ಬೆಂಗಳೂರಲ್ಲಿ ಪಟಾಕಿ ಅವಾಂತರ : 10ಕ್ಕೂ ಹೆಚ್ಚು ಮಕ್ಕಳಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.15- ಪಟಾಕಿ ನಿಷೇಧ, ಹಸಿರು ಪಟಾಕಿ ಗೊಂದಲದ ನಡುವೆಯೇ ಪಟಾಕಿ ಹಚ್ಚಿ 10ಕ್ಕೂ ಹೆಚ್ಚು ಬಾಲಕರು ಕಣ್ಣಿಗೆ, ಮುಖಕ್ಕೆ ಗಾಯ ಮಾಡಿಕೊಂಡು ನಿನ್ನೆ ರಾತ್ರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

10 ಮಂದಿಯಲ್ಲಿ ನಾಲ್ವರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ನಾಲ್ವರು ಆಸ್ಪತ್ರೆಗೆ ದಾಖಲಾಗಿದ್ದರೆ, ಆರು ಮಂದಿ ನಿನ್ನೆ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಪಟಾಕಿ ಸಿಡಿತದಿಂದ ಗಾಯಗೊಂಡ 12 ವರ್ಷದ ಸುವೇಲ್ ಎಂಬ ಬಾಲಕ ಮಿಂಟೋ ಕಣ್ಣಾಸ್ಪತ್ರೆಗೆ ದಾಖಲಾಗಿದ್ದಾನೆ. ಹೂವಿನ ಕುಂಡ ಹಚ್ಚುವ ವೇಳೆ ಗಾಯಗೊಂಡಿದ್ದು, ಈತನ ಎರಡು ಕಣ್ಣುಗಳಿಗೂ ಹಾನಿಯಾಗಿದೆ.

ವಿಜಯಾನಂದನಗರದಲ್ಲಿ ನಿನ್ನೆ ಹೂವಿನ ಕುಂಡ ಹಚ್ಚುವಾಗ ಬೆಂಕಿ ಈತನ ಕಣ್ಣಿಗೆ ತಾಗಿದೆ. ಈತನನ್ನು ಕೂಡಲೇ ಮಿಂಟೋ ಕಣ್ಣಾಸ್ಪತ್ರೆಗೆ ದಾಖಲಿಸಲಾಗಿದೆ. ಎರಡು ಕಣ್ಣುಗಳಿಗೂ ಹಾನಿಯಾಗಿದೆ ಎಂದು ವೈದ್ಯರು ತಿಳಿಸಿದ್ದು, ಚಿಕಿತ್ಸೆ ಮುಂದುವರಿಸಿದ್ದಾರೆ.

ಅದೇ ರೀತಿ ಆರು ಮಂದಿ ಬಾಲಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ನಾರಾಯಣ ನೇತ್ರಾಲಯದಲ್ಲಿ ಚಿಕಿತ್ಸೆ ನೀಡಲಾಗಿದೆ.ಎಷ್ಟೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡರೂ ಅನಾಹುತಗಳು ಸಂಭವಿಸುತ್ತಲೇ ಇರುತ್ತವೆ. ಪಟಾಕಿ ಅನಾಹುತದಿಂದ ಕಣ್ಣಿಗೆ ಗಾಯಗಳಾಗುವುದು ಹೆಚ್ಚು.

ಹೀಗಾಗಿ ಗಾಯಗೊಂಡವರಿಗೆ ಚಿಕಿತ್ಸೆ ನೀಡಲು ದಿನದ 24 ಗಂಟೆ ತುರ್ತು ಚಿಕಿತ್ಸೆ ನೀಡಲು ಮಿಂಟೋ ಕಣ್ಣಾಸ್ಪತ್ರೆ ಎಲ್ಲಾ ವ್ಯವಸ್ಥೆ ಮಾಡಿಕೊಂಡಿದೆ. ಗಾಯಾಳುಗಳು ಸಹಾಯವಾಣಿ 9480832430ಗೆ ಕರೆ ಮಾಡಿ ಚಿಕಿತ್ಸೆ ಕುರಿತು ಮಾಹಿತಿ ಪಡೆಯಬಹುದು.

Facebook Comments

Sri Raghav

Admin