ಭಾರತದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ವಿಭಿನ್ನ ರೀತಿಯ ಸಂಸತ್ ಅಧಿವೇಶನ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಸೆ.13-ಕಿಲ್ಲರ್ ಕೋವಿಡ್-19 ವೈರಸ್ ಪಿಡುಗಿನಿಂದಾಗಿ ಭಾರತದ ಇತಿಹಾಸದಲ್ಲೇ ಇದೇ ಪ್ರಪ್ರಥಮ ಬಾರಿಗೆ ವಿಭಿನ್ನ ರೀತಿಯಲ್ಲಿ ಸಂಸತ್ ಅಧಿವೇಶನಕ್ಕೆ ಕ್ಷಣಗಣನೆ ಆರಂಭವಾಗಿದೆ.

ನಾಳೆಯಿಂದ 18 ದಿನಗಳ ಕಾಲ ನಡೆಯುವ ಪಾರ್ಲಿಮೆಂಟ್ ಸೆಷನ್‍ನಲ್ಲಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಸಂರಕ್ಷಣೆಗೆ ಸುಗ್ರೀವಾಜ್ಞಾ ಸೇರಿದಂತೆ 23 ಪ್ರಮುಖ ಮಸೂದೆಗಳಿಗೆ ಅಂಗೀಕಾರ ದೊರೆಯುವ ನಿರೀಕ್ಷೆ ಇದೆ. ಇದೇ ವೇಳೆ, ಕೊರೊನಾ ಪಿಡುಗು ನಿಯಂತ್ರಣ, ಲಾಕ್‍ಡೌನ್‍ನಿಂದ ದೇಶದ ಜನರ ಎದುರಿಸಿದ ಕಷ್ಟ.

ಆರ್ಥಿಕ ಬಿಕ್ಕಟ್ಟು, ನಿರುದ್ಯೋಗ ಸಮಸ್ಯೆ, ದೇಶದ ವಿವಿಧೆಡೆ ನಡೆದ ಹಿಂಸಾಚಾರ, ವೈದ್ಯರ ಮೇಲಿನ ಹಲ್ಲೆ, ಲಡಾಖ್‍ನಲ್ಲಿ ಚೀನಾ ಜೊತೆ ಗಡಿ ಸಂಘರ್ಷ, ಪಾಕಿಸ್ತಾನ ಸೇನೆ ಪುಂಡಾಟ, ಭಯೋತ್ಪಾದಕರ ಉಪಟಳ ಸೇರಿದಂತೆ ಮೊದಲಾದ ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಿ ಕೇಂದ್ರ ಸರ್ಕಾರದ ಮೇಲೆ ದಾಳಿ ನಡೆಸಲು ಪ್ರತಿಪಕ್ಷಗಳು ಸಜ್ಜಾಗಿವೆ.

ದೇಶಾದ್ಯಂತ ವೈರಾಣು ಹಾವಳಿ ತೀವ್ರವಾಗಿರುವುದರಿಂದ ಸಂಸತ್ ಅಧಿವೇಶನದ ಲೋಕಸಭೆ ಮತ್ತು ರಾಜ್ಯಸಭೆ-ಈ ಉಭಯ ಸದನಗಳಲ್ಲಿ ಅತ್ಯಂತ ಜಾಗ್ರತೆಯಿಂದ ಕಲಾಪಗಳನ್ನು ನಡೆಸಲು ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದೇ ಕಾರಣಕ್ಕಾಗಿ ಸಂಸತ್ ಸದಸ್ಯರ ಆಸನ ವ್ಯವಸ್ಥೆ, ಕಲಾಪದ ವಿಧಾನಗಳನ್ನು ಸಂಪೂರ್ಣ ಬದಲಾಯಿಸಲಾಗಿದೆ.

ಸ್ವಾತಂತ್ರ್ಯದ ನಂತರ ಸಂಸತ್ತಿನಲ್ಲಿ ಈ ರೀತಿಯ ಭಿನ್ನ-ವಿಭಿನ್ನ ಸ್ವರೂಪದ ಬದಲಾವಣೆ ಮಾಡಿರುವುದು ಇದೇ ಮೊದಲು. ಹೀಗಾಗಿ ಕೊರೊನಾ ಕರಿ ನೆರಳಿನ ನಡುವೆ ನಾಳೆಯಿಂದ ಆರಂಭವಾಗಲಿರುವ ಸಂಸತ್ ಅಧಿವೇಶನ ಸಹಜವಾಗಿಯೇ ಕುತೂಹಲ ಕೆರಳಿಸಿದೆ.  ಪ್ರಪ್ರಥಮ ಬಾರಿಗೆ ಲೋಕಸಭೆ ಮತ್ತು ರಾಜ್ಯಸಭೆಯ ಕಲಾಪದ ವಿಧಾನವನ್ನೇ ಬದಲು ಮಾಡಲಾಗಿದೆ.

ಉಭಯ ಸದನಗಳನ್ನು ಒಟ್ಟಿಗೆ ಸೇರಿಸಿ ಒಂದೇ ಸದನವನ್ನಾಗಿ ಪರಿವರ್ತಿಸಲಾಗಿದ್ದು, ಒಮ್ಮೆ ಕಳಮನೆಯ (ಲೋಕಸಭೆ) ಕಲಾಪ ನಡೆದರೆ, ಇನ್ನೊಮ್ಮೆ ಮೇಲ್ಮನೆ (ರಾಜ್ಯಸಭೆ) ಅಧಿವೇಶನ ಜರುಗಲಿದೆ. ಉಭಯ ಸದನಗಳ ಸಭಾಂಗಣಗಳನ್ನು ಎರಡೂ ಸದನಗಳ ಕಲಾಪ ನಡೆಯಲು ಸಾಧ್ಯವಾಗುವಂತೆ ಮಾರ್ಪಾಡು ಮಾಡಲಾಗಿದೆ. ಸಂಸದರ ಆಸನಗಳ ನಡುವೆ ಅಂತರ ಕಾಯ್ಸುಕೊಂಡು ಸೋಷಿಯಲ್ ಡಿಸ್ಟೆನ್ಸ್‍ಗೆ ಅದ್ಯತೆ ನೀಡಲಾಗಿದೆ. ಸಂಸದರ ಆಸನಗಳ ಮಧ್ಯೆ ಸುರಕ್ಷತೆಗಾಗಿ ಫೈಬರ್ ಶೀಟ್‍ಗಳನ್ನು ಅಳವಡಿಸಲಾಗಿದೆ.

ಕೊರೊನಾ ಪಿಡುಗಿನ ಮಧ್ಯೆ ನಡೆಯಲಿರುವ ಪಾರ್ಲಿಮೆಂಟ್ ಅಧಿವೇಶನದ ಮೊದಲ ದಿನವಾದ ನಾಳೆ ಬೆಳಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆವರೆಗೆ ಲೋಕಸಭೆ ಕಲಾಪ ಮತ್ತು ಮಧ್ಯಾಹ್ನ 3ರಿಂದ ರಾತ್ರಿ 7 ಗಂಟೆವೆರೆಗೆ ರಾಜ್ಯಸಭೆ ಅಧಿವೇಶನ ನಡೆಯಲಿದೆ. ಮಂಗಳವಾರ ಬೆಳಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆವರೆಗೆ ರಾಜ್ಯಸಭೆ ಕಲಾಪ ನಡೆಯಲಿದ್ದು, ತದನಂತರ ಮಧ್ಯಾಹ್ನ 3ರಿಂದ ರಾತ್ರಿ 7ರವರೆಗೆ ಲೋಕಸಭೆ ಸಮಾವೇಶಗೊಳ್ಳಲಿದೆ.

ಕಲಾಪದ ಅವಧಿ ಮತ್ತು ವಿಧಾನಗಳಲ್ಲಿ ಭಾರೀ ಬದಲಾವಣೆಗಳನ್ನು ಮಾಡಿರುವುದರಿಂದ ಪ್ರಶ್ನೋತ್ತರ ಅವಧಿಯಲ್ಲಿ ಕೇವಲ 30 ನಿಮಿಷಗಳಿಗೆ ಮಾಥ್ರ ಸೀಮಿತಗೊಳಿಸಲಾಗಿದೆ. ಲೋಕಸಭೆಯ ಸಭಾಂಗಣದಲ್ಲಿ 257 ಮತ್ತು ವೀಕ್ಷಕರ ಗ್ಯಾಲರಿಯಲ್ಲಿ 172 ಸಂಸದರಿಗೆ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ ರಾಜ್ಯಸಭೆಯ ಹಾಲ್‍ನಲ್ಲಿ 60 ಸದಸ್ಯರು ಮತ್ತು ಗ್ಯಾಲರಿಯಲ್ಲಿ 51 ಮೇಲ್ಮನೆ ಮೆಂಬರ್‍ಗಳಿಗೆ ಸೀಟ್‍ಗಳನ್ನು ಕಲ್ಪಿಸಲಾಗಿದೆ ಎಂದು ಲೋಕಸಭಾಧ್ಯಕ್ಷ ಓಂ ಬಿರ್ಲಾ ತಿಳಿಸಿದ್ದಾರೆ.

ಒಂದಾಂದ ಮೇಲೆ ಒಂದರಂತೆ ಲೋಕಸಭೆ ಮತ್ತು ರಾಜ್ಯಸಭೆ ಕಲಾಪಗಳು ನಡೆಯಲಿರುವುದರಿಂದ ಎರಡೂ ಸದನಗಳಲ್ಲೂ ಇನ್ನೊಂದು ಸಭಾಂಗಣದ ಕಲಾಪ ವೀಕ್ಷಿಸಲು ಸಾಧ್ಯವಾಗುವಂತೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಬೃಹತ್ ಪರದೆಯನ್ನು ಅಳವಡಿಸಲಾಗಿದೆ.

ಧ್ವನಿವರ್ಧಕವನ್ನು ಸಜ್ಜುಗೊಳಿಸಲಾಗಿದೆ ಸ್ಪೀಕರ್ ಬಿರ್ಲಾ ವಿವರಿಸಿದ್ದಾರೆ. ನಿಯಮ ಕಟ್ಟುನಿಟ್ಟು: ಕೋವಿಡ್ ಪಿಡುಗಿನ ನಡುವೆಯೇ ನಡೆಯುತ್ತಿರುವ ಸಂಸತ್ತಿನ ಅಧಿವೇಶನದಲ್ಲಿ ನಿಯಮಗಳನ್ನು ಪಾಲಿಸುವುದನ್ನು ಸಂಸದರು ಮತ್ತು ಉಭಯ ಸದನಗಳ ಎಲ್ಲ ಸಿಬ್ಬಂದಿ ವರ್ಗಕ್ಕೂ ಕಡ್ಡಾಯಗೊಳಿಸಲಾಗಿದೆ.

ಸಭಾಂಗಣ ಪ್ರವೇಶಿಸುವುದಕ್ಕೆ ಮೊದಲು ಎಲ್ಲ ಸಂಸದರು ಮತ್ತು ಸಿಬ್ಬಂದಿ ಕೊರೊನಾ ಪರೀಕ್ಷೆಗೆ ಕಡ್ಡಾಯವಾಗಿ ಒಳಪಡೆಬೇಕು. ಸ್ಯಾನಿಟೈಸರ್‍ಗಳು ಬಳಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ವೈರಸ್ ಸೋಂಕು ಹರಡುವುದನ್ನು ತಡೆಯಲು ಹಾಜರಿ ಪುಸ್ತಕಗಳಿಗೆ ಸಹಿ ಹಾಕುವ ಬದಲು ಮೊಬೈಲ್ ಆಪ್‍ಗಳನ್ನು ಬಳಸಾಗುತ್ತದೆ. ಈ ಅಧಿವೇಶನದಲ್ಲಿ ಕಾಗದ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ ಡಿಜಿಟಲ್ ಸ್ಪರ್ಶಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.

ಕೋವಿಡ್-19 ವೈರಸ್ ಹಾವಳಿಯಿಂದಾಗಿ ಸಂಸತ್ ಅಧಿವೇಶನದ ವಿಧಾನ ಮತ್ತು ಸ್ವರೂಪವನ್ನು ಬದಲಾವಣೆ ಮಾಡಲಾಗಿದೆ. ಎಲ್ಲ ಸಂಸದರು ಸಹಕರಿ ಈ ಕಲಾಪಗಳಲ್ಲಿ ಭಾಗವಹಿಸಿ ಅಧಿವೇಶನವನ್ನು ಯಶಸ್ಸುಗೊಳಿಸುವಂತೆ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಮನವಿ ಮಾಡಿದ್ಧಾರೆ.

# 23 ವಿಧೇಯಕಗಳ ಅಂಗೀಕಾರ : ನಾಳೆಯಿಂದ 18 ದಿನಗಳ ಕಾಲ ನಡೆಯುವ ಪಾರ್ಲಿಮೆಂಟ್ ಸೆಷನ್‍ನಲ್ಲಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಸಂರಕ್ಷಣೆಗೆ ಸುಗ್ರೀವಾಜ್ಞಾ ಸೇರಿದಂತೆ 23 ಪ್ರಮುಖ ಮಸೂದೆಗಳಿಗೆ ಅಂಗೀಕಾರ ದೊರೆಯುವ ನಿರೀಕ್ಷೆ ಇದೆ.

ಇದೇ ವೇಳೆ, ಕೊರೊನಾ ಪಿಡುಗು ನಿಯಂತ್ರಣ, ಲಾಕ್‍ಡೌನ್‍ನಿಂದ ದೇಶದ ಜನರ ಎದುರಿಸಿದ ಕಷ್ಟ. ಆರ್ಥಿಕ ಬಿಕ್ಕಟ್ಟು, ನಿರುದ್ಯೋಗ ಸಮಸ್ಯೆ, ದೇಶದ ವಿವಿಧೆಡೆ ನಡೆದ ಹಿಂಸಾಚಾರ, ವೈದ್ಯರ ಮೇಲಿನ ಹಲ್ಲೆ, ಲಡಾಖ್‍ನಲ್ಲಿ ಚೀನಾ ಜೊತೆ ಗಡಿ ಸಂಘರ್ಷ, ಪಾಕಿಸ್ತಾನ ಸೇನೆ ಪುಂಡಾಟ, ಭಯೋತ್ಪಾದಕರ ಉಪಟಳ ಸೇರಿದಂತೆ ಮೊದಲಾದ ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಿ ಕೇಂದ್ರ ಸರ್ಕಾರದ ಮೇಲೆ ದಾಳಿ ನಡೆಸಲು ಪ್ರತಿಪಕ್ಷಗಳು ಸಜ್ಜಾಗಿವೆ. ಇದಕ್ಕೆ ಪ್ರತಿಯಾಗಿ ಸರ್ಕಾರದ ಕ್ರಮಗಳನ್ನು ಸಮರ್ಥಿಸಿಕೊಳ್ಳಲು ಆಡಳಿತ ಮತ್ತು ಮಿತ್ರ ಪಕ್ಷಗಳು ಪ್ರತಿತಂತ್ರ ರೂಪಿಸಿವೆ.

ಉಭಯ ಕಲಾಪಗಳು ಸುಗಮವಾಗಿ ನಡೆಯುವಂತಾಗಲು ಸಹಕರಿಸುವಂತೆ ಸರ್ಕಾರ ವಿರೋಧ ಪಕ್ಷಗಳಿಗೆ ಮನವಿ ಮಾಡಿದೆ. ಮತ್ತೊಂದಡೆ ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ಕಾಂಗ್ರೆಸ್ ಮತ್ತಿತರ ವಿರೋಧ ಪಕ್ಷಗಳು ಸಜ್ಜಾಗಿದ್ದು, ಪ್ರತಿಪಕ್ಷಗಳ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗುತ್ತದೆ.

Facebook Comments