ಎಚ್ಚರಿಕೆ ನೀಡಿದರೂ ಬಂಗಲೆ ಖಾಲಿ ಮಾಡದ 82 ಮಾಜಿ ಸಂಸದರು..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಸೆ.15- ಸರ್ಕಾರಿ ಬಂಗಲೆಯನ್ನು ತೆರವುಗೊಳಿಸುವಂತೆ ಲೋಕಸಭೆಯ ಸಮಿತಿ ಸ್ಪಷ್ಟ ಎಚ್ಚರಿಕೆ ನೀಡಿದ್ದರೂ ಕೂಡ 82 ಮಾಜಿ ಸಂಸದರು ತಮ್ಮ ನಿವಾಸಗಳನ್ನು ಖಾಲಿ ಮಾಡದೆ ಮೊಂಡುತನ ಪ್ರದರ್ಶಿಸಿದ್ದಾರೆ.

ಕಟ್ಟುನಿಟ್ಟಿನ ಎಚ್ಚರಿಕೆ ನಡುವೆಯೂ ದೆಹಲಿಯ ಲೆಟಿನ್ಸ್ ಪ್ರದೇಶದ ಅಧಿಕೃತ ಸರ್ಕಾರಿ ಬಂಗಲೆಗಳನ್ನು ಖಾಲಿ ಮಾಡದೆ ಇರುವ ಈ ಮಾಜಿ ಸಂಸದರ ವಿರುದ್ಧ ಸಾರ್ವಜನಿಕ ಸ್ಥಳಗಳ (ಅನಧಿಕೃತ ಅಧಿಭೋಗ) ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಲೋಕಸಭೆ ವಸತಿ ಸಮಿತಿ ಅಧ್ಯಕ್ಷ ಸಿ.ಆರ್.ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಪರಾಭವಗೊಂಡ ಸುಮಾರು 200 ಸಂಸದರಿಗೆ ಬಂಗಲೆ ತೆರವುಗೊಳಿಸುವಂತೆ ಆ.19ರಂದು ಸಮಿತಿ ಆದೇಶ ನೀಡಿತ್ತು. ಅಲ್ಲದೆ, ಒಂದು ವಾರ ಗಡುವು ನೀಡಿ ತೆರವುಗೊಳಿಸದಿದ್ದರೆ ಬಂಗಲೆಗೆ ನೀಡಲಾದ ನೀರು, ವಿದ್ಯುತ್ ಮತ್ತು ಅಡುಗೆ ಅನಿಲ ಸಂಪರ್ಕವನ್ನು ಕಡಿತಗೊಳಿಸುವುದಾಗಿ ಎಚ್ಚರಿಕೆ ನೀಡಲಾಗಿತ್ತು.

ಈ ಆದೇಶ ಹೊರಬಿದ್ದ ನಂತರ 200 ಜನರಲ್ಲಿ 178 ಮಾಜಿ ಸಂಸದರು ಬಂಗಲೆಯನ್ನು ತೆರವುಗೊಳಿಸಿದರು. ಆದರೆ, 82 ಎಕ್ಸ್ ಎಂಪಿಗಳು ಈ ಆದೇಶಕ್ಕೆ ಸೊಪ್ಪು ಹಾಕಿಲ್ಲ. ಈ ಬಗ್ಗೆ ಪದೇ ಪದೇ ಸೂಚನೆ ನೀಡಿದರೂ ತಲೆ ಕೆಡಿಸಿಕೊಂಡಿಲ್ಲ.ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಮಿತಿ ಮುಂದಾಗಿದೆ.

Facebook Comments