ಮಧ್ಯಪ್ರದೇಶ ಹೈಡ್ರಾಮ : ಶಾಸಕರ ಭೇಟಿಗೆ ನಗರ ಪೊಲೀಸ್ ಆಯುಕ್ತರ ಬಳಿ ಕಾಂಗ್ರೆಸ್ ನಾಯಕರ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು.ಮಾ.18-ನಗರದ ಖಾಸಗಿ ರೆಸಾರ್ಟ್‍ನಲ್ಲಿ ತಂಗಿರುವ ಶಾಸಕರನ್ನು ಭೇಟಿ ಮಾಡಲು ಅವಕಾಶ ಮಾಡಿಕೊಡಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬೆಂಗಳೂರುನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.  ಇಂದು ಬೆಳಗ್ಗೆ ಮಧ್ಯಪ್ರದೇಶದ ಭೂಪಾಲ್‍ನಿಂದ ಆಗಮಿಸಿದ ಕಾಂಗ್ರೆಸ್‍ನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್, ಅಲ್ಲಿನ ಸಚಿವ ಜೀತು ಪಟ್ವಾರಿ ಮತ್ತಿತರರು ಬೆಳಗ್ಗೆ ರೆಸಾರ್ಟ್‍ಗೆ ಹೋಗಿ ಮಧ್ಯಪ್ರದೇಶದ ಬಂಡಾಯ ಶಾಸಕರನ್ನು ಭೇಟಿ ಮಾಡುವ ಪ್ರಯತ್ನ ಮಾಡಿದರು.

ಆದರೆ ಅದಕ್ಕೆ ಪೊಲೀಸರು ಅವಕಾಶ ನೀಡಲಿಲ್ಲ.ಹೀಗಾಗಿ ಡಿ.ಕೆ.ಶಿವಕುಮಾರ್, ದಿಗ್ವಿಜಯ್ ಸಿಂಗ್ ಹಾಗೂ ಮತ್ತಿತರರು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಆಗಮಿಸಿ ಮನವಿ ನೀಡಿದರು.  ಈ ಸಂದರ್ಭದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, ರೆಸಾರ್ಟ್‍ನಲ್ಲಿರುವ ಶಾಸಕರೇ ಕರೆ ಮಾಡಿ ಮಧ್ಯಪ್ರದೇಶ ಕಾಂಗ್ರೆಸ್ ನಾಯಕರ ಜೊತೆ ಮಾತುಕತೆ ನಡೆಸಿದ್ದು, ತಮ್ಮನ್ನು ದಿಗ್ಬಂಧನದಲ್ಲಿಡಲಾಗಿದೆ ಎಂದು ಆತಂಕ ತೋಡಿಕೊಂಡಿದ್ದಾರೆ. ಹಾಗಾಗಿ ಅವರನ್ನು ಭೇಟಿ ಮಾಡಲು ನಾವು ಪ್ರಯತ್ನ ಮಾಡಿದರು.

ದಿಗ್ವಿಜಯ್ ಸಿಂಗ್ ಅವರು ರಾಜ್ಯಸಭೆ ಚುನಾವಣೆಯ ಅಭ್ಯರ್ಥಿಯಾಗಿದ್ದಾರೆ. ರಾಜ್ಯಸಭೆಯ ಚುನಾವಣೆಯ ಮತದಾರರಾದ ಶಾಸಕರನ್ನು ಭೇಟಿ ಮಾಡಿ ಮತಯಾಚನೆ ಮಾಡಲು ದಿಗ್ವಿಜಯ್ ಸಿಂಗ್ ಆಗಮಿಸಿದರು. ಆದರೆ ಪೊಲೀಸರು ಅವರಿಗೆ ಅವಕಾಶ ಮಾಡಿಕೊಡುತ್ತಿಲ್ಲ. ಪೊಲೀಸರ ಶಕ್ತಿ ಕುಂದಿ ಹೋಗಿದೆ. ಮೇಲಿನವರು ಹೇಳಿದಂತೆ ಕೆಲಸ ಮಾಡುತ್ತಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪನವರ ಜೊತೆ ಮಾತನಾಡಲು ನಾವು ಪ್ರಯತ್ನಿಸಿದ್ದೆವು. ಆದರೆ ಅವರು ಫೋನ್ ಕರೆಯನ್ನೇ ಸ್ವೀಕರಿಸಲಿಲ್ಲ ಎಂದು ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು. ಪೊಲೀಸ್ ಆಯುಕ್ತರಿಗೆ ಫೋನ್ ಮಾಡಿದಾಗ ತಮ್ಮನ್ನು ಭೇಟಿಯಾಗುವಂತೆ ಸಲಹೆ ನೀಡಿದ್ದಾರೆ. ಅದರಂತೆ ಅವರನ್ನು ಭೇಟಿ ಮಾಡಿ ಮನವಿ ನೀಡಿದ್ದೇವೆ. ರಾಜ್ಯ ಸರ್ಕಾರ ಪೊಲೀಸರನ್ನು ಸಂಪೂರ್ಣ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಡಿಕೆಶಿ ಆಕ್ರೋಶ ವ್ಯಕ್ತಪಡಿಸಿದರು.  ಬಿಜೆಪಿಯ ರಾಜಕಾರಣವನ್ನು ನಾವು ತಮ್ಮದೇ ಶೈಲಿಯಲ್ಲಿ ಎದುರಿಸುತ್ತೇವೆ ಎಂದು ಶಿವಕುಮಾರ್ ಹೇಳಿದರು.

Facebook Comments