ಅಧಿವೇಶನಕ್ಕೆ ಗೈರಾಗಲಿದ್ದಾರೆ ಕೆಲ ಸಚಿವರು, ಶಾಸಕರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.17- ಸೋಮವಾರದಿಂದ ಬಹುನಿರೀಕ್ಷಿತ ಮಳೆಗಾಲದ ಅಧಿವೇಶನ ಆರಂಭವಾಗಲಿದ್ದು, ಕೊರೊನಾ ಸೋಂಕು ಕಾಣಿಸಿಕೊಂಡಿರುವ ಸಚಿವರು ಮತ್ತು ಶಾಸಕರು ಕಲಾಪದಿಂದ ಬಹುತೇಕ ದೂರ ಉಳಿಯುವ ಸಾಧ್ಯತೆ ಇದೆ.

ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸೇರಿದಂತೆ ಬಿಎಸ್‍ಐ ಸಂಪುಟದ ನಾಲ್ವರು ಸಚಿವರು ಕೋವಿಡ್-19 ಚಿಕಿತ್ಸೆ ಪಡೆಯುತಿದ್ದಾರೆ. ಹೀಗಾಗಿ ಸೆ.21ರಿಂದ ನಡೆಯುವ ಅಧಿವೇಶನದಿಂದ ದೂರ ಉಳಿಯಲಿದ್ದಾರೆ.

ಕೊರೋನಾ ಸೋಂಕು ತಗುಲಿರುವ ಬಗ್ಗೆ ನಿನ್ನೆಯಷ್ಟೇ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದು, ಕಳೆದ ಒಂದು ವಾರದೊಳಗೆ ನಾಲ್ಕು ಸಚಿವರಿಗೆ ಈಗ ಕೊರೊನಾ ಸೋಂಕು ತಗುಲಿದಂತಾಗಿದೆ.  ಸೋಮವಾರ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರಿಗೆ ಪಾಸಿಟಿವ್ ಕಂಡುಬಂದಿತ್ತು.

ಮಾರನೇ ದಿನ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ. ಗೋಪಾಲಯ್ಯನವರಿಗೆ ಕೊರೋನಾ ದೃಢಪಟ್ಟಿತ್ತು. ಪಶು ಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ಅವರಿಗೆ ಕಳೆದ ವಾರ ಕೊರೋನಾ ಸೋಂಕು ತಗುಲಿತ್ತು.

ಈ ನಾಲ್ವರು ಸದಸ್ಯರು ಕೆಲ ದಿನಗಳ ಮಟ್ಟಿಗೆ ಅಥವಾ ಈ ಅಧಿವೇಶನದಿಂದ ದೂರ ಉಳಿಯುವ ಸಾಧ್ಯತೆಯಿದೆ. ವೈದ್ಯಕೀಯ ನಿಗಾವಣೆಯಲ್ಲಿದ್ದು, ಚೇತರಿಸಿಕೊಳ್ಳುತ್ತಿದ್ದೇನೆ. ಪೂರ್ಣ ಗುಣಮುಖವಾಗಿ ,ಆಸ್ಪತ್ರೆಯಿಂದ ಡಿಸ್ಚಾರ್ಚ್ ಆದ ಮೇಲೂ ಒಂದು ವಾರ ಐಸೋಲೇಷನ್‍ನಲ್ಲಿ ಇರಬೇಕಾಗುತ್ತದೆ.

ಶಾಸಕರಾದ ಗೌರಿಶಂಕರ್ ಸೇರಿದಂತೆ ಅನೇಕರಿಗೂ ಸೋಂಕು ಕಂಡುಬಂದಿದೆ. ಸೋಮವಾರದಿಂದ 10 ದಿನಗಳ ಕಾಲ ಅಧಿವೇಶನ ಆರಂಭವಾಗಲಿದ್ದು, ಕೊರೋನಾ ಕಾರಣದಿಂದಾಗಿ ಎಲ್ಲಾ ಸಚಿವರು, ಅಧಿಕಾರಿಗಳು ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ಕೋವಿಡ್-19 ನೆಗೆಟಿವ್ ವರದಿ ಕಡ್ಡಾಯಪಡಿಸಲಾಗಿದೆ.

ಕಳೆದ ಕೆಲ ತಿಂಗಳುಗಳಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಆರೋಗ್ಯ ಸಚಿವ ಬಿ. ಶ್ರೀರಾಮುಲು, ಕನ್ನಡ ಮ್ತು ಸಂಸ್ಕೃತಿ ಸಚಿವ ಸಿ. ಟಿ. ರವಿ. ಅರಣ್ಯ ಸಚಿವ ಆನಂದ್ ಸಿಂಗ್, ಸಹಕಾರ ಸಚಿವ ಎಸ್. ಟಿ. ಸೋಮಶೇಖರ್, ಕೃಷಿ ಸಚಿವ ಬಿ. ಸಿ. ಪಾಟೀಲ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಶಶಿಕಲಾ ಜೊಲ್ಲೆ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರಿದಂತೆ ಹಲವು ಜನಪ್ರತಿನಿಧಿಗಳು ಕೊರೋನಾ ಸೋಂಕಿಗೆ ತುತ್ತಾಗಿ ಈಗ ಚೇತರಿಸಿಕೊಂಡಿದ್ದಾರೆ.

Facebook Comments