೈಲ್ವೆಯನ್ನು ಪ್ರಾರಂಭಿಸಿದರು ಎಂದು ಗುಣಗಾನ ಮಾಡಿದರು.

ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕ ಬಂಡೆಪ್ಪ ಕಾಶೆಂಪುರ್, ಮಾಜಿ ಸಚಿವ ಆರ್.ವಿ.ದೇಶಪಾಂಡೆ ಸೇರಿದಂತೆ ಸದನದ ಹಲವು ಸದಸ್ಯರು ಮೃತರ ಗುಣಗಾನ ಮಾಡಿ ಸಂತಾಪ ಸೂಚಿಸಿದರು. ಮೃತರ ಗೌರವಾರ್ಥ ಸದನದಲ್ಲಿ ಶೋಕಾಚರಣೆ ಮಾಡಲಾಯಿತು.

Facebook Comments