ವಿಧಾನಸಭೆಯಲ್ಲಿ ವಿಧಾನಮಂಡಲ ಜಂಟಿ ಪರಿಶೀಲನಾ ಸಮಿತಿ ವಿಧೇಯಕ ಮಂಡನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.22- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಾರ್ಡ್‍ಗಳ ಸಂಖ್ಯೆ ಹೆಚ್ಚಳ ಮಾಡುವ ಕರ್ನಾಟಕ ವಿಧಾನ ಮಂಡಲದ ಜಂಟಿ ಪರಿಶೀಲನಾ ಸಮಿತಿಯ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು. 2020ನೆ ಸಾಲಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಧೇಯಕದ ಪರಿಶೀಲನೆಗಾಗಿ ರಚಿಸಲಾಗಿರುವ ಜಂಟಿ ಪರಿಶೀಲನಾ ಸಮಿತಿ ಅಧ್ಯಕ್ಷ ಎಸ್.ರಘು ವರದಿಯನ್ನು ಮಂಡಿಸಿದರು.

ವಿಧೇಯಕದಲ್ಲಿನ ಅಂಶಗಳಿಗೆ ಸಂಬಂಧಿಸಿದಂತೆ ಸಮಿತಿ ಪರಿಶೀಲಿಸಿ ವರದಿ ನೀಡಲು ಕಾಲಾವಕಾಶವನ್ನು ವಿಶೇಷ ವರದಿಯಲ್ಲಿ ಕೋರಲಾಗಿದೆ. ಬಿಬಿಎಂಪಿಯ ಚುನಾಯಿತ ಸದಸ್ಯರ ಅವಧಿ ಮುಗಿದಿದ್ದು, ಪಾಲಿಕೆಗೆ ಚುನಾವಣೆ ನಡೆಸಬೇಕಾಗಿದೆ. ಆದರೆ, ಈಗಿನ ವಿದ್ಯಮಾನಗಳು, ಬೆಂಗಳೂರು ನಗರದಲ್ಲಿ ಹೆಚ್ಚಾದ ಜನಸಂಖ್ಯೆ ಹಾಗೂ ವಿಸ್ತಾರವಾದ ಪ್ರದೇಶವನ್ನು ಗಮನಿಸಿರುವ ಸಮಿತಿ 1976ನೇ ಸಾಲಿನ ಕರ್ನಾಟಕ ನಗರ ಪಾಲಿಕೆಗಳ ಅಧಿನಿಯಮ ಪ್ರಕರಣ-7ಕ್ಕೆ ತಿದ್ದುಪಡಿ ತರುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕರ್ನಾಟಕ ನಗರ ಪಾಲಿಕೆಗಳ ಅಧಿನಿಯಮ 7 (1) ಉಪ ಪ್ರಕರಣ (ಅ) ತಂಡದಲ್ಲಿ 200 ಎಂಬ ಪದಗಳಿಗೆ 250 ಎಂಬ ಪದಗಳನ್ನು ಪ್ರತಿಯೋಜಿಸಬೇಕೆಂದು ಉಲ್ಲೇಖಿಸಲಾಗಿದೆ. ಸೆ.4ರಂದು ನಡೆದ ಸಮಿತಿ ಸಭೆಯಲ್ಲಿ ವರದಿ ಸಲ್ಲಿಸಲು ನವೆಂಬರ್ 10ರ ವರೆಗೆ ಕಾಲಾವಕಾಶ ಕೋರುವ ನಿರ್ಣಯ ಕೈಗೊಳ್ಳಲಾಯಿತು. ಅದರಂತೆ ಸಭಾಧ್ಯಕ್ಷರು ಸಮಿತಿಯ ಅವಧಿಯನ್ನು ನ.10ರ ವರೆಗೆ ವಿಸ್ತರಿಸಿದ್ದಾರೆ.

ಬಿಬಿಎಂಪಿ ವಿಧೇಯಕವನ್ನು ಕಳೆದ ಮಾರ್ಚ್‍ನಲ್ಲಿ ಮಂಡಿಸಿ ಪರ್ಯಾವಲೋಚಿಸಲು ತೆಗೆದುಕೊಂಡ ಸಂದರ್ಭದಲ್ಲಿ ಉಭಯ ಸದನಗಳ ಜಂಟಿ ಪರಿಶೀಲನಾ ಸಮಿತಿಗೆ ವಹಿಸುವಂತೆ ಸದಸ್ಯರು ಒತ್ತಾಯಿಸಿದ್ದರು. ಆಗ ವಿಧೇಯಕ ಜಂಟಿ ಪರಿಶೀಲನಾ ಸಮಿತಿಗೆ ವಹಿಸಲು ಸದನ ನಿರ್ಣಯ ಕೈಗೊಂಡಿತ್ತು. ಅದರಂತೆ ರಘು ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು.
ಇಂದು ಸದನದಲ್ಲಿ ಮಂಡನೆಯಾದ ಬಿಬಿಎಂಪಿ ಕಾಯ್ದೆಯಿಂದ ಈವರೆಗೆ ಇದ್ದ ಕೆಎಂಸಿ ಕಾಯ್ದೆಗೆ ಇತಿಶ್ರೀ ಹಾಡಿದಂತಾಗಿದೆ.

Facebook Comments