ಶಾಸಕಾಂಗ ಸಭೆಗೆ ಕಡ್ಡಾಯವಾಗಿ ಹಾಜರಾಗುವಂತೆ ಬಿಜೆಪಿ ಶಾಸಕರಿಗೆ ವಿಪ್ ಜಾರಿ
ಬೆಂಗಳೂರು, ಸೆ.11- ಸೋಮವಾರದಿಂದ ಮಳೆಗಾಲದ ಅಧಿವೇಶನ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳ ತಂತ್ರಕ್ಕೆ ಕಾರ್ಯತಂತ್ರ ರೂಪಿಸಲು ಅಂದು ಬಿಜೆಪಿ ಶಾಸಕಾಂಗ ಸಭೆ ಕರೆದಿದೆ. ಬೆಂಗಳೂರಿನ ಖಾಸಗಿ ಹೊಟೇಲ್ನಲ್ಲಿ ಸಂಜೆ 6.30ಕ್ಕೆ ನಡೆಯಲಿರುವ ಸಭೆಯ ಅಧ್ಯಕ್ಷತೆಯನ್ನು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಹಿಸಲಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ನಂತರ ಮೊದಲ ಬಾರಿಗೆ ಅಧಿವೇಶನ ನಡೆಯುತ್ತಿರುವುದರಿಂದ ಪ್ರತಿಪಕ್ಷಗಳ ತಂತ್ರಕ್ಕೆ ಪ್ರತಿ ತಂತ್ರ ರೂಪಿಸಲು ಶಾಸಕಾಂಗ ಸಭೆ ಕರೆಯಲಾಗಿದೆ. ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಕಡ್ಡಾಯವಾಗಿ ಶಾಸಕಾಂಗ ಸಭೆಗೆ ಹಾಜರಾಗುವಂತೆ ಈಗಾಗಲೇ ವಿಧಾನಮಂಡಲದ ಉಭಯ ಸದನಗಳ ಮುಖ್ಯ ಸಚೇತಕರ (ವಿಪ್ ಚೀಫ್) ಮೂಲಕ ಸೂಚನೆ ನೀಡಲಾಗಿದೆ.
ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಈ ಬಾರಿಯ ಅಧಿವೇಶನದಲ್ಲಿ ಪ್ರಮುಖವಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆ , ಇಂಧನ ಬೆಲೆ ಹೆಚ್ಚಳ, ಮೈಸೂರಿನಲ್ಲಿ ವಿದ್ಯಾರ್ಥಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ, ಕುಸಿದು ಬಿದ್ದಿರುವ ಕಾನೂನು ಸುವ್ಯವಸ್ಥೆ ಸೇರಿದಂತೆ ಪ್ರಮುಖ ವಿಷಯಗಳ ಬಗ್ಗೆ ಸರ್ಕಾರದ ಮೇಲೆ ಮುಗಿ ಬೀಳಲು ಸಜ್ಜಾಗಿದ್ದಾರೆ.
ಶಾಸಕರು ಎತ್ತಲಿರುವ ಪ್ರತಿಯೊಂದು ವಿಷಯ ಹಾಗೂ ಪ್ರಶ್ನೆಗಳಿಗೆ ಸಚಿವರು ಸಮರ್ಪಕವಾಗಿ ಉತ್ತರ ನೀಡುವ ಮೂಲಕ ಸದನದಲ್ಲೇ ಕಟ್ಟಿ ಹಾಕಬೇಕೆಂದು ಸೂಚನೆ ನೀಡಲಿದ್ದಾರೆ.
ಯಾವ ಯಾವ ವಿಷಯದ ಬಗ್ಗೆ ಪ್ರಸ್ತಾಪಿಸಲಿದ್ದಾರೋ, ಅವುಗಳ ಬಗ್ಗೆ ಹಿರಿಯ ಸಚಿವರು ಸಮರ್ಪಕವಾದ ಉತ್ತರ ನೀಡಬೇಕು. ಸಂಬಂಧಪಟ್ಟ ಸಚಿವರು ಕೂಡ ತಮ್ಮ ತಮ್ಮ ಇಲಾಖೆಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಪೂರ್ವ ಸಿದ್ಧತೆ ಮಾಡಿಕೊಂಡು ಬರಬೇಕೆಂದು ಸೂಚಿಸಲಿದ್ದಾರೆ.
ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಪ್ರತಿ ಬ್ಯಾರೆಲ್ಗೆ ತೈಲ ಬೆಲೆ ಎಷ್ಟಿತ್ತು , ಅಗತ್ಯ ವಸ್ತುಗಳು ಸೇರಿದಂತೆ ಪ್ರತಿಯೊಂದು ವಿಷಯಗಳ ಬಗ್ಗೆಯೂ ಪ್ರತಿಪಕ್ಷಗಳ ಆರೋಪಕ್ಕೆ ಸದನದಲ್ಲೇ ಉತ್ತರ ನೀಡಬೇಕು ಎಂದು ಪಕ್ಷವು ಶಾಸಕರು ಮತ್ತು ಸಚಿವರಿಗೆ ನಿರ್ದೇಶನ ನೀಡಲಿದೆ.