ವಾಕ್ಸಮರಕ್ಕೆ ವೇದಿಕೆ ಸಜ್ಜು, ಸರ್ಕಾರದ ಚಳಿ ಬಿಡಿಸಲು ವಿಪಕ್ಷಗಳ ತಯಾರಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.19- ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳು, ಡಗ್ಸ್ ದಂಧೆ, ವಿವಾದಾತ್ಮಕ ಸುಗ್ರೀವಾಜ್ಞೆಗಳು, ಡಿಜೆಹಳ್ಳಿ ಗಲಭೆ, ಪ್ರವಾಹ ಪರಿಸ್ಥಿತಿ, ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಆರೋಪ ಸೇರಿದಂತೆ ಸೋಮವಾರದಿಂದ ಆರಂಭವಾಗಲಿರುವ ವಿಧಾನಮಂಡಲದ ಅಧಿವೇಶನ ಆಡಳಿತ ಮತ್ತು ಪ್ರತಿಪಕ್ಷಗಳ  ನಡುವೆ ಭಾರೀ ವಾಕ್ಸಮರವನ್ನೇ ಸೃಷ್ಟಿಸಲಿದೆ.

ಸೋಮವಾರ ಕಲಾಪ ಆರಂಭವಾಗುತ್ತಿದ್ದಂತೆ ಶಿಷ್ಟಾಚಾರದಂತೆ ಅಗಲಿದ ನಾಯಕರಿಗೆ ಸಂತಾಪ ಸೂಚಿಸಲಿದ್ದು, ಬಹುತೇಕ ಮಂಗಳವಾರದಿಂದ ಅಧಿಕೃತ ಕಲಾಪ ಆರಂಭವಾಗಲಿದೆ.ಇದೇ ಮೊದಲ ಬಾರಿಗೆ ಕಲಾಪದಲ್ಲಿ ಮುಖ್ಯಮಂತ್ರಿ ಸೇರಿದಂತೆ ಸಚಿವರು, ಶಾಸಕರು, ಅಧಿಕಾರಿವರ್ಗ, ಮಾಧ್ಯಮ ಸೇರಿದಂತೆ ಪ್ರತಿಯೊಬ್ಬರೂ ಕಡ್ಡಾಯವಾಗಿ ಕೋವಿಡ್ ಟೆಸ್ಟ್‍ಗೆ ಒಳಗಾಗಲೇಬೇಕು.

ಕಳೆದ ಮಾರ್ಚ್‍ನಲ್ಲಿ ಬಜೆಟ್ ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲೇ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರಿಂದ ಅಧಿವೇಶನವನ್ನು ಮೊಟಕುಗೊಳಿಸಿ ಮುಂದೂಡಲಾಗಿತ್ತು. ಇದೀಗ ಕೊರೊನಾ ಆತಂಕದ ನಡುವೆಯೇ ಕಲಾಪ ಆರಂಭವಾಗುತ್ತಿದ್ದು, ರಾಜ್ಯದ ಪ್ರಚಲಿತ ವಿದ್ಯಮಾನಗಳು, ಉಭಯ ಸದನಗಳಲ್ಲಿ ಮಾರ್ಧನಿಸಲಿವೆ.

ಆಡಳಿತಾರೂಢ ಬಿಜೆಪಿಯನ್ನು ಕಟ್ಟಿಹಾಕಲು ಪ್ರತಿಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮದೇ ಆದ ರಣತಂತ್ರವನ್ನು ರೂಪಿಸಿದೆ. ಪ್ರತಿಪಕ್ಷಗಳ ತಂತ್ರಕ್ಕೆ ಪ್ರತಿತಂತ್ರ ರೂಪಿಸಿರುವ ಬಿಜೆಪಿ ಸದನದಲ್ಲಿ ಎತ್ತುವ ಪ್ರಶ್ನೆಗೆ ಅಲ್ಲೇ ಉತ್ತರಿಸಲು ಸಂಬಂಧಪಟ್ಟ ಸಚಿವರಿಗೆ ಸೂಚಿಸಲಾಗಿದೆ.

# ವಾಕ್ಸಮರ ಸಾಧ್ಯತೆ:  ಇನ್ನು ಸದನದಲ್ಲಿ ಈ ಬಾರಿ ಆಡಳಿತ ಮತ್ತು ಪಕ್ಷಗಳ ನಡುವೆ ರಾಜ್ಯದಲ್ಲಿ ಇತ್ತೀಚೆಗೆ ನಡೆದ ಕೆಲವು ವಿದ್ಯಮಾನಗಳ ಬಗ್ಗೆ ವಾಕ್ಸಮರ ನಡೆಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಬೆಂಗಳೂರಿನ ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ, ಮನೆ ಮೇಲೆ ಕೆಲವು ದುಷ್ಕರ್ಮಿಗಳು ನಡೆಸಿದ ಗಲಭೆ, ಪೊಲೀಸ್ ಠಾಣೆಗೆ ನುಗ್ಗಿ ಬೆಂಕಿ ಹಚ್ಚಿದ್ದು, ಸಾರ್ವಜನಿಕರ ಆಸ್ತಿಪಾಸ್ತಿ ನಷ್ಟ, ವಾಹನಗಳನ್ನು ಧ್ವಂಸಗೊಳಿಸಿರುವುದು ಬಳಿಕ ಘಟನೆ ಮಾತಿನ ಚಕಮಕಿಗೆ ವೇದಿಕೆಯಾಗಲಿದೆ.

ಘಟನೆಗೆ ಪೊಲೀಸರ ವೈಫಲ್ಯವೇ ಕಾರಣ ಎಂಬುದು ಕಾಂಗ್ರೆಸ್ ಆರೋಪವಾದರೆ, ಒಂದು ಸಮುದಾಯದವರೇ ಈ ಘಟನೆಗೆ ಕಾರಣ ಎಂಬುದು ಬಿಜೆಪಿಯ ಆರೋಪ. ಹೀಗಾಗಿ ಸದನದಲ್ಲಿ ಇದು ಕೂಡ ಮಾರ್ಧನಿಸುವ ಸಾಧ್ಯತೆಯೇ ಹೆಚ್ಚಾಗಿದೆ.

# ಭ್ರಷ್ಟಾಚಾರದ ಆರೋಪ:
ಇನ್ನು ರಾಜ್ಯ ಸರ್ಕಾರ ಕೋವಿಡ್ ನಿರ್ವಹಿಸುವಲ್ಲಿ ವಿಫಲವಾಗಿರುವುದನ್ನು ಎಳೆ ಎಳೆಯಾಗಿ ಬಿಡಿಸಲು ಕಾಂಗ್ರೆಸ್ ಸಜ್ಜಾಗಿದೆ. ಅದರಲ್ಲೂ ವಿಶೇಷವಾಗಿ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಭಾರೀ ಮೊತ್ತದ ಭ್ರಷ್ಟಾಚಾರ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಅಲ್ಲದೆ ಕೆಲವು ದಾಖಲೆಗಳನ್ನು ಬಿಡುಗಡೆ ಮಾಡಿ ನ್ಯಾಯಾಂಗ ತನಿಖೆಗೆ ಆಗ್ರಹಿಸಿತ್ತು.

ಆದರೆ ಪ್ರತಿಪಕ್ಷದ ಆರೋಪವನ್ನು ಸಾರಾ ಸಗಟಾಗಿ ತಳ್ಳಿ ಹಾಕಿದ್ದ ಆಡಳಿತಾರೂಢ ಬಿಜೆಪಿ ಖರೀದಿಯಲ್ಲಿ ಒಂದೇ ಒಂದು ರೂಪಾಯಿ ಭ್ರಷ್ಟಾಚಾರ ನಡೆದಿಲ್ಲ ಎಂದು ಸಮರ್ಥಿಸಿಕೊಂಡಿತ್ತು. ಇದು ಕೂಡ ಕಲಾಪದ ವೇಳೆ ಪ್ರತಿಧ್ವನಿಸಿ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸುವಂತೆ ಪ್ರತಿಪಕ್ಷಗಳ ಒತ್ತಾಯಿಸುವ ಸಾಧ್ಯತೆಗಳಿವೆ.

# ಸುಗ್ರೀವಾಜ್ಞೆಗಳು:
ಈ ಬಾರಿಯ ಕಲಾಪದಲ್ಲಿ ಕೆಲವು ವಿವಾದಾತ್ಮಕ ಸುಗ್ರೀವಾಜ್ಞೆಗಳನ್ನು ಜಾರಿ ಮಾಡಲು ಮುಂದಾಗಿರುವ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಮುಗಿಬೀಳಲಿವೆ. ವಿಶೇಷವಾಗಿ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ತಿದ್ದುಪಡಿ ಸೇರಿದಂತೆ ಕೆಲವು ಮಸೂದೆಗಳನ್ನು ತಿದ್ದುಪಡಿ ಮಾಡಿ ಸುಗ್ರೀವಾಜ್ಞೆಗೆ ಮುಂದಾಗಿರುವ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲಿವೆ.

ಈಗಾಗಲೇ ಈ ಎರಡು ಮಸೂದೆಗಳ ವಿರುದ್ಧ ಕಾಂಗ್ರೆಸ್ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಲು ಸಜ್ಜಾಗಿದೆ. ಅಧಿವೇಶನದಲ್ಲಿ ಇದನ್ನೂ ಸಹ ಚರ್ಚಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ತುದಿಗಾಲಲ್ಲಿ ನಿಂತಿದೆ. ಪ್ರವಾಹ: ಕಳೆದ ತಿಂಗಳು ರಾಜ್ಯದ ನಾನಾ ಕಡೆ ಪ್ರವಾಹ ಬಂದು 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾರೀ ಪ್ರಮಾಣದ ನಷ್ಟ ಉಂಟಾಗಿತ್ತು. ರಾಜ್ಯ ಸರ್ಕಾರವೇ ಕೇಂದ್ರಕ್ಕೆ ಅಧಿಕೃತವಾಗಿ ನೀಡಿರುವ ಮಾಹಿತಿಯಂತೆ ಪ್ರವಾಹದಿಂದ ಒಟ್ಟು 8 ಸಾವಿರ ಕೋಟಿ ನಷ್ಟ ಸಂಭವಿಸಿದೆ ಎಂಬ ಮಾಹಿತಿ ಹೊರಬಿದ್ದಿತ್ತು.

ರಾಜ್ಯ ಸರ್ಕಾರ ಪ್ರವಾಹ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡದ ಕಾರಣ ಸಾವಿರಾರು ಕುಟುಂಬಗಳು ಮನೆಮಠ ಕಳೆದುಕೊಂಡು ಬೀದಿಪಾಲಾಗಿವೆ ಎಂಬುದು ಪ್ರತಿಪಕ್ಷಗಳ ಆರೋಪವಾಗಿದೆ.  ಕೇಂದ್ರ ಸರ್ಕಾರ ರಾಜ್ಯಕ್ಕೆ ಮುಂಗಡವಾಗಿ 395 ಕೋಟಿ ನೆರೆ ಪರಿಹಾರ ವನ್ನು ಬಿಡುಗಡೆ ಮಾಡಿತ್ತು. ಆದರೆ ಸರ್ಕಾರ ಮನವಿ ಮಾಡಿಕೊಂಡ ನಂತರ ಒಂದೇ ಒಂದು ರೂಪಾಯಿ ಕೂಡ ಕೇಂದ್ರದಿಂದ ಬಿಡುಗಡೆಯಾಗಿಲ್ಲ. ಕಡೆಪಕ್ಷ ಅಧ್ಯಯನ ತಂಡ ಕೂಡ ರಾಜ್ಯಕ್ಕೆ ಆಗಮಿಸದಿರುವುದು ಪ್ರತಿಪಕ್ಷದ ಕಣ್ಣು ಕೆಂಪಾಗುವಂತೆ ಮಾಡಿದೆ.

# ಡ್ರಗ್ಸ್ ದಂಧೆ:
ರಾಜ್ಯಾದ್ಯಂತ ಭಾರೀ ಸದ್ದು ಮಾಡಿರುವ ಡ್ರಗ್ಸ್ ಜಾಲ ದಂಧೆ ಈ ಬಾರಿ ಅಧಿವೇಶನದಲ್ಲಿ ಹೆಚ್ಚು ಪ್ರತಿಧ್ವನಿಸುವ ಸಾಧ್ಯತೆ ಇದೆ. ನನ್ನ ಸರ್ಕಾರವನ್ನು ತೆಗೆದಿದ್ದೇ ಡ್ರಗ್ ಮಾಫಿಯಾದವರು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಬಾಂಬ್ ಸಿಡಿಸಿದ್ದರು.

ಅಲ್ಲದೆ ಈ ಪ್ರಕರಣದಲ್ಲಿ ಪ್ರಮುಖ ಪಕ್ಷಕ್ಕೆ ಸೇರಿದವರೇ ಹೆಚ್ಚು ಹೆಚ್ಚು ಬಂಧನಕ್ಕೆ ಒಳಗಾಗಿದ್ದಾರೆ. ಈ ಪ್ರಕರಣವನ್ನು ಸಹ ನ್ಯಾಯಾಂಗ ತನಿಖೆಗೆ ವಹಿಸಬೇಕೆಂಬುದು ಕಾಂಗ್ರೆಸ್ ಒತ್ತಾಯ.  ಹೀಗೆ ಪ್ರಚಲಿತ ವಿದ್ಯಮಾನಗಳು ಈ ಬಾರಿಯ ಕಲಾಪದಲ್ಲಿ ಪ್ರತಿಧ್ವನಿಸಲಿವೆ.

Facebook Comments