ತನ್ನ ಹೆಣ್ಣುಮಗುವನ್ನು ಕೊಂದಿದ್ದ ತಾಯಿ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.7- ತನ್ನ ಮೂರು ವರ್ಷದ ಹೆಣ್ಣು ಮಗುವನ್ನು ಕೊಲೆ ಮಾಡಿದ್ದ ತಾಯಿಯನ್ನು ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯ ಮಲ್ಲತ್ತಹಳ್ಳಿ ನಿವಾಸಿ ಸುಧಾ (35) ಬಂಧಿತ ಆರೋಪಿ. ಸುಧಾ ಮನೆ ಕೆಲಸಕ್ಕೆ ಹೋಗುತ್ತಿದ್ದರಲ್ಲದೆ ಟೈಲ್ಸ್ ಅಂಗಡಿಯಲ್ಲಿಯೂ ಕೆಲಸ ಮಾಡುತ್ತಿದ್ದರು.

ವೀರಣ್ಣ-ಸುಧಾ ದಂಪತಿ ಆಗಾಗ್ಗೆ ಜಗಳವಾಡುತ್ತಿದ್ದರು. ನಿನ್ನೆ ಸಂಜೆಯೂ ದಂಪತಿ ಮಧ್ಯೆ ಜಗಳವಾಗಿದೆ. ಆ ಸಂದರ್ಭದಲ್ಲಿ ಮೂರು ವರ್ಷದ ಮಗು ಅಪ್ಪನ ಪರವಾಗಿ ಮಾತನಾಡುತ್ತಿತ್ತು. ಅಪ್ಪನ ಬಗ್ಗೆ ಅತಿಯಾದ ಪ್ರೀತಿ ಹೊಂದಿದ್ದ ಮಗುವಿನ ವರ್ತನೆಯಿಂದ ತಾಯಿ ಕೋಪಗೊಂಡು ಮನೆಯಿಂದ ಹೊರಗೆ ಕರೆದುಕೊಂಡು ಹೋಗಿದ್ದಾಳೆ. ತಾಯಿ ಸುಧಾ ತನ್ನ ಮಗಳ ಕುತ್ತಿಗೆಯನ್ನು ವೇಲ್‍ನಿಂದ ಬಿಗಿದು ಕೊಲೆ ಮಾಡಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ದೀಪಾ ಕಾಂಪ್ಲೆಕ್ಸ್ ಹಿಂಭಾಗದ ನಿರ್ಮಾಣ ಹಂತದ ಕಟ್ಟಡದ
ಬಳಿ ಶವ ಇಟ್ಟು ಮನೆಗೆ ಬಂದಿದ್ದಾಳೆ.

ಇತ್ತ ಮಗುವಿನ ತಂದೆ ವೀರಣ್ಣ, ಮಗು ಕಾಣೆಯಾಗಿರುವ ಬಗ್ಗೆ ಜ್ಞಾನಭಾರತಿ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶೋಧ ಕಾರ್ಯ ಕೈಗೊಂಡಾಗ ನಿರ್ಮಾಣ ಹಂತದ ಕಟ್ಟಡದಲ್ಲಿ ಮಗುವಿನ ಶವ ಪತ್ತೆಯಾಗಿದೆ. ಈ ಬಗ್ಗೆ ತಾಯಿ ಸುಧಾಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಮಗಳನ್ನು ಕೊಲೆ ಮಾಡಿರುವುದು ಗೊತ್ತಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments