ಭಾವನೆಗಳ ಕದ ತಟ್ಟುವ “ಮೌನಂ” ( ಚಿತ್ರ ವಿಮರ್ಶೆ)

ಈ ಸುದ್ದಿಯನ್ನು ಶೇರ್ ಮಾಡಿ

ಚಿತ್ರ : ಮೌನಂ
ನಿರ್ದೇಶಕ : ರಾಜ್ ಪಂಡಿತ್
ನಿರ್ಮಾಪಕರು : ಶ್ರೀಹರಿ ರೆಡ್ಡಿ
ಸಂಗೀತ : ಆರವ್ ರುಷಿಕ್
ಪಾತ್ರವರ್ಗ : ಬಾಲಾಜಿ ಶರ್ಮಾ , ಮಯೂರಿ , ಅವಿನಾಶ್, ರಿತೇಶ್ , ಕೆಂಪೇಗೌಡ , ಹನುಮಂತೇಗೌಡ, ನಯನ, ಗುಣವಂತ ಮಂಜು ಹಾಗೂ ಇತರರು.

ಪ್ರೀತಿ ಕುರುಡು ಅನ್ನೋ ಮಾತಿದೆ , ಅದು ಯಾವಾಗ ಹೇಗೆ ಬರುತ್ತೆ ಎಂಬುದು ಯಾರಿಗೂ ತಿಳಿಯುವುದಿಲ್ಲ ಆದರೆ ಎಲ್ಲದಕ್ಕೂ ಒಂದು ಕಾಲಮಿತಿ ಅನ್ನೋದು ಇದ್ದೇ ಇರುತ್ತದೆ. ಅದನ್ನು ಮೀರಿ ಪ್ರೀತಿ , ವ್ಯಾಮೋಹ ಹುಟ್ಟಿಕೊಂಡರೆ ಅದಕ್ಕೆ ಏನೆಂದು ಹೇಳುವುದೇ ಒಂದು ಯಕ್ಷಪ್ರಶ್ನೆಯಾಗಿ ಉಳಿಯುತ್ತದೆ. ಇಂತಹ ಹಲವಾರು ಪ್ರಶ್ನೆಗಳಿಗೆ ಉತ್ತರ ನೀಡಲು ಈ ವಾರ ತೆರೆಯ ಮೇಲೆ ಬಂದಿರುವಂತಹ ಚಿತ್ರವೇ “ಮೌನಂ”

ಸಾಮಾನ್ಯವಾಗಿ ಒಬ್ಬ ಮನುಷ್ಯ ಸಂದರ್ಭಕ್ಕೆ ತಕ್ಕಂತೆ ಅನುಗುಣವಾಗಿ ನಡೆದುಕೊಳ್ಳುವುದು ಸಹಜ. ಅದು ಸೇರಿ ಇರಲಿ… ತಪ್ಪೇ ಆಗಿರಲಿ… ವ್ಯಕ್ತಿಯ ವ್ಯಕ್ತಿತ್ವದಲ್ಲಿ ಒಬ್ಬ ನಾಯಕನೂ ಇರುತ್ತಾನೆ. ಖಳ ನಾಯಕನೂ ಇರುತ್ತಾನೆ. ಅದನ್ನು ಅವನು ಯಾವ ಸಮಯದಲ್ಲಿ ಬಳಸಿಕೊಳ್ಳುತ್ತಾನೆ ಎಂಬುದಷ್ಟೇ ಮುಖ್ಯವಾಗಿರುತ್ತದೆ.  ಈ ಚಿತ್ರದ ಕಥಾ ಪಯಣದಲ್ಲಿ ಮೂರು ಪಾತ್ರಧಾರಿಗಳ ಸುತ್ತ ಗಿರಕಿ ಹೊಡೆದರೂ ಉಳಿದ ಪಾತ್ರಗಳು ಬೆನ್ನೆಲುಬಾಗಿ ನಿಲ್ಲುವುದು ವಿಶೇಷ. ಸಮಯ ಸಂದರ್ಭ ಮನುಷ್ಯನ ಬದುಕಿನ ದಿಕ್ಕೇ ದಿಕ್ಕನ್ನೇ ಬದಲಿಸುತ್ತದೆ.

ತನ್ನ ಹೆಂಡತಿ ಒಂದು ಮಗುವನ್ನು ತನ್ನ ಕೈಗಿಟ್ಟು ಇಹಲೋಕ ತ್ಯಜಿಸಿದ ಮೇಲೆ ಒಂಟಿಯಾಗುವ ಅವಿನಾಶ್‍ಗೆ ಆ ಮಗುವೇ ಪ್ರಪಂಚವಾಗಿರುತ್ತದೆ. ಅದನ್ನು ಲಾಲನೆ, ಪಾಲನೆ ಮಾಡುವುದರಲ್ಲೇ ಜೀವನದ ಆನಂದ ಅನುಭವಿಸುತ್ತಾನೆ. ತಾನು ಮತ್ತೊಂದು ಮದುವೆಯಾದರೆ ತನ್ನ ಪುತ್ರನ ಮೇಲಿನ ಪ್ರೀತಿ ಕಮ್ಮಿಯಾಗುವುದೋ ಎಂಬ ಕಾರಣಕ್ಕೆ ಮದುವೆಯಿಂದ ದೂರ ಉಳಿಯುತ್ತಾನೆ. ಮುಂದೆ ತನ್ನ ಮಗ (ನಾಯಕ) ಬಾಲಾಜಿ ಶರ್ಮಾ ಓದಿ ಬೆಳೆದು ವಿದ್ಯಾವಂತನಾಗಿ ಕಾಲೇಜಿನ ಉತ್ತಮ ವಿದ್ಯಾರ್ಥಿಯಾಗಿ ಗುರುತಿಸಿಕೊಳ್ಳುವುದರ ಜೊತೆಗೆ ತನ್ನ ತಂದೆಯನ್ನೇ ಸರ್ವಸ್ವ ಎಂದುಕೊಂಡಿರುತ್ತಾನೆ.

ಹೀಗಿರುವಾಗ ಕಾಲೇಜಿನಲ್ಲಿ ಹುಡುಗಿಯರ ಗುಂಪು ಕಟ್ಟಿಕೊಂಡು ಪುಂಡಾಟಿಕೆ ಮಾಡುವ (ನಾಯಕಿ) ಮಯೂರಿ. ಇದರ ನಡುವೆ ಕಾಲೇಜು ಕ್ಯಾಂಪಸ್ ನಲ್ಲಿ ನಡೆಯುವ ಒಂದಷ್ಟು ಗಲಾಟೆ , ಹೊಡೆದಾಟವಾಗುತ್ತದೆ. ನಾಯಕನ ಒಳ್ಳೆತನವನ್ನು ಕಂಡು ನಾಯಕಿ ಅವನನ್ನು ಪ್ರೀತಿಸಲು ಮುಂದಾಗುತ್ತಾಳೆ. ಅದಕ್ಕೆ ಒಂದಷ್ಟು ಕಸರತ್ತನ್ನು ಕೂಡ ಮಾಡುತ್ತಾಳೆ. ಇದೆಲ್ಲವನ್ನು ಗಮನಿಸುವ ನಾಯಕ ನಾಯಕಿಯ ಪ್ರೀತಿಗೆ ಮನಸೋತು ಒಂದು ಕಂಡೀಷನ್ ಹಾಕುತ್ತಾನೆ. ತನ್ನ ತಂದೆಯನ್ನು ಒಪ್ಪಿಸಿದರೆ ತಾನು ಮದುವೆಗೆ ಸಿದ್ಧ ಎನ್ನುತ್ತಾನೆ. ಇದು ನಾಯಕಿಗೆ ಚಾಲೆಂಜ್ ಆಗಿರುತ್ತದೆ ಜೊತೆಗೆ ಕಥೆಯ ಟ್ವಿಸ್ಟ್ ಕೂಡ ಇಲ್ಲಿಂದ ಪಡೆದುಕೊಳ್ಳುತ್ತಾ ಹೋಗುತ್ತದೆ.

ತಾನು ಹೇಗಾದರೂ ಮಾಡಿ ಭಾವೀ ಮಾವನ ಮನಸ್ಸನ್ನು ಗೆಲ್ಲಬೇಕೆಂದು ಮಯೂರಿ ಮಾಡಿದ ತಂತ್ರ ಫಲಿಸುತ್ತದೆ. ಆದರೆ, ಈಚೆಗೆ ತನ್ನ ಮಗನ ನಡವಳಿಕೆಯಿಂದ ಸ್ವಲ್ಪ ವಿಚಲಿತನಾಗಿದ್ದ ಅವಿನಾಶ್‍ಗೆ ಮಯೂರಿಯ ಸ್ನೇಹ ಹೊಸ ಚೈತನ್ಯ ಸಿಕ್ಕಂತೆ ಆಗುತ್ತದೆ. ಇದು ಪ್ರೀತಿಯೋ, ವ್ಯಾಮೋಹವೊ, ಕಾಮವೋ ಎಂಬ ಗೊಂದಲ ಎದುರಾಗುತ್ತದೆ. ಪ್ರೀತಿಗೆ ವಯಸ್ಸು ಮುಖ್ಯವಲ್ಲ ಎಂದು ನಾಯಕನ ತಂದೆ ಇನ್ನಿಲ್ಲದ ಕಸರತ್ತು ಮಾಡುತ್ತಾನೆ. ಆದರೆ ಅಚಾನಕ್ಕಾಗಿ ತನ್ನ ಮಗ ಪ್ರೀತಿಸುವ ಹುಡುಗಿಯನ್ನು ತಾನು ಇಷ್ಟಪಡುವ ವಿಚಾರ ತಿಳಿದು ಆಘಾತಕ್ಕೊಳಗಾಗುತ್ತಾನೆ. ಇಲ್ಲಿಂದ ಚಿತ್ರದ ಓಟಕ್ಕೆ ಒಂದು ಹೊಸ ತಿರುವು ಪಡೆದುಕೊಳ್ಳುತ್ತದೆ. ಮನುಷ್ಯನ ಮನಸ್ಸು ಎಷ್ಟು ಚಂಚಲ ಅವನ ಆಲೋಚನೆ , ದುರಾಲೋಚನೆ ಎಲ್ಲವೂ ಏನೆಲ್ಲಾ ಎಡವಟ್ಟುಗಳನ್ನು ತರುತ್ತದೆ ಎಂಬುವುದೇ ಹೈಲೈಟ್. ಕ್ಲೈಮ್ಯಾಕ್ಸ್ ನಲ್ಲಿ ಮಾವ ತನ್ನ ಇಷ್ಟಪಟ್ಟ ಹುಡುಗಿಯನ್ನು ಮದುವೆಯಾಗುತ್ತಾನಾ ಅಥವಾ ಮಗನ ಪ್ರೇಯಸಿ ಎಂದು ತನ್ನ ತಪ್ಪು ಅರಿತುಕೊಳ್ಳುತ್ತಾನಾ ಇಲ್ಲ ಇದಕ್ಕೆಲ್ಲ ಬೇರೆಯದೇ ದಾರಿಯನ್ನು ಹುಡುಕುತ್ತಾನಾ ಎಂಬ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಬೇಕೆಂದರೆ ನೀವೆಲ್ಲರೂ ಮೌನಂ ಚಿತ್ರವನ್ನು ತೆರೆಯ ಮೇಲೆ ನೋಡಲೇಬೇಕು.

ಇದೊಂದು ವಿಭಿನ್ನ ಪ್ರಯತ್ನದ ಚಿತ್ರವಾದರೂ , ಚಿತ್ರರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿಕೊಂಡರುವ ಹಿರಿಯ ನಟ ಅವಿನಾಶ್ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿದ್ದಾರೆ. ಚಿತ್ರದ ಓಟಕ್ಕೆ ಪ್ರಮುಖ ರೂವಾರಿಯೇ ಇವರು. ಇಳಿ ವಯಸ್ಸಿನಲ್ಲಿ ಎದುರಾಗುವ ಸಮಸ್ಯೆಗಳು ಆಸೆ ಆಕಾಂಕ್ಷೆಗಳ ಪಾತ್ರಕ್ಕೆ ಪರಕಾಯ ಪ್ರವೇಶ ಮಾಡಿ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಇನ್ನು ಪ್ರಥಮ ಬಾರಿಗೆ ನಾಯಕ ನಟನಾಗಿ ಬಿಳಿ ಪರದೆ ಪ್ರವೇಶಿಸಿರುವ ಯುವ ನಟ ಬಾಲಾಜಿ ಶರ್ಮಾ ನೋಡಲು ಕಟ್ ಮಾಸ್ತ್ ಹೀರೋ ಆಗಿ ಆ್ಯಕ್ಷನ್ ದೃಶ್ಯಗಳಲ್ಲಿ ಮಿಂಚಿದ್ದಾರೆ. ಅಭಿನಯ ವಿಚಾರದಲ್ಲಿ ಮತ್ತಷ್ಟು ತಾಲೀಮು ಪಡೆದರೆ ಮುಂದೆ ಉತ್ತಮ ಭವಿಷ್ಯ ಸಿಗಲಿದೆ.

ಇನ್ನು ಕಿರುತೆರೆಯಲ್ಲಿ ಮುಚ್ಚಿದಂತ ನಟಿ ಮಯೂರಿ ಒಂದಷ್ಟು ಸಿನಿಮಾಗಳಲ್ಲಿ ಗಮನ ಸೆಳೆದಿದ್ದರು , ಆದರೆ ಈ ಚಿತ್ರದಲ್ಲಿ ವಿಭಿನ್ನ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿದ್ದಾರೆ. ಮತ್ತಷ್ಟು ಹಿಡಿತವಿದ್ದರೆ ಚೆನ್ನಾಗಿರುತ್ತಿತ್ತು , ಮಾತಿನ ಆರ್ಭಟ ಸ್ವಲ್ಪ ಅತಿ ಎನಿಸಿದರೂ ಚಿತ್ರದ ಓಟ ತೇಲಿಸಿಕೊಂಡು ಹೋಗುತ್ತದೆ.ಉಳಿದಂತೆ ನಾಯಕನ ಗೆಳೆಯನಾಗಿ ಕಾಣಿಸಿಕೊಂಡಿರುವ ರಿತೀಶ್ ಹಾಗೂ ಕೆಂಪೇಗೌಡ ಹಾಸ್ಯ ಚಟಾಕಿಯನ್ನು ಆರಿಸುತ್ತಾ ಗಮನ ಸೆಳೆಯುತ್ತಾರೆ. ಹಾಗೆಯೇ ಹನುಮಂತೇಗೌಡ , ನಯನ , ಗುಣವಂತ ಮಂಜು ಸೇರಿದಂತೆ ಎಲ್ಲ ಪಾತ್ರಗಳು ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ. ಉಳಿದಂತೆ ಛಾಯಾಗ್ರಾಹಕ ಶೇಖರ್ ಕೆಲಸ ಗಮನಾರ್ಹವಾಗಿದ್ದು , ಸಂಗೀತ ನಿರ್ದೇಶಕ ಆರವ್ ರುಷಿಕ್ ಕೆಲಸ ಮೆಚ್ಚುವಂತಿದೆ.

ನಿಶ್ಯಬ್ದಕ್ಕೂ ಒಂದು ಅರ್ಥವಿದೆ ಎಂಬ ಟ್ಯಾಗ್ ಲೈನ್ ಗೆ ಸೂಕ್ತವಂತೆ ಯುವ ನಿರ್ದೇಶಕ ರಾಜ್ ಪಂಡಿತ್ ಒಂದು ಗಟ್ಟಿ ಕಥೆಯನ್ನು ಪ್ರೇಕ್ಷಕರ ಮುಂದೆ ತೆರೆದಿಟ್ಟಿದ್ದಾರೆ. ಇದು ಜೀರ್ಣಿಸಿಕೊಳ್ಳುವುದು ಕಷ್ಟವೆನಿಸಿದರೂ ಅದು ಎಲ್ಲರ ಗಮನವನ್ನು ಮುಟ್ಟಬೇಕೆಂಬ ಆಸೆ ಇವರದು , ಇವರಿಗೆ ಬೆನ್ನೆಲುಬಾಗಿ ನಿಂತ ಶ್ರೀಹರಿ ರೆಡ್ಡಿ ಧೈರ್ಯ ಮಾಡಿ ಒಂದು ವಿಭಿನ್ನ ಚಿತ್ರವನ್ನು ನಿರ್ಮಿಸುವುದರ ಮೂಲಕ ಗಮನ ಸೆಳೆದಿದ್ದಾರೆ. ಹೊಸತನ ಬಯಸುವ ಸಿನಿಪ್ರಿಯರಿಗಾಗಿ ಬಂದಿರುವಂತಹ “ಮೌನಂ” ಚಿತ್ರ ಬಹಳಷ್ಟು ವಿಚಾರಗಳ ಅನಾವರಣವನ್ನು ತೆರೆದಿಟ್ಟಿದೆ. ಎಲ್ಲರೂ ಒಮ್ಮೆ ಈ ಚಿತ್ರವನ್ನು ನೋಡಬಹುದು.

Facebook Comments

Sri Raghav

Admin