ಮಗುವನ್ನು ನೀರಿನಲ್ಲಿ ಮುಳುಗಿಸಿ ಕೊಂದು ಆತ್ಮಹತ್ಯೆಗೆ ಶರಣಾದ ತಾಯಿ..!
ಚಿತ್ರದುರ್ಗ,ಫೆ.25-ಮಾನಸಿಕ ಖಿನ್ನತೆಗೊಳಗಾಗಿದ್ದ ಮಹಿಳೆ ತನ್ನ 10 ತಿಂಗಳ ಮಗುವನ್ನು ನೀರಿನಲ್ಲಿ ಮುಳುಗಿಸಿ ಹತ್ಯೆ ಮಾಡಿ ನಂತರ ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಚಿಕ್ಕಜಾಜೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಐನಹಳ್ಳಿ ಗ್ರಾಮದ ಆಶಾ ಬಾಯಿ(24) ಎಂಬಾಕೆ ತನ್ನ 10 ತಿಂಗಳ ಹೆಣ್ಣುಮಗುವನ್ನು ಹತ್ಯೆ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ಮಹಿಳೆ.
ಎರಡು ವರ್ಷಗಳ ಹಿಂದೆ ಹೊಳಲ್ಕೆರೆಯ ಲಂಬಾಣಿ ಹಟ್ಟಿ ನಿವಾಸಿ ಹೇಮಂತ್ ಎಂಬುವರ ಜೊತೆ ಪ್ರೇಮ ವಿವಾಹವಾಗಿದ್ದ ಆಶಾ ಬಾಯಿ ಹೆಣ್ಣುವಿಗೆ ಜನ್ಮ ನೀಡಿದ್ದರು.
ಹೆರಿಗೆಯಾದ ನಂತರ ಪದೇ ಪದೇ ತೀವ್ರ ಹೊಟ್ಟೆ ನೋವು ಬರುತ್ತಿತ್ತು ಎನ್ನಲಾಗಿದೆ. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಆಶಾ ಬಾಯಿ ತಾನು ಸತ್ತರೆ ಮಗು ಅನಾಥವಾಗಬಾರದು ಎಂದು ನಿರ್ಧರಿಸಿ ನಿನ್ನೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೀರಿನ ಟಬ್ನಲ್ಲಿ ಮಗುವನ್ನು ಮುಳುಗಿಸಿ ಸಾಯಿಸಿ ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಚಿಕ್ಕಜಾಜೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.