ಮುಂಗಾರು ಸಂಸತ್ ಅಧಿವೇಶನದಲ್ಲಿ ಪ್ರಶ್ನೋತ್ತರ ಅವಧಿ ರದ್ದು

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಸೆ.2-ಕೊರೋನಾ ಆತಂಕದ ನಡುವೆ ಸಂಸತ್ತಿನ ಮುಂಗಾರು ಅಧಿವೇಶನ ಇದೇ ತಿಂಗಳ 14ರಿಂದ ಆರಂಭವಾಗುತ್ತಿದ್ದು ಈ ಬಾರಿ ಕಲಾಪದ ಮಧ್ಯೆ ಪ್ರಶ್ನೋತ್ತರ ಅವಧಿ ಇರುವುದಿಲ್ಲ.

ಸೆಪ್ಟೆಂಬರ್ 14ರಿಂದ ಅಕ್ಟೋಬರ್ 1ರವರೆಗೆ ಅಧಿವೇಶನ ನಡೆಸಲಾಗುವುದು ಎಂದು ಲೋಕಸಭೆ ಮತ್ತು ರಾಜ್ಯಸಭೆಯ ಸಚಿವಾಲಯಗಳು ಅಧಿಕೃತ ಆದೇಶ ಹೊರಡಿಸಿವೆ.

ಕೊರೋನಾ ಹಿನ್ನಲೆಯಲ್ಲಿ ಜನರ ಜೀವನಶೈಲಿಯೇ ಬದಲಾಗಿದೆ. ಜೊತೆಗೆ ಸರ್ಕಾರದ ಆಡಳಿತ ಶೈಲಿ ಕೂಡ. ಇದೇ ರೀತಿ ಈಗ ಇದೇ ಮೊದಲ ಬಾರಿಗೆ ದೇಶದ ಸಂಸತ್ ಅಧಿವೇಶನವೂ ಭಿನ್ನವಾಗಿ ನಡೆಯಲಿದೆ.

ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ದೃಷ್ಟಿಯಿಂದ ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರಿಗೆ ಆಸನದ ವ್ಯವಸ್ಥೆಯೂ ಭಿನ್ನವಾಗಿರಲಿದೆ. 542 ಲೋಕಸಭಾ ಸದಸ್ಯರ ಪೈಕಿ ಕೆಲವರಿಗೆ ಲೋಕಸಭೆಯಲ್ಲಿ, ಕೆಲವರಿಗೆ ರಾಜ್ಯಸಭೆಯಲ್ಲಿ ಮತ್ತೆ ಕೆಲವರಿಗೆ ಸೆಂಟ್ರಲ್ ಹಾಲ್ ನಲ್ಲಿ ಆಸನದ ವ್ಯವಸ್ಥೆ ಮಾಡಲಾಗುತ್ತದೆ.

ಅಗತ್ಯ ಬಿದ್ದರೆ ಲೋಕಸಭೆ ಮತ್ತು ರಾಜ್ಯಸಭೆ ಗ್ಯಾಲರಿಗಳಲ್ಲಿ ಕೂಡ ಆಸನದ ವ್ಯವಸ್ಥೆ ಮಾಡಲಾಗುತ್ತದೆ. ಈ ಬಾರಿಯ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಪ್ರಶ್ನೋತ್ತರ ಮತ್ತು ಶೂನ್ಯವೇಳೆ ಇರುವುದಿಲ್ಲ. ಪ್ರೈವೇಟ್ ಮೆಂಬರ್ ಬಿಲ್ ಮಂಡಿಸುವುದಕ್ಕೂ ಅವಕಾಶ ಇರುವುದಿಲ್ಲ.

ಸಂಸದರು ಆರೋಗ್ಯ ಸೇತು ಆ್ಯಪ್‍ನ್ನು ಡೌನ್ಲೋಡ್ ಮಾಡಿಕೊಳ್ಳಬೇಕಿರುವುದು ಕಡ್ಡಾಯವಾಗಿದೆ. ಎಲ್ಲರನ್ನೂ ತಪಾಸಣೆ ಮಾಡಿದ ಬಳಿಕವೇ ಒಳಗಡೆಗೆ ಪ್ರವೇಶಾವಕಾಶ ಕಲ್ಪಿಸಲಾಗುತ್ಯದೆ. ಅಧಿವೇಶನದ ಹಿನ್ನಲೆಯಲ್ಲಿ ಇಡೀ ಸಂಸತ್ ಭವನಕ್ಕೆ ಸ್ಯಾನಿಟೈಸ್ ಮಾಡಲಾಗುತ್ತದೆ. ಸಂಸದರ ಪಿಎಗಳಿಗೆ ಸಂಸತ್ ಭವನಕ್ಕೆ ಪ್ರವೇಶಾವಕಾಶ ನಿರಾಕರಿಸಲಾಗುತ್ತದೆ.

ಈ ಬಾರಿಯ ಸಂಸತ್ತಿನ ಮಳೆಗಾಲದ ಅಧಿವೇಶನವನ್ನು ಶಿಫ್ಟ್ ನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಅಂದರೆ ಬೆಳಿಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಲೋಕಸಭೆ ಮತ್ತು ಮಧ್ಯಾಹ್ನ 3ರಿಂದ ಸಂಜೆ 7ರವರೆಗೆ ರಾಜ್ಯಸಭೆ ಕಲಾಪ ಮಾಡಲು ನಿರ್ಧರಿಸಲಾಗಿದೆ. ಈ ಬಗ್ಗೆ ರಾಜ್ಯ ಸಭೆ ಸಚಿವಾಲಯ ಅಧಿಸೂಚನೆ ಹೊರಡಿಸಿದ್ದು ಶೂನ್ಯ ಅವಧಿ ಮತ್ತು ಕಲಾಪದ ಇತರ ನಡಾವಳಿಗಳು ನಿಗದಿಯಂತೆ ಸಾಗಲಿದೆ ಎಂದು ತಿಳಿಸಿದೆ.

ಕೊರೋನಾ ದೇಶದೆಲ್ಲೆಡೆ ಹೆಚ್ಚುತ್ತಿರುವುದರಿಂದ ಅಧಿವೇಶನದಲ್ಲಿ ಪಾಲ್ಗೊಳ್ಳುವ ಸದಸ್ಯರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಅಧಿವೇಶನಕ್ಕೆ ಸಂಸತ್ತಿಗೆ ಬರುವ 72 ಗಂಟೆಗಳ ಮುನ್ನ ಕಡ್ಡಾಯವಾಗಿ ಪ್ರತಿಯೊಬ್ಬರೂ ಕೊರೋನಾ ಪರೀಕ್ಷೆ ಮಾಡಿಸಿಕೊಂಡು ಬರಬೇಕು ಎಂದು ಸೂಚನೆ ನೀಡಲಾಗಿದೆ.

ಪ್ರತಿದಿನದ ಮಾದರಿಯಲ್ಲಿ ಸಂಸತ್ತಿನ ಮುಂಗಾರು ಅಧಿವೇಶನ ನಡೆಯಲಿದ್ದು ವಾರಾಂತ್ಯಗಳಲ್ಲಿ ಕೂಡ ಈ ಬಾರಿ ವಿರಾಮ ಇರುವುದಿಲ್ಲ. ಎರಡೂ ಸದನಗಳ ಕಲಾಪಗಳು ಪ್ರತಿದಿನ ನಡೆಯಲಿವೆ. ಸೆಪ್ಟೆಂಬರ್ 14ರಂದು ಲೋಕಸಭಾ ಅಧಿವೇಶನ ಬೆಳಗ್ಗೆ 9ರಿಂದ ಮಧ್ಯಾಹ್ನ 1 ಗಂಟೆಯವರೆಗೆ, ರಾಜ್ಯಸಭಾ ಕಲಾಪ ಅಪರಾಹ್ನ 3 ಗಂಟೆಯಿಂದ ಸಾಯಂಕಾಲ 7 ಗಂಟೆಯವರೆಗೆ ನಡೆಯಲಿದೆ.

ಸೆಪ್ಟೆಂಬರ್ 14ರ ನಂತರ ರಾಜ್ಯಸಭಾ ಅಧಿವೇಶನ ಬೆಳಗ್ಗೆ 9ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಲೋಕಸಭಾ ಕಲಾಪ ಅಪರಾಹ್ನ 3 ಗಂಟೆಯಿಂದ ಸಾಯಂಕಾಲ 7 ಗಂಟೆಯವರೆಗೆ ನಡೆಯಲಿದೆ.ಕೋವಿಡ್-19 ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಈ ಬದಲಾವಣೆ ಮಾಡಲಾಗಿದೆ.

ಸಂಸತ್ ಸಚಿವಾಲಯದ ಅಧಿಕಾರಿಗಳು ವಚ್ರ್ಯುಯಲ್, ಸೆಮಿ ವಚ್ರ್ಯುಯಲ್, ಬೇರೆ ಬೇರೆ ಪ್ರದೇಶಗಳಲ್ಲಿ ಸಂಸದರನ್ನು ಕೂರಿಸಿ ಹಲವು ಮಾದರಿಗಳನ್ನು ನೀಡಿದ್ದರು. ಶಿಫ್ಟ್ ನಲ್ಲಿ ಅಥವಾ ದಿನ ಬಿಟ್ಟು ದಿನ ಅಧಿವೇಶನ ನಡೆಸುವ ಎರಡು ಆಯ್ಕೆಗಳನ್ನು ಮುಂದಿಡಲಾಗಿತ್ತು.

ಅಂತಿಮವಾಗಿ ರಾಜ್ಯಸಭೆಯ ಸಭಾಪತಿ ಎಂ. ವೆಂಕಯ್ಯನಾಯ್ಡು ಮತ್ತು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಸಂಸತ್ ಸಚಿವಾಲಯದ ಅಧಿಕಾರಿಗಳ ಜೊತೆ ಹಲವು ಸುತ್ತಿನ ಮಾತುಕತೆ ನಡೆಸಿ, ಹಲವು ಸಾಧ್ಯತೆಗಳನ್ನು ಪರಿಶೀಲಿಸಿ ದಿನ ಬಳಿಕ ಶಿಫ್ಟ್‍ನಲ್ಲಿ(ಡೇ ಬೈ ಡೇ) ನಡೆಸಲು ನಿರ್ಧರಿಸಿದ್ದಾರೆ ಎಂದು ಗೊತ್ತಾಗಿದೆ.

ಕಡೆಯದಾಗಿ ಸಂಸತ್ ಅಧಿವೇಶನ ನಡೆದಿದ್ದು ಮಾರ್ಚ್ 23ರಂದು. ಸಂಸತ್ತಿನ ನಿಯಮಾವಳಿಗಳ ಪ್ರಕಾರ 6 ತಿಂಗಳೊಳಗೆ ಮತ್ತೆ ಅಧಿವೇಶನ ನಡೆಸಲೇಬೇಕು. ಆದುದರಿಂದ ಕೊರೊನಾ ನಡುವೆಯೂ ಸೆಪ್ಟೆಂಬರ್ 22ರೊಳಗೆ ಅಧಿವೇಶನ ನಡೆಸಲೇಬೇಕಾದ ಒತ್ತಡ ನಿರ್ಮಾಣವಾಗಿತ್ತು. ಇದೇ ಹಿನ್ನಲೆಯಲ್ಲಿ ಸೆಪ್ಟೆಂಬರ್ 14ರಿಂದ ಅಧಿವೇಶನ ನಡೆಸಲು ನಿರ್ಣಯ ಮಾಡಲಾಗಿದೆ.

Facebook Comments