ನಾಳೆಯಿಂದ ಮುಂಗಾರು ಅಧಿವೇಶನ, ಶಾಸಕರಿಗೆ ಕೊರೊನ ಆತಂಕ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.20-ಕೋವಿಡ್ ಸೋಂಕು ಹೆಚ್ಚಾಗುತ್ತಿರುವ ಸಂದರ್ಭದಲ್ಲೇ ನಾಳೆಯಿಂದ ವಿಧಾನಮಂಡಲದ ಮಳೆಗಾಲದ ಅಧಿವೇಶನ ಅರಂಭವಾಗುತ್ತಿದ್ದು, ಬಹುತೇಕ ಎಲ್ಲ ಪಕ್ಷಗಳ ಶಾಸಕರು ಆತಂಕಗೊಂಡಿದ್ದಾರೆ.  ಕೊರೊನಾ ಸೋಂಕು ಹೆಚ್ಚುತ್ತಿರುವ ಕಾರಣ ಕೇಂದ್ರ ಸರ್ಕಾರ ಬುಧವಾರವೇ ಕಲಾಪವನ್ನು ಮೊಟಕುಗೊಳಿಸಲು ಮುಂದಾಗಿರುವಾಗ, ರಾಜ್ಯದಲ್ಲಿ ಕಲಾಪವನ್ನು ನಡೆಸುವ ಔಚಿತ್ಯವಾದರೂ ಏನು? ಎಂದು ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಪ್ರಶ್ನಿಸುತ್ತಿದ್ದಾರೆ.

ಜನಪ್ರತಿನಿಧಿಗಳ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರವೇ ಅಧಿವೇಶನವನ್ನು ಅರ್ಧಕ್ಕೆ ನಿಲ್ಲಿಸುತ್ತಿರುವಾಗ, ರಾಜ್ಯದಲ್ಲಿ ಕಲಾಪ ನಡೆಸುವ ಅಗತ್ಯವಾದರೂ ಏನಿತ್ತ್ತು ಎಂಬುದು ಬಹುತೇಕರ ಪ್ರಶ್ನೆಯಾಗಿದೆ. ಕಳೆದ ಆರು ತಿಂಗಳಿನಿಂದ ಮುಚ್ಚಲ್ಪಟ್ಟಿದ್ದ ಶಾಲಾ-ಕಾಲೇಜುಗಳು ನಾಳೆಯಿಂದ ಆರಂಭಿಸಲು ಕೇಂದ್ರ ಸರ್ಕಾರ ಸೂಚನೆ ಕೊಟ್ಟಿದೆ.

ಆದರೆ ರಾಜ್ಯದಲ್ಲಿ ಕೊರೊನಾ ಪ್ರಕರಣ ಹೆಚ್ಚಿರುವ ಹಿನ್ನೆಲೆಯಲ್ಲಿ ಈ ತಿಂಗಳ ಅಂತ್ಯದವರೆಗೆ ಶಾಲಾ-ಕಾಲೇಜುಗಳಿಗೆ ವಿದ್ಯಾರ್ಥಿಗಳು ಬರಬಾರದೆಂದು ಆದೇಶಿಸಲಾಗಿದೆ. ನಾಳೆಯಿಂದ ಕೇವಲ ಶಿಕ್ಷಕರು, ಉಪನ್ಯಾಸಕರು, ಪ್ರಾಂಶುಪಾಲರು ಸೇರಿದಂತೆ ಸಿಬ್ಬಂದಿಗಳು ಮಾತ್ರ ಶಾಲಾ-ಕಾಲೇಜುಗಳಿಗೆ ಹಾಜರಾಗಬೇಕೆಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಶಾಲಾಕಾಲೇಜುಗಳಿಗೆ ಹಾಜರಾಗುವುದು ಆರೋಗ್ಯದ ದೃಷ್ಟಿಯಿಂದ ಅಷ್ಟೂ ಸಮಂಜಸವಲ್ಲ. ಸೆಪ್ಟೆಂಬರ್ ಅಂತ್ಯದವರೆಗೆ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಆಗಮಿಸಬಾರದು. ಪರಿಸ್ಥಿತಿಗೆ ಅನುಗುಣವಾಗಿ ತೀರ್ಮಾನ ತೆಗೆದುಕೊಳ್ಳುವುದಾಗಿ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ವಾಸ್ತವ ಹೀಗಿರುವಾಗ ರಾಜ್ಯ ಸರ್ಕಾರ ಕಲಾಪ ನಡೆಸುವ ಉದ್ದೇಶವಾದರೂ ಏನು ಎಂದು ಬಹುತೇಕ ಶಾಸಕರ ಒಕ್ಕೋರಲಿನ ಪ್ರಶ್ನೆಯಾಗಿದೆ. ಏಕೆಂದರೆ ಈಗಾಗಲೇ ಸಚಿವರಾದ ಬಸವರಾಜ್ ಬೊಮ್ಮಾಯಿ, ಡಾ.ಅಶ್ವಥ್ ನಾರಾಯಣ, ಭೈರತಿ ಬಸವರಾಜ್, ಶಾಸಕರಾದ ಪ್ರಿಯಾಂಕ ಖರ್ಗೆ , ಉಮೇಶ್ ಕೋಟ್ಯಾನ್ ಸೇರಿದಂತೆ ಅನೇಕರು ಕೋವಿಡ್ ಸೋಂಕು ತಗುಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದರ ನಡುವೆ ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ, ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಮತ್ತಿತರರಿಗೂ ಸೋಂಕು ಕಾಣಿಸಿಕೊಂಡು ಚಿಕಿತ್ಸೆ ಪಡೆದಿದ್ದಾರೆ. ಜೊತೆಗೆ ಮೂರು ಪಕ್ಷಗಳಿಂದ ಸರಿಸುಮಾರು ಎರಡು ಡಜನ್‍ಗೂ ಅಧಿಕ ಜನಪ್ರತಿನಿಧಿಗಳು ಸೋಂಕಿಗೆ ತುತ್ತಾಗಿದ್ದಾರೆ. ಕೆಲವರ ಕೋವಿಡ್ ವರದಿ ಇನ್ನೂ ನಿರೀಕ್ಷೆಯಲ್ಲಿದ್ದು, ಯಾರ್ಯಾರಿಗೆ ಸೋಂಕು ತಗುಲಿದೆ ಎಂಬುದು ನಾಳೆಯೊಳಗೆ ಗೊತ್ತಾಗಲಿದೆ.

ಇಷ್ಟು ಆತಂಕದ ನಡುವೆ ಕಲಾಪವನ್ನು ಯಾವ ಕಾರಣಕ್ಕಾಗಿ ನಡೆಸಬೇಕಿತ್ತೆಂದು ಜನಪ್ರತಿನಿಧಿಗಳು ಪ್ರಶ್ನಿಸುತ್ತಿದ್ದಾರೆ. ವಿಧಾನಸೌಧಕ್ಕೆ ಸಾರ್ವಜನಿಕರನ್ನು ಹೊರತುಪಡಿಸಿ ಅಲ್ಲಿನ ಸಿಬ್ಬಂದಿಯೇ ಸಾವಿರಾರು ಸಂಖ್ಯೆಯಲ್ಲಿ ಕೆಲಸ ಮಾಡುತ್ತಾರೆ.

ಎಷ್ಟೇ ಸುರಕ್ಷತಾ ಕ್ರಮಗಳನ್ನು ಕೈಗೊಂಡರೂ ಸೋಂಕು ಯಾವ ಕ್ಷಣದಲ್ಲಿ ,ಯಾವ ರೂಪದಲ್ಲಿ, ಹೇಗೆ ತಗಲುತ್ತದೆ ಎಂಬುದು ಯಾರಿಗೂ ಗೊತ್ತಾಗುವುದಿಲ್ಲ. ಸರ್ಕಾರ ಕಲಾಪವನ್ನು ಮುಂದೂಡಬಹುದಿತ್ತಲ್ಲ ಎಂಬ ಮೂಲಭೂತ ಪ್ರಶ್ನೆಯನ್ನು ಎತ್ತಿದ್ದಾರೆ.

Facebook Comments