ಸಚಿವ ಸಂಪುಟ ಸೇರಲು ಶಾಸಕ ಎಂ.ಪಿ.ಕುಮಾರಸ್ವಾಮಿ ಲಾಬಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.23-ಕಳೆದ ಬಾರಿ ಸಚಿವ ಸಂಪುಟ ವಿಸ್ತರಣೆ ವೇಳೆ ಮಂತ್ರಿ ಪಟ್ಟಕ್ಕಾಗಿ ಒತ್ತಡ ಹೇರಿದ್ದ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಮತ್ತೆ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಿದ್ದಾರೆ.   ಕಳೆದ ಬಾರಿ ಸಚಿವನನ್ನಾಗಿ ಮಾಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಮೇಲೆ ಒತ್ತಡ ಹೇರಿದ್ದರು.

ಆದರೂ ಪ್ರಯೋಜನವಾಗಿರಲಿಲ್ಲ, ಹೀಗಾಗಿ ಈ ಸಲ ಮತ್ತೆ ತಮ್ಮ ಬೆಂಬಲಿಗರ ನಿಯೋಗದೊಂದಿಗೆ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಮತ್ತು ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಭೇಟಿ ಮಾಡಿ ಸಂಪುಟದಲ್ಲಿ ಸ್ಥಾನ ಕೊಡಿಸುವಂತೆ ಮನವಿ ಮಾಡಿದ್ದಾರೆ.

ಕಳೆದ ಬಾರಿ ಸಂಪುಟ ವಿಸ್ತರಣೆ ನಂತರ ಅಸಮಾಧಾನಗೊಂಡಿದ್ದ ಶಾಸಕರನ್ನು ಸಮಾಧಾನಗೊಳಿಸಲು ಸಿಎಂ ಯಡಿಯೂರಪ್ಪ ಕೆಲವು ಶಾಸಕರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡಿದ್ದರು. ಎಂ.ಪಿ.ಕುಮಾರಸ್ವಾಮಿ ಅವರಿಗೆ ಮಾರ್ಕೆಟ್ ಕನ್ಸಲ್ಟೆಂಟ್ ಏಜೆನ್ಸಿಸ್ ಲಿಮಿಟೆಡ್‍ಗೆ ನೇಮಕ ಮಾಡಿದ್ದರು. ಆದರೆ ಇದನ್ನು ಕುಮಾರಸ್ವಾಮಿ ನಿರಾಕರಿಸಿದ್ದರು. ಜೊತೆಗೆ ಪ್ರವಾಹ ಪೀಡಿತ ತಮ್ಮ ಕ್ಷೇತ್ರಕ್ಕೆ ಹೆಚ್ಚಿನ ಅನುದಾನಕ್ಕೆ ಬೇಡಿಕೆ ಇಟ್ಟಿದ್ದರು.

ನಾನು ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದು, ಹಿರಿಯ ಶಾಸಕನಾಗಿದ್ದೇನೆ. ಜಿಲ್ಲೆಯಲ್ಲಿ ಸಿ.ಟಿ.ರವಿ ಅವರು ಶ್ರಮವಹಿಸಿ ಪಕ್ಷದಲ್ಲಿ ದುಡಿದು ಸಚಿವರಾಗಿದ್ದಾರೆ. ಈಗ ಅವರು ರಾಜೀನಾಮೆ ನೀಡಿದ್ದು, ಆ ಹುದ್ದೆಯು ಖಾಲಿಯಿರುತ್ತದೆ. ನಾನು ಕೂಡ ಪಕ್ಷದಲ್ಲಿ ಸಚಿವನಾಗಿ ಸೇವೆ ನೀಡಲು ಆಕಾಂಕ್ಷಿಯಾಗಿದ್ದೇನೆ. ಪಕ್ಷದ ವರಿಷ್ಠರಲ್ಲಿ ಈ ಬಗ್ಗೆ ಮನವಿ ಮಾಡುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

 

Facebook Comments