ಟಿಪ್ಪರ್ ಹರಿದು ತಾಯಿ-ಮಗು ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

ಮಂಡ್ಯ, ಸೆ.21- ಟಿಪ್ಪರ್ ಲಾರಿ ಹರಿದು ತಾಯಿ-ಮಗು ಸ್ಥಳದಲ್ಲೇ ಸಾವನ್ನಪ್ಪಿ, ಪತಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ತಾಲೂಕಿನ ಹೊಳಲು ಗ್ರಾಮದಲ್ಲಿ ನಡೆದಿದೆ. ಹಾಡ್ಯ ಗ್ರಾಮದ ಶಶಿಕಲಾ(35), ಲಾವಣ್ಯ(4), ಮೃತಪಟ್ಟ ದುರ್ದೈವಿಗಳಾಗಿದ್ದು, ಸಣ್ಣಪುಟ್ಟ ಗಾಯಗಳೊಂದಿಗೆ ಪತಿ ದೇವರಾಜು (45) ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆ ವಿವರ: ಮಂಡ್ಯ ತಾಲೂಕಿನ ಹಾಡ್ಯ ಗ್ರಾಮದ ದೇವರಾಜು ಎಂಬುವವರು ಇಂದು ಬೆಳಗ್ಗೆ ಅನಾರೋಗ್ಯದಿಂದಾಗಿ ಮಗಳು ಲಾವಣ್ಯಳಿಗೆ ಚಿಕಿತ್ಸೆ ಕೊಡಿಸಲು ತಮ್ಮ ಟಿವಿಎಸ್ ಸ್ಕೂಟರ್‍ನಲ್ಲಿ ಮಂಡ್ಯದ ಖಾಸಗಿ ಆಸ್ಪತ್ರೆಗೆ ಪತ್ನಿ ಶಶಿಕಲಾರೊಂದಿಗೆ ಬಂದಿದ್ದರು. ಮಗುವಿನ ಚಿಕಿತ್ಸೆ ಬಳಿಕ ಸ್ವಗ್ರಾಮಕ್ಕೆ ವಾಪಸ್ ತೆರಳುವ ಮಾರ್ಗ ಮಧ್ಯೆ ಹೊಳಲು ಗ್ರಾಮದ ಸರ್ಕಲ್‍ನಲ್ಲಿ ಹಿಂದಿನಿಂದ ಬಂದ ಟಿಪ್ಪರ್ ಲಾರಿ ಟಿವಿಎಸ್‍ಗೆ ಡಿಕ್ಕಿ ಹೊಡೆದಿದೆ.

ಕೆಳಗೆ ಬಿದ್ದ ತಾಯಿ-ಮಗು ಮೇಲೆ ಲಾರಿಯ ಚಕ್ರ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪವಾಡ ಸದೃಶ ರೀತಿಯಲ್ಲಿ ದೇವರಾಜು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುದ್ದಿ ತಿಳಿದ ಗ್ರಾಮಾಂತರ ಠಾಣೆ ಪಿಎಸ್‍ಐ ಸಿದ್ದರಾಜು ನೇತೃತ್ವದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಆಂಬುಲೆನ್ಸ್‍ನಲ್ಲಿ ಶವಗಳನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು.
ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments