25 ಲಕ್ಷ ಹಜ್ ಯಾತ್ರಿಕರಿಂದ ಮೌಂಟ್ ಅರಾಫತ್ ಶಿಖರಾರೋಹಣ..!

ಈ ಸುದ್ದಿಯನ್ನು ಶೇರ್ ಮಾಡಿ

ಮೌಂಟ್ ಅರಾಫತ್(ಸೌದಿ ಅರೇಬಿಯಾ), ಆ.11-ಸುಮಾರು 25 ಲಕ್ಷ ಮುಸ್ಲಿಂ ಹಜ್ ಯಾತ್ರಿಕರು ಪವಿತ್ರ ಹಜ್ ಯಾತ್ರೆಯ ಪ್ರಮುಖ ಭಾಗವಾಗಿ ಮೆಕ್ಕಾ ನಗರಿಯ ಹೊರವಲಯದ ಪವಿತ್ರ ಮೌಂಟ್ ಅರಾಫತ್ ಶಿಖರಾರೋಹಣ ಮಾಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಕಳೆದ ವರ್ಷ ಮೌಂಟ್ ಅರಾಫತ್‍ನಲ್ಲಿ ನೂಕುನುಗ್ಗಲು ಮತ್ತು ಕಾಲ್ತುಳಿತದಿಂದ ಸಾವು-ನೋವು ಸಂಭವಿಸಿತ್ತು. ಇಂತಹ ದುರ್ಘಟನೆಗಳು ಮರುಕಳಿಸದಂತೆ ಪರ್ವತ ಏರುದಾರಿ ಮಾರ್ಗದುದ್ದಕ್ಕೂ ಸಹಸ್ರಾರು ಭದ್ರತಾ ಸಿಬ್ಬಂದಿಯನ್ನು ಉಸ್ತುವಾರಿಗೆ ನಿಯೋಜಿಸಲಾಗಿತ್ತು.

ಜಬಲ್-ಅಲ್-ರೆಹಮಾ ಅಥವಾ ಮೌಂಟ್ ಆಫ್ ಮರ್ಸಿ(ಕರುಣೆಯ ಪರ್ವತ) ಎಂದೇ ಕರೆಯಲ್ಪಡುವ ಮೌಂಟ್ ಅರಾಫತ್ ಪರ್ವತದ ತಪ್ಪಲಿನ ಮಾರ್ಗದಲ್ಲಿ ಬೆಟ್ಟವನ್ನೇರಲು ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದ ಯಾತ್ರಿಕರನ್ನು ನಿಯಂತ್ರಿಸಲು ಬ್ಯಾರಿಕೇಡ್‍ಗಳನ್ನು ಹಾಕಲಾಗಿತ್ತು. ಹಜ್ ಯಾತ್ರಿಗಳು ನೂಕುನುಗ್ಗಲು ಇಲ್ಲದೇ ಸರದಿ ಸಾಲಿನಲ್ಲಿ ಸಾಗಲು ವ್ಯವಸ್ಥಿತವಾಗಿ ಅನುವು ಮಾಡಿಕೊಡಲಾಯಿತು.

ಶ್ವೇತವಸ್ತ್ರಧಾರಿಗಳಾಗಿದ್ದ ಯಾತ್ರಿಕರು ಪರ್ವತವನ್ನು ಏರಿ ಅಲ್ಲಿ ಅಲ್ಲಾನಿಗೆ ಶ್ರದ್ಧಾ-ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದರೆ ತಮ್ಮ ಪಾಪ-ಕರ್ಮಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆ ಇದೆ. ಕೆಲವು ಯಾತ್ರಿಕರು ಪ್ರಾರ್ಥನೆ ಸಲ್ಲಿಸಿದ ನಂತರ ಹಿಂದಿರುಗಿದರೆ ಸಹಸ್ರಾರು ಆಸ್ತಿಕರು ಅಲ್ಲೇ ರಾತ್ರಿ ಬಯಲು ಪ್ರದೇಶದಲ್ಲಿ ವಾಸ್ತವ್ಯ ಹೂಡಿ ಲಕ್ಷಾಂತರ ನಕ್ಷತ್ರಗಳನ್ನು ವೀಕ್ಷಿಸುತ್ತಾ ಅಲ್ಲಾನ ಸ್ಮರಿಸುತ್ತಾ ರಾತ್ರಿ ಕಳೆಯುತ್ತಾರೆ.

Facebook Comments