ಜೀಪ್-ಟ್ರ್ಯಾಕ್ಟರ್ ನಡುವೆ ಡಿಕ್ಕಿಯಾಗಿ ಒಂದೇ ಕುಟುಂಬದ 12 ಮಂದಿ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

Tractor--01
ಮೊರೆನಾ (ಮ.ಪ್ರ.), ಜೂ.21-ಜೀಪ್ ಮತ್ತು ಟ್ರ್ಯಾಕ್ಟರ್ ಟ್ರೋಲಿ ನಡುವೆ ಡಿಕ್ಕಿ ಸಂಭವಿಸಿ ಒಂದೇ ಕುಟುಂಬದ 12 ಮಂದಿ ಮೃತಪಟ್ಟ ಘೋರ ದುರಂತ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಇತರ ಎಂಟು ಜನರು ತೀವ್ರ ಗಾಯಗೊಂಡಿದ್ದು, ಕೆಲವರ ಸ್ಥಿತಿ ಶೋಚನೀಯವಾಗಿದೆ.

ಸಂತಾಪ ಸೂಚಕ ಸಭೆಯೊಂದರಲ್ಲಿ ಭಾಗವಹಿಸಲು ತೆರೆಳುತ್ತಿದ್ದವರು ಸಾವನ್ನಪ್ಪಿರುವುದು ವಿಧಿ ವಿಪರ್ಯಾಸ. ಗಂಜ್‍ರಾಂಪುರ್ ಗ್ರಾಮದ ಬಳಿ ಕವಲು ದಾರಿಯಲ್ಲಿ ಇಂದು ಮುಂಜಾನೆ 6 ಗಂಟೆಯಲ್ಲಿ ಮರಳು ತುಂಬಿದ ಟ್ರ್ಯಾಕ್ಟರ್-ಟ್ರೋಲಿ 20 ಜನರಿಂದ ಕಿಕ್ಕಿರಿದಿದ್ದ ಜೀಪ್‍ಗೆ ಡಿಕ್ಕಿ ಹೊಡೆಯಿತು ಎಂದು ಮೊರೆನಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಂಘಿ ತಿಳಿಸಿದ್ದಾರೆ. ಈ ದುರಂತದಲ್ಲಿ 12 ಮಂದಿ ಸ್ಥಳದಲ್ಲೇ ಮೃತಪಟ್ಟರು. ತೀವ್ರ ಗಾಯಗೊಂಡ ಇತರ ಎಂಟು ಜನರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಅವರು ಹೇಳಿದ್ದಾರೆ.
ಮೃತಪಟ್ಟವರೆಲ್ಲರೂ ಗ್ವಾಲಿಯಾರ್‍ನವರು. ಸಂತಾಪ ಸೂಚಕ ಸಭೆಯೊಂದರಲ್ಲಿ ಭಾಗವಹಿಸಲು ಘುರ್‍ಗಾನ್ ಗ್ರಾಮಕ್ಕೆ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ.

ರಾಷ್ಟ್ರೀಯ ಚಂಬಲ್ ಕಣಿವೆ ವನ್ಯಧಾಮದಿಂದ ಅಕ್ರಮವಾಗಿ ಮರಳು ಕೊಂಡೊಯ್ಯುತ್ತಿದ್ದ ಟ್ರ್ಯಾಕ್ಟರ್ ಟ್ರೋಲಿ ಚಾಲಕ ಅಪಘಾತದ ನಂತರ ಸ್ಥಳದಿಂದ ಪರಾರಿಯಾಗಿದ್ದಾನೆ. ಆತನ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Facebook Comments

Sri Raghav

Admin