ಆರಂಭದಿಂದ ಅಂತ್ಯದವರೆಗೆ ‘ಧೋನಿ’ ಸಾಗಿದ ದಾಖಲೆ ದಾರಿ

ಈ ಸುದ್ದಿಯನ್ನು ಶೇರ್ ಮಾಡಿ

– ಜಯಪ್ರಕಾಶ್
ರಾಂಚಿ ಎಂಬ ಕುಗ್ರಾಮದಲ್ಲಿ ಜನಿಸಿದ ಧೋನಿಗೆ ಚಿಕ್ಕಂದಿನಿಂದಲೂ ಕ್ರಿಕೆಟ್ ಅಂಗಳದಲ್ಲಿ ದೊಡ್ಡದೊಂದು ಹೆಸರು ಮಾಡಬೇಕೆಂಬ ಕನಸನ್ನು ಹೊತ್ತಿದ್ದರು, ಆ ಕನಸನ್ನು ಸಾಕಾರಗೊಳಿಸಿಕೊಳ್ಳಲು ಮಹಿ ಅನೇಕ ನಿಗೂಢ ನಡೆಯನ್ನು ಅಳವಡಿಸಿಕೊಂಡಿದ್ದರು ಆದ್ದರಿಂದಲೇ ಇಂದು ಇಡೀ ವಿಶ್ವದ ಕ್ರಿಕೆಟ್ ಜಗತ್ತಿನಲ್ಲಿ ಧ್ರುವನಕ್ಷತ್ರದಂತೆ ಶಾಶ್ವತವಾಗಿ ನೆಲೆಸುವಂತಾಗಿದೆ.

ಸ್ವಾತಂತ್ರ್ಯ ದಿನಾಚರಣೆಯಂದೇ ತಮ್ಮ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿರುವುದು ಕೂಡ ನಿಗೂಢವಾಗಿದ್ದು, ನಾಯಕನಾಗಿದ್ದಾಗ ಹಲವು ನಿರ್ಧಾರಗಳಿಂದಲೇ ತಂಡಕ್ಕೆ ಸಾಕಷ್ಟು ಗೆಲುವನ್ನು ತಂದುಕೊಟ್ಟಿದ್ದಾರೆ.

ಮಹಿ ತೆಗೆದುಕೊಳ್ಳುತ್ತಿದ್ದ ನಿರ್ಧಾರಗಳು ತಂಡದ ಆಟಗಾರರಿಗೆ ಮಾರಕವಾಗುತ್ತಿದ್ದವು ಆದರೂ ಕೂಡ ಧೋನಿಗೆ ಪಂದ್ಯ ಗೆಲ್ಲುವುದಷ್ಟೇ ಮುಖ್ಯವಾಗಿತ್ತು, ಆದ್ದರಿಂದಲೇ ಮಹಿ ಇಂದು ಏಕದಿನ ಹಾಗೂ ಚುಟುಕು ವಿಶ್ವಕಪ್ ಗೆದ್ದ ನಾಯಕ ಎಂಬ ಕೀರ್ತಿಯನ್ನು ಹೊಂದಿದ್ದಾರೆ.

ತಂಡದಲ್ಲಿದ್ದ ಆಟಗಾರರ ಪ್ರತಿಭೆಯನ್ನು ಗುರುತಿಸುವ ಚಾಕಚಕ್ಯತೆಯನ್ನು ಹೊಂದಿದ್ದರಿಂದಲೇ ರೋಹಿತ್‍ಶರ್ಮಾನಂತಹ ಆಟಗಾರ ಭಾರತಕ್ಕೆ ದೊರಕ್ಕಿದ್ದು. ರೋಹಿತ್ ಈಗ ಭಾರತ ತಂಡದ ಶಾಶ್ವತ ಆರಂಭಿಕ ಆಟಗಾರನಾಗಿರುವುದೇ ಅಲ್ಲದೆ ಏಕದಿನ ಕ್ರಿಕೆಟ್‍ನಲ್ಲಿ 3 ದ್ವಿಶತಕ ಗಳಿಸಿದ ಏಕಮೇವ ಬ್ಯಾಟ್ಸ್ ಮನ್ ಆಗಿ ಗುರುತಿಸಿಕೊಂಡಿದ್ದಾರೆ.

2007ರ ವಿಶ್ವಕಪ್‍ನ ನಂತರ ರಾಹುಲ್‍ದ್ರಾವಿಡ್ ನಾಯಕತ್ವ ತ್ಯಜಿಸಿದಾಗ ಸಚಿನ್, ವೀರೇಂದ್ರಸೆಹ್ವಾಗ್, ಗಂಗೂಲಿ, ಗಂಭೀರ್‍ರಂತಹ ಹಿರಿಯ ಆಟಗಾರರಿದ್ದರೂ ಕೂಡ ಮಹಿ ಎಂಬ ಯುವ ಪ್ರತಿಭೆ ಭಾರತ ತಂಡದ ನಾಯಕನಾಗಿದ್ದು ಸಹ ನಿಗೂಢವಾಗಿಯೇ ಇತ್ತು.

ಮಹಿ ನಾಯಕನಾಗಿದ್ದಾಗ ಅವರ ಮುಂದೆ ಸವಾಲುಗಳ ಸರಮಾಲೆಯೇ ಎದುರಾಗಿತ್ತು, ತನಗಿಂತ ಹಿರಿಯ ಆಟಗಾರರೇ ತಂಡದಲ್ಲಿ ಇದ್ದರೂ ಕೂಡ ಅದನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗಿದ್ದು ಕೂಡ ಧೋನಿಯ ನಿರ್ಧಾರದಿಂದಲೇ.
ಧೋನಿ ತೆಗೆದುಕೊಂಡ ನಿರ್ಧಾರಗಳು ಕೆಲವೊಮ್ಮೆ ಟೀಕೆಗಳಿಗೆ ಗುರಿಯಾಗಿದ್ದರೂ ಕೂಡ ಅವರು ತೆಗೆದುಕೊಂಡ ನಿಲುವುಗಳಿಂದಲೇ ಟೀಂ ಇಂಡಿಯಾ ಚೊಚ್ಚಲ ವಿಶ್ವಕಪ್ ಗೆಲ್ಲಲು ಸಾಧ್ಯವಾಯಿತು.

* 2007ರ ಚುಟುಕು ವಿಶ್ವಕಪ್‍ನ ಅಂತಿಮ ಓವರ್‍ನಲ್ಲಿ ಗೆಲ್ಲಲು ಕೇವಲ 13 ರನ್‍ಗಳು ಬೇಕಾಗಿದ್ದಾಗ ಯಶಸ್ವಿ ಬೌಲರ್ ಆಗಿದ್ದ ಹರ್ಭಜನ್‍ಸಿಂಗ್ ಬದಲು ಜೋಗಿಂದರ್ ಶರ್ಮಾಗೆ ಚಾನ್ಸ್ ಕೊಟ್ಟಾಗ ಹಲವರು ಕಿಡಿಕಾರಿದರು. ಆದರೆ ತನ್ನ ಹಿಂದಿನ ಓವರ್‍ಗಳಿಂದ ಪಾಠ ಕಲಿತಿದ್ದ ಜೋಗಿಂದರ್ ಅಂತಿಮ ಓವರ್‍ನ ಎರಡನೇ ಎಸೆತದಲ್ಲಿ ಪಾಕ್ ನಾಯಕ ಮಿಸ್ಬಾ ಸಿಕ್ಸರ್ ಎತ್ತಿದ್ದಾಗ ಪಂದ್ಯ ಭಾರತದ ಕೈಯಿಂದ ಜಾರಿತು ಎಂದುಕೊಂಡರೂ ನಂತರ ದ ಎಸೆತಗಳಲ್ಲಿ ಉತ್ತಮ ಪ್ರದರ್ಶನ ತೋರಿ ಮಿಸ್ಬಾರನ್ನು ಬಲಿ ಪಡೆಯುವ ಮೂಲಕ ಜೋಹಾನ್ಸ್‍ಬರ್ಗ್‍ನಲ್ಲಿ ಭಾರತ ಚೊಚ್ಚಲ ಚುಟುಕು ವಿಶ್ವಕಪ್ ಚಾಂಪಿಯನ್ಸ್ ಆಗಿದ್ದು ಕೂಡ ಧೋನಿಯ ಆ ದೃಢ ನಿರ್ಧಾರದಿಂದಲೇ.

* 2008ರಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳುವಾಗ ಭಾರತ ತಂಡದ ಹಿರಿಯ ಆಟಗಾರರಾದ ಸೌರವ್ ಗಂಗೂಲಿ, ರಾಹುಲ್‍ದ್ರಾವಿಡ್‍ನಂತಹ ಆಟಗಾರರನ್ನು ಕೈಬಿಟ್ಟಾಗಲೂ ಮಹಿ ವಿರುದ್ಧ ಹಲವರು ಟೀಕೆಗಳನ್ನು ಮಾಡಿದ್ದರು. ಆದರೆ ಫೀಲ್ಡಿಂಗ್, ಬ್ಯಾಟಿಂಗ್, ಬೌಲಿಂಗ್ ವಿಭಾಗಗಳಲ್ಲಿ ಸದೃಢ ತಂಡವನ್ನು ಕಟ್ಟಿದ್ದ ಧೋನಿ ಆಸ್ಟ್ರೇಲಿಯಾದಲ್ಲಿ ಚೊಚ್ಚಲ ಸರಣಿಯನ್ನು ಗೆಲ್ಲುವ ಮೂಲಕ ಟೀಕಾಕಾರರ ಬಾಯಿಮುಚ್ಚಿಸಿದ್ದರು.

* 2011ರ ಏಕದಿನ ವಿಶ್ವಕಪ್‍ನಲ್ಲಿ ಶ್ರೀಲಂಕಾ ನೀಡಿದ 275 ರನ್‍ಗಳ ಗುರಿಯನ್ನು ಬೆನ್ನಟ್ಟಿದ ಭಾರತ 161 ರನ್‍ಗಳಾಗುವಷ್ಟರಲ್ಲಿ ಸಚಿನ್, ಸೆಹ್ವಾಗ್, ಕೊಹ್ಲಿ ಅಂತಹ ಸೋಟಕ ಬ್ಯಾಟ್ಸ್‍ಮನ್‍ಗಳನ್ನು ಕಳೆದುಕೊಂಡಾಗ ಯುವರಾಜ್‍ಸಿಂಗ್ ಬಿಟ್ಟು ತಾವೇ ಬಡ್ತಿ ಪಡೆದು ಬಂದು ಬ್ಯಾಟಿಂಗ್ ನಡೆಸುವ ಮಹಿ ನಿರ್ಧಾರದಿಂದಲೇ ಭಾರತ ಎರಡನೇ ಬಾರಿಗೆ ಏಕದಿನ ವಿಶ್ವಚಾಂಪಿಯನ್ಸ್ ಆಗಲು ಸಾಧ್ಯವಾಯಿತು.

* 2012ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಸಿಬಿ ಸೀರಿಸ್‍ನಲ್ಲಿ ತಂಡದ ಹಿರಿಯ ಆಟಗಾರರಾದ ವೀರೇಂದ್ರಸೆಹ್ವಾಗ್, ಸಚಿನ್‍ತೆಂಡೂಲ್ಕರ್, ಗೌತಮ್‍ಗಂಭೀರ್‍ರನ್ನು ರೊಟೇಶನ್ ಮಾದರಿಯಲ್ಲಿ ಬಳಸಿಕೊಂಡು ಯುವ ಆಟಗಾರರಿಗೆ ಮಣೆ ಹಾಕಿದ್ದರಿಂದಲೇ ಆ ಸರಣಿಯನ್ನು ಭಾರತ ಗೆಲ್ಲುವಂತಾಯಿತು.

* ಭಾರತ ತಂಡದ ಇಂದಿನ ಆರಂಭಿಕ ಆಟಗಾರ ರೋಹಿತ್ ಶರ್ಮಾ ಆರಂಭದಲ್ಲಿ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರಿಂದ ರೋಹಿತ್‍ನಲ್ಲಿದ್ದ ಬ್ಯಾಟಿಂಗ್ ಸಾಮಥ್ರ್ಯವನ್ನು ಬಳಸಿಕೊಳ್ಳಲು ಆಗಿರಲಿಲ್ಲ, ಆದರೆ ಧೋನಿ ನಾಯಕನಾದ ನಂತರ ಆರಂಭಿಕ ಆಟಗಾರನಾಗಿ ಬಡ್ತಿ ಪಡೆದ ರೋಹಿತ್ ಆರಂಭಿಕ ಮೂರು ಪಂದ್ಯಗಳಲ್ಲಿ ಕೇವಲ 29 ರನ್ ಗಳಿಸಿದರೂ ಆತನ ಮೇಲಿದ್ದ ನಂಬಿಕೆ ಧೋನಿಗೆ ಕಡಿಮೆಯಾಗಿರಲಿಲ್ಲ, 2013ರಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಸರಣಿಯಲ್ಲಿ ರೋಹಿತ್‍ನಲ್ಲಿದ್ದ ಬ್ಯಾಟಿಂಗ್ ವೈಭವ ಬೆಳಕಿಗೆ ಬಂದಿದ್ದು ಅಂದಿನಿಂದಲೂ ರೋಹಿತ್ ಭಾರತ ತಂಡದ ಶಾಶ್ವತ ಆರಂಭಿಕ ಆಟಗಾರನಾಗಿ ಬಿಂಬಿಸಿಕೊಂಡಿದ್ದಾರೆ.

ಇಂತಹ ಹಲವು ನಿಗೂಢ ನಿರ್ಧಾರಗಳಿಂದಲೇ ಭಾರತ ತಂಡವನ್ನು ವಿಶ್ವಕ್ರಿಕೆಟ್‍ನಲ್ಲಿ ನಂಬರ್ 1 ಆಗಿಸಿದ್ದ ಧೋನಿ, ನಿವೃತ್ತಿ ಘೋಷಣೆಯಲ್ಲೂ ನಿಗೂಢತೆ ಕಾಪಾಡಿಕೊಂಡಿದ್ದರೂ ಮುಂಬರುವ ಐಪಿಎಲ್ 13ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಮತ್ತೊಮ್ಮೆ ಚಾಂಪಿಯನ್ಸ್ ಆಗಿಸುವ ಮೂಲಕ ತಮ್ಮ ಕ್ರಿಕೆಟ್ ಲೋಕದ ವೈಭವವನ್ನು ಮೆರೆಯುವಂತಾಗಲಿ.

# ಜೆರ್ಸಿ ನಂ.7 ನಿವೃತ್ತಿ..?
ಹೊಸ ಸಂಚಲನ ಮೂಡಿಸಿ ಭಾರತೀಯ ಕ್ರಿಕೆಟ್ ರಂಗವನ್ನು ನಂಬರ್ 1 ಆಗಿಸಿದ್ದ ಕೂಲ್‍ಕ್ಯಾಪ್ಟನ್ ಖ್ಯಾತಿಯ ಮಹೇಂದ್ರಸಿಂಗ್ ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್‍ಗೆ ಗುಡ್‍ಬೈ ಹೇಳಿದ ತಕ್ಷಣವೇ ಜೆರ್ಸಿ 7 ಕೂಡ ನಿವೃತ್ತಿ ಆಗಿದೆ.ಭಾರತ ತಂಡದ ಮಾಜಿ ನಾಯಕ ಮಹೇಂದ್ರಸಿಂಗ್ ಧೋನಿ ಫುಟ್ಬಾಲ್ ದಿಗ್ಗಜ ರೊನಾಲ್ಡೋನ ಪಕ್ಕಾ ಅಭಿಮಾನಿಯಾಗಿದ್ದರು, ಆದ್ದರಿಂದಲೇ ಮಹಿ ಕೂಡ ತಮ್ಮ ಜೆರ್ಸಿ ಸಂಖ್ಯೆಯಾಗಿ 7 ಅನ್ನೇ ಆರಿಸಿ ಕೊಂಡಿದ್ದರು.

ಮಹಿ 7ನೆ ನಂಬರ್ ಜೆರ್ಸಿಯನ್ನು ಧರಿಸುವ ಮುನ್ನ ಕರ್ನಾಟಕದ ಬೌಲರ್À, ಮೈಸೂರು ಎಕ್ಸ್‍ಪ್ರೆಸ್ ಜವಾಗಲ್ ಶ್ರೀನಾಥ್ ಧರಿಸಿದ್ದರು, ಆನಂತರ ಜೆರ್ಸಿ ನಂಬರ್ 7 ಮಹಿ ಪಾಲಾಯಿತು. ಏಕದಿನ, ಚುಟುಕು ವಿಶ್ವಕಪ್‍ನ್ನು ಗೆದ್ದುಕೊಟ್ಟಾಗಲು ಧೋನಿ 7ನೇ ನಂಬರ್ ಜೆರ್ಸಿ ಧರಿಸಿದ್ದು ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಈಗ ಆ ನಂಬರ್‍ನ ಜೆರ್ಸಿಗೂ ನಿವೃತ್ತಿ ಘೋಷಿಸಬೇಕೆಂಬ ಕೂಗು ಕೇಳಿಬರುತ್ತಿದೆ.

ಮಹೇಂದ್ರಸಿಂಗ್ ಧೋನಿ ಟೆಸ್ಟ್ ಜೀವನಕ್ಕೆ ಗುಡ್‍ಬೈ ಹೇಳಿದ ನಂತರ ಜೆರ್ಸಿ ನಂಬರ್ 7 ಅನ್ನು ಯಾವುದೇ ಆಟಗಾರರಿಗೆ ನೀಡದೆ ಮಹಿ ಟೆಸ್ಟ್‍ನಲ್ಲಿ ಮಾಡಿರುವ ಸಾಧನೆಯನ್ನು ಜೀವಂತ ಇಟ್ಟಿರುವಂತೆ, ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲೂ ಧೋನಿ ಧರಿಸುತ್ತಿದ್ದ ಜೆರ್ಸಿ ನಂಬರ್ 7 ಅನ್ನು ಯಾವುದೇ ಆಟಗಾರರು ಧರಿಸಬಾರದು ಎಂಬ ನಿರ್ಧಾರವನ್ನು ಬಿಸಿಸಿಐ ಕೈಗೊಳ್ಳಲಿ.

ಈ ಹಿಂದೆ ಕ್ರಿಕೆಟ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ಧರಿಸುತ್ತಿದ್ದ 10ನೇ ನಂಬರ್ ಜೆರ್ಸಿಯನ್ನು ಶಾರ್ದೂಲ್ ಠಾಕೂರ್ ಧರಿಸಿದಾಗ ಅದಕ್ಕೆ ವಿರೋಧ ವ್ಯಕ್ತವಾಗಿದ್ದರಿಂದ ಜೆರ್ಸಿ ನಂಬರ್ 10ಕ್ಕೆ ನಿವೃತ್ತಿ ಘೋಷಿಸಿದಂತೆ, ಈಗ ಜೆರ್ಸಿ ನಂಬರ್ 7 ಅನ್ನು ಯಾವುದೇ ಆಟಗಾರರಿಗೆ ನೀಡದೆ ಮಹೇಂದ್ರಸಿಂಗ್ ಧೋನಿಗೆ ಗೌರವ ಸೂಚಿಸಬೇಕಾಗಿದೆ.

# ಮಹಿ ಹೆಸರಲ್ಲೇ ದಾಖಲೆ : 
16 ವರ್ಷಗಳ ಸುದೀರ್ಘ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿರುವ ಮಹೇಂದ್ರಸಿಂಗ್ ಧೋನಿ ಅವರು ಕ್ರಿಕೆಟ್ ಅಂಗಳದಲ್ಲಿ ಸಾಕಷ್ಟು ದಾಖಲೆಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದು, ಇವರು ಮಾಡಿರುವ ದಾಖಲೆಗಳನ್ನು ಭವಿಷ್ಯದಲ್ಲಿ ಯುವ ಆಟಗಾರರು ಮುರಿದರೂ ಕೂಡ ಧೋನಿಯ ಕೆಲವು ದಾಖಲೆಗಳು ಅವರ ಹೆಸರಿನಲ್ಲೇ ಶಾಶ್ವತವಾಗಿ ನೆಲೆಸಲಿವೆ.

* ನಾಯಕನಾಗಿ ಭಾರತ ತಂಡವನ್ನು ನಂಬರ್ 1 ಆಗಿ ರೂಪಿಸಿದ ಮಹಿ 2007, 2011, 2013ರಲ್ಲಿ ಕ್ರಮವಾಗಿ ಚುಟುಕು ವಿಶ್ವಕಪ್, ಏಕದಿನ ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಗೆದ್ದಿರುವ ಏಕೈಕ ನಾಯಕನಾಗಿ ಗುರುತಿಸಿಕೊಂಡಿದ್ದು ಈ ದಾಖಲೆಯು ಶಾಶ್ವತವಾಗಿ ಧೋನಿಯ ಹೆಸರಿನಲ್ಲೇ ಬಹಳ ಕಾಲ ಉಳಿಯಲಿದೆ.

* ಮಹೇಂದ್ರಸಿಂಗ್ ಧೋನಿ ನಾಯಕನಾಗಿ 332 ಪಂದ್ಯಗಳನ್ನು ಮುನ್ನೆಡೆಸಿದ್ದಾರೆ, 200 ಏಕದಿನ, 60 ಟೆಸ್ಟ್, 72 ಚುಟುಕು ಪಂದ್ಯಗಳಲ್ಲಿ ಮಹಿ ತಂಡದ ಸಾರಥಿಯಾಗಿದ್ದಾರೆ. ಮೂರು ಮಾದರಿಗಳಲ್ಲೂ 50ಕ್ಕೂ ಹೆಚ್ಚು ಪಂದ್ಯಗಳ ನಾಯಕನಾಗುವ ಯೋಗವು ಮಹಿಗೆ ದೊರಕಿತು.

* ಫೀಲ್ಡಿಂಗ್ ನಡುವೆ ಚಿಗರೆಯಂತೆ ಓಡುವ ಮಹಿ ಏಕದಿನ ಪಂದ್ಯಾವಳಿಗಳಲ್ಲಿ ಅಜೇಯರಾಗಿ 84 ಬಾರಿ ಉಳಿದಿದ್ದಾರೆ, ಇದು ಕೂಡ ಧೋನಿಯ ಸಾಧನೆಯೇ ಸರಿ. ಚೇಸಿಂಗ್ ವೇಳೆ 51 ಬಾರಿ ಅಜೇಯರಾಗಿ ಉಳಿದಿದ್ದ ಧೋನಿ, 47 ಬಾರಿ ತಂಡಕ್ಕೆ ಜಯ ತಂದುಕೊಟ್ಟಿದ್ದರೆ, 2 ಬಾರಿ ಟೈ ಮಾಡಿಕೊಳ್ಳಲು ನೆರವಾಗಿದ್ದರು. ಕೇವಲ 2 ಪಂದ್ಯಗಳಲ್ಲಿ ಮಾತ್ರ ಭಾರತ ಸೋಲು ಕಂಡಿತ್ತು.

* ಫೀಲ್ಡಿಂಗ್‍ಗೆ ಹೆಸರಾದ ಮಹಿ 350 ಪಂದ್ಯಗಳಲ್ಲಿ 123 ಸ್ಟಂಪಿಂಗ್ ಮಾಡಿದ್ದು ಇದು ಕೂಡ ಧೋನಿಯ ಹೆಸರಿನಲ್ಲಿ ಉಳಿಯುವ ಸಾಧ್ಯತೆಗಳಿವೆ.

Facebook Comments

Sri Raghav

Admin