ಕೊರೋನಾ ಆತಂಕ, ಅಧಿಕಾರಿಗಳ ಯಡವಟ್ಟು, ರಾಗಿಗುಡ್ಡ ಸೀಲ್‍ಡೌನ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.4- ಕ್ವಾರಂಟೈನ್ ಅವಧಿ ಮುಗಿ ಯುವ ಮುನ್ನವೇ ಮನೆಗೆ ಕಳುಹಿಸಿದ್ದ ತಾಯಿ-ಮಗ ಇಬ್ಬರಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಿದ್ದು, ಬೆಂಗಳೂರಿನ ಮತ್ತೊಂದು ಸ್ಲಂಗೆ ಕೊರೊನಾ ವಕ್ಕರಿಸಿದ ಪರಿಣಾಮ ಏರಿಯಾವನ್ನು ಸೀಲ್‍ಡೌನ್ ಮಾಡಲಾಗಿದೆ.

ದಿನೇ ದಿನೇ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಕಳೆದೆರಡು ದಿನಗಳಿಂದ 200ಕ್ಕೂ ಹೆಚ್ಚು ಸೋಂಕಿತರು ಕಂಡುಬರುತ್ತಿದ್ದು, ಇಂದು ಕೂಡ ಹೊಸ ಸೋಂಕಿತರ ಪ್ರಮಾಣ ಹೆಚ್ಚಾಗಲಿರುವ ಆತಂಕದ ನಡುವೆ ರಾಜಧಾನಿ ಬೆಂಗಳೂರಿನಲ್ಲಿ ಈ ಘಟನೆ ನಡೆದಿದ್ದು, ಕೊರೊನಾ ಭೀತಿ ಮತ್ತಷ್ಟು ಹೆಚ್ಚಾಗಿದೆ.

ದೆಹಲಿಯಿಂದ ಹಿಂದಿರುಗಿದ್ದ ತಾಯಿ-ಮಗನನ್ನು ಹೆಬ್ಬಾಳದ ಬಿಸಿಎಂ ಹಾಸ್ಟೆಲ್‍ನಲ್ಲಿ ಕ್ವಾರಂಟೈನ್‍ನಲ್ಲಿಡಲಾಗಿತ್ತು. ಏಳು ದಿನಗಳ ಕ್ವಾರಂಟೈನ್ ಬಳಿಕ ಅಧಿಕಾರಿಗಳು ಮನೆಗೆ ಕಳುಹಿಸಿದ್ದರು. ಮನೆಗೆ ಕಳುಹಿಸುವ ವೇಳೆ ಗಂಟಲು ದ್ರವ ತೆಗೆದು ಲ್ಯಾಬ್‍ಗೆ ಕಳುಹಿಸಲಾಗಿತ್ತು. ರಿಪೋರ್ಟ್ ಬರುವ ಮುನ್ನವೇ ಮನೆಗೆ ಕಳುಹಿಸಿ ಅಧಿಕಾರಿಗಳು ಎಡವಟ್ಟು ಮಾಡಿದ್ದರು.

ಆದರೆ, ಮನೆಗೆ ಕಳುಹಿಸಿದ ಮೇಲೆ ತಾಯಿ-ಮಗನಿಗೆ ಪಾಸಿಟಿವ್ ಬಂದಿದೆ. ಈ ತಾಯಿ-ಮಗ ಇಬ್ಬರೂ ಬೆಂಗಳೂರಿನ ಜೆಪಿ ನಗರದ ರಾಗಿಗುಡ್ಡದ ಸ್ಲಂ ನಿವಾಸಿಗಳಾಗಿದ್ದು, ಈಗ ರಾಗಿಗುಡ್ಡ ಸ್ಲಂಅನ್ನು ಸಂಪೂರ್ಣ ಸೀಲ್‍ಡೌನ್ ಮಾಡಲಾಗಿದೆ. ಕ್ವಾರಂಟೈನ್ ಕೇಂದ್ರದಿಂದ ತಾಯಿ-ಮಗ ಮನೆಗೆ ಬರುತ್ತಿದ್ದಂತೆ ಮನೆಯ ಎದುರು ಇರುವ ಪುಟ್ಟ ಪುಟ್ಟ ಮಕ್ಕಳನ್ನು ಈ ಸೋಂಕಿತ ಮಹಿಳೆ ಮುದ್ದಾಡಿದ್ದಾರೆ. ಸ್ಲಂನ ಕೆಲ ಪ್ರದೇಶದ ತುಂಬ ತಾಯಿ-ಮಗ ಓಡಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಂಕು ವ್ಯಾಪಿಸಿರುವ ಆತಂಕ ಎದುರಾಗಿದೆ.

ಇವರ ಸಂಪರ್ಕಿತರಲ್ಲಿ ಸೋಂಕಿನ ಭೀತಿ ಶುರುವಾಗಿದೆ. ಹೀಗಾಗಿ ಜೆಪಿ ನಗರದ ರಾಗಿಗುಡ್ಡದ ಬಳಿ ಇರುವ ಸ್ಲಂಅನ್ನು ಅಧಿಕಾರಿಗಳು ಸಂಪೂರ್ಣ ಸೀಲ್‍ಡೌನ್ ಮಾಡಿದ್ದಾರೆ.ಕೊರೊನಾ ಪಾಸಿಟಿವ್ ಕಂಡುಬಂದ ತಾಯಿ-ಮಗನನ್ನು ನಿಗದಿತ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇವರ ಸಂಪರ್ಕದಲ್ಲಿದ್ದವರನ್ನೆಲ್ಲ ಕ್ವಾರಂಟೈನ್ ಮಾಡಲಾಗಿದೆ. ಇಡೀ ಏರಿಯಾವನ್ನು ಸೀಲ್‍ಡೌನ್ ಮಾಡಲಾಗಿದೆ.

ಈಗಾಗಲೇ ಇದೇ ರೀತಿ ಬಾಪೂಜಿನಗರವನ್ನೂ ಸೀಲ್‍ಡೌನ್ ಮಾಡಲಾಗಿತ್ತು. ನಗರದಲ್ಲಿ ಮತ್ತೊಂದು ಪ್ರದೇಶವನ್ನು ಸೀಲ್‍ಡೌನ್ ಮಾಡಲಾಗಿದೆ. ದೆಹಲಿ, ಮುಂಬೈ, ಚೆನ್ನೈ ಸೇರಿದಂತೆ ಹೊರರಾಜ್ಯದಿಂದ ನಗರಕ್ಕೆ ಆಗಮಿಸುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಅವರನ್ನು ಕ್ವಾರಂಟೈನ್‍ನಲ್ಲಿಡಲು ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ.

ಸಣ್ಣಪುಟ್ಟ ಎಡವಟ್ಟಿನಿಂದ ಸೋಂಕು ವ್ಯಾಪಿಸುತ್ತಿದೆ. ನಗರದಲ್ಲಿ ಈಗಾಗಲೇ 40ಕ್ಕೂ ಹೆಚ್ಚು ಪ್ರದೇಶಗಳನ್ನು ಕಂಟೈನ್ಮೆಂಟ್ ವಲಯ ಎಂದು ಗುರುತಿಸಿ ಹೆಚ್ಚಿನ ನಿಗಾ ವಹಿಸಲಾಗಿದೆ. ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ.

ಗಲ್ಲಿ ಗಲ್ಲಿಗೆ ಕೊರೊನಾ ಸೋಂಕು ವ್ಯಾಪಿಸತೊಡಗಿದೆ. ಕಂಟೈನ್ಮೆಂಟ್ ಝೋನ್‍ನ ನಿಯಮಗಳನ್ನು ಸರ್ಕಾರ ಬದಲಿಸಿ ಆದೇಶ ನೀಡಿದೆ. ಹಲವೆಡೆ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಅಧಿಕಾರಿಗಳ ಎಡವಟ್ಟು ಸೋಂಕಿತರು ಹಾಗೂ ಶಂಕಿತರ ತಾಳ್ಮೆ ರಹಿತ ವರ್ತನೆಯಿಂದ ಹಲವಾರು ರೀತಿಯ ತಪ್ಪುಗಳಾಗುತ್ತಿದ್ದು, ಅವುಗಳ ಮೇಲೆ ನಿಗಾ ವಹಿಸಬೇಕಾಗಿದೆ.

Facebook Comments