ಮೋಜಿನ ಹಿಮಕ್ರೀಡೆಯಲ್ಲಿ ಸರಣಿ ದುರ್ಘಟನೆ : ಅನೇಕರಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

ಲೆಸ್‍ಡ್ಯೂಕ್ಸ್, ಜು.8- ಫ್ರಾನ್ಸ್‍ನ ಲೆಸ್‍ಡ್ಯೂಕ್ಸ್ ಬಳಿ ಇರುವ ವಿಶ್ವವಿಖ್ಯಾತ ಆಲ್ಸ್ ಪರ್ವತ ರೆಸಾರ್ಟ್‍ನಲ್ಲಿ ನಡೆದ ಮೋಜಿನ ಹಿಮಕ್ರೀಡೆ ದುರ್ಘಟನೆಗಳ ಸರಮಾಲೆಗೆ ಕಾರಣವಾಯಿತು.  3400ಮೀಟರ್ ಇಳಿಜಾರು ರೇಸ್‍ನಲ್ಲಿ ಭಾಗವಹಿಸಿದ್ದ ನೂರಾರು ಸೈಕಲ್ ಸವಾರರು ಸರಣಿ ಅಪಘಾತಕ್ಕೆ ಒಳಗಾಗಿ ಗಾಯಗೊಂಡರು.

ಪ್ರತಿವರ್ಷ ನಡೆಯುವ ಈ ಕ್ರೀಡೆಗೆ ಮೌಂಟನ್ ಆಫ್ ಹೆಲ್ ಎಂಬ ಹೆಸರಿದೆ. ಈ ವರ್ಷ ಹೆಸರಿಗೆ ತಕ್ಕಂತೆ ಈ ಪರ್ವತದಲ್ಲಿ ನರಕಸದೃಶ ವಾತಾವರಣ ಸೃಷ್ಟಿಯಾಯಿತು.  ರೇಸ್ ಆರಂಭವಾಗುತ್ತಿದ್ದಂತೆ ಮೌಂಟನ್‍ಬೈಕ್ ಸವಾರರು ಇಳಿಜಾರಿನಲ್ಲಿ ವೇಗವಾಗಿ ಸಾಗಿದರು. ಆರಂಭದಲ್ಲಿ ಎಲ್ಲವೂ ಸುಗಮವಾಗಿಯೇ ನಡೆಯುತ್ತಿತ್ತು.

ಮಾರ್ಗಮಧ್ಯೆ ಹಿಂದಿನಿಂದ ವೇಗವಾಗಿ ಬಂದ ಸೈಕಲ್ ಸವಾರನೊಬ್ಬ ಮತ್ತೊಂದು ಮೌಂಟನ್ ಬೈಕ್‍ಗೆ ಡಿಕ್ಕಿ ಹೊಡೆದ. ಇದರ ಬೆನ್ನಲ್ಲೇ ಒಬ್ಬರ ನಂತರ ಒಬ್ಬರು ಸರಣಿ ಅಪಘಾತಕ್ಕೆ ಒಳಗಾದರು. ಬಹುತೇಕ ಸವಾರರು ಹಿಮದ ಹಾದಿಯಲ್ಲಿ ಉರುಳಿಬಿದ್ದರು. ಹಿಂದೆ ಬರುತ್ತಿದ್ದವರೂ ಸಹ ಅವರ ಮೇಲೆ ಬಿದ್ದರು. ಅನೇಕರು ಗಾಯಗೊಂಡರು.

ಅದೃಷ್ಟವಶಾತ್ ಯಾವುದೇ ಸಾವು-ನೋವು ಸಂಭವಿಸಿಲ್ಲ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೋಡುಗರು ಇದನ್ನು ವೀಕ್ಷಿಸಿ ಖುಷಿಪಟ್ಟು ನಂತರ ಅಯ್ಯೋ ಪಾಪ ಎನ್ನುತ್ತಿದ್ದಾರೆ.

Facebook Comments