ಗ್ರಾ.ಪಂ ಅಧ್ಯಕ್ಷೆಯಾದ ಹಿಂದುಳಿದ ಸಮುದಾಯದ ಮಹಿಳೆ ಮನೆಗೆ ಸುಮಲತಾ ಭೇಟಿ

ಈ ಸುದ್ದಿಯನ್ನು ಶೇರ್ ಮಾಡಿ

ಮಳವಳ್ಳಿ, ಮಾ.7- ತಾಲ್ಲೂಕಿನ ಬಂಡೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವ ರಾಜ್ಯದ ಅತಿ ಹಿಂದುಳಿದ ಕೊರಮ ಸಮುದಾಯದ ಮಹಿಳೆ ಮುತ್ತಮ್ಮ ಅವರ ಮನೆಗೆ ಸಂಸದೆ ಸುಮಲತಾ ಭೇಟಿ ನೀಡಿದರು. ದಡದಪುರ ಗ್ರಾಮದ ಮುತ್ತಮ್ಮ ಮನೆಗೆ ಭೇಟಿ ನೀಡಿ ಅವರನ್ನು ಅಭಿನಂದಿಸಿ ಮಾತನಾಡಿದ ಸುಮಲತಾ, ರಾಜ್ಯದಲ್ಲಿಯೇ ಅತಿ ಹಿಂದುಳಿದ ಕೊರಮ ಸಮುದಾಯದಲ್ಲಿ ಪ್ರಥಮ ಮಹಿಳೆ ಬಂಡೂರು ಗ್ರಾಪಂ ಅಧ್ಯಕ್ಷೆಯಾಗಿ ದಡದಪುರ ಮುತ್ತಮ್ಮ ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರ.

ಇಂತಹ ಹಿಂದುಳಿದ ಸಮುದಾಯದವರನ್ನು ಗುರುತಿಸಬೇಕು. ಅದರಲ್ಲೂ ಜಿಲ್ಲೆಯ ಆಡಳಿತ ವರ್ಗದಲ್ಲಿ ಮಹಿಳೆಯರ ಪಾಲು ಹೆಚ್ಚಾಗಿದೆ. ತಾವು ಸಂಸದೆ, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಕಾರಿ, ಅಪರ ಜಿಲ್ಲಾಧಿಕಾರಿ , ಜಿಪಂ ಅಧ್ಯಕ್ಷರು ಸೇರಿದಂತೆ ಬಹುತೇಕ ಮಂದಿ ಮಹಿಳೆಯರೇ ಅಕಾರ ನಡೆಸುತ್ತಿರುವುದು ನಮ್ಮ ಶಕ್ತಿಯನ್ನು ತೋರಿಸುತ್ತದೆ ಎಂದು ಹೇಳಿದರು. ಇದೇ ವೇಳೆ ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯ ಕೋರಿದರು.
ನಂತರ ಗಟ್ಟಿಕೊಪ್ಪಲು ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ತಮಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ದಡದಪುರ ಬಿ.ಎಸ್.ಶಿವಣ್ಣ ಅವರು ಸಾಕಷ್ಟು ಸಲಹೆ-ಸಹಕಾರ ನೀಡಿದ್ದು, ಅವರ ಮಾರ್ಗದರ್ಶನ ಮುಂದಿನ ದಿನಗಳಲ್ಲೂ ಹೀಗೆ ಮುಂದುವರೆಯಲಿ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ದಡದಪುರ ಬಿ.ಎಸ್.ಶಿವಣ್ಣ ಮಾತನಾಡಿ, ಲೋಕಸಭೆಯಲ್ಲಿ ಪಕ್ಷಾತೀತ, ಜಾತ್ಯಾತೀತ, ಸದಾ ಜನಪರ ಮತ್ತು ಅಭಿವೃದ್ಧಿ ಪರ ಮಾತನಾಡಿ, ಕೇಂದ್ರ ಸರ್ಕಾರದ ಗಮನ ಸೆಳೆಯುತ್ತಿರುವ ಸಂಸದೆ ಸುಮಲತಾ ಅವರು ಅತ್ಯುತ್ತಮ ಸಂಸದೀಯ ಪಟುವಾಗಿ ಹೊರಹೊಮ್ಮಿದ್ದಾರೆ.

ನೀರಾವರಿ ಸಚಿವರಾಗಿ ಸಾಕಷ್ಟು ಜನರಸ್ನೇಹಿ ಕೆಲಸಗಳನ್ನು ಮಾಡಿರುವ ದಿ.ಮಾಜಿ ಸಚಿವ ಕೆ.ಎನ್.ನಾಗೇಗೌಡರು ನಿರ್ಮಿಸಿರುವ ಪಟ್ಟಣದ ಶಾಂತಿ ಕಾಲೇಜಿನಲ್ಲಿ ಸಾವಿರಾರು ಬಡ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಅವರ ಅನುಕೂಲಕ್ಕಾಗಿ ಸಂಸದರ ಅನುದಾನದಲ್ಲಿ ಕಾಲೇಜಿನ ಆವರಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ತೆರೆಯುವಂತೆ ಮನವಿ ಮಾಡಿದರು.

ಕರ್ನಾಟಕ ಪ್ರದೇಶ ಕುರುಬರ ಸಂಘದ ಉಪಾಧ್ಯಕ್ಷ ಪುಟ್ಟಬಸವಯ್ಯ, ಉಪಾಧ್ಯಕ್ಷ ರಮೇಶ್, ಸದಸ್ಯರಾದ ವಸಂತ್, ಶ್ವೇತಾ, ಗೀತಾ, ದೇವರಾಜು, ಗುರುಮಲ್ಲಯ್ಯ, ಮರಮಾದಪ್ಪ, ಪ್ರಕಾಶ್, ಚಿಕ್ಕಲಿಂಗಯ್ಯ ಸೇರಿದಂತೆ ಹಲವರು ಇದ್ದರು.

Facebook Comments

Sri Raghav

Admin