ಸಿಎಂ ಯಡಿಯೂರಪ್ಪ ಭೇಟಿಯಾದ ಎಂಟಿಬಿ ನಾಗರಾಜ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.14- ಹೊಸಕೋಟೆಯ ಜಿದ್ದಾಜಿದ್ದಿನ ಕುರುಕ್ಷೇತ್ರದಲ್ಲಿ ಪರಾಭವಗೊಂಡು ಅತಂತ್ರವಾಗಿರುವ ಮಾಜಿ ಸಚಿವ ಎಂ.ಟಿ.ಬಿ.ನಾಗರಾಜ್ ಇಂದು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಡಾಲರ್ಸ್ ಕಾಲೋನಿಯ ಧವಳಗಿರಿ ನಿವಾಸಕ್ಕೆ ಆಗಮಿಸಿದ ಎಂಟಿಬಿ ನಾಗರಾಜ್ ಸುಮಾರು 20 ನಿಮಿಷಕ್ಕೂ ಹೆಚ್ಚು ಕಾಲ ಮುಖ್ಯಮಂತ್ರಿಯೊಂದಿಗೆ ರಹಸ್ಯ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಮೂರು ದಿನಗಳ ಹಿಂದೆಯಷ್ಟೇ ಬಿಎಸ್‍ವೈ ಅವರನ್ನು ಭೇಟಿಯಾಗಿದ್ದ ಎಂಟಿಬಿ ಚಿಕ್ಕಬಳ್ಳಾಪುರ ಸಂಸದ ಬಿ.ಎನ್.ಬಚ್ಚೇಗೌಡರ ವಿರುದ್ದ ಶಿಸ್ತುಕ್ರಮ ಜರುಗಿಸಬೇಕೆಂದು ಪಟ್ಟು ಹಿಡಿದಿದ್ದರು.

ಹೊಸಕೋಟೆಯಲ್ಲಿ ನನ್ನ ಪರವಾಗಿ ಕೆಲಸ ಮಾಡದೆ ಅವರ ಪುತ್ರನ ಪರ ತೆರೆಮರೆಯಲ್ಲಿ ಕೆಲಸ ಮಾಡಿದ ಪರಿಣಾಮ ನನಗೆ ಸೋಲುಂಟಾಯಿತು. ಹೀಗಾಗಿ ಅವರ ಮೇಲೆ ಶಿಸ್ತುಕ್ರಮ ಜರುಗಿಸಬೇಕೆಂದು ಮನವಿ ಮಾಡಿದರು.

ಇದಕ್ಕೆ ಬಿಎಸ್‍ವೈ ಸಮ್ಮತಿಸದಿದ್ದಾಗ ಎಂಟಿಬಿ ಮುನಿಸಿಕೊಂಡು ಅವರ ಮನೆಯಿಂದ ಹೊರನಡೆದಿದ್ದರು. ಬಳಿಕ ಯಡಿಯೂರಪ್ಪನವರೇ ಅವರ ನಿವಾಸಕ್ಕೆ ತೆರಳಿ ಸಮಾಧಾನಪಡಿಸಿದ್ದರು. ಇದೀಗ ಪುನಃ ಎಂಟಿಬಿ ಬಿಎಸ್‍ವೈ ಅವರನ್ನು ಭೇಟಿಯಾಗಿ ಬಚ್ಚೇಗೌಡರ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಡ ಹಾಕುತ್ತಿದ್ದಾರೆ.

ಇನ್ನೊಂದು ಮೂಲಗಳ ಪ್ರಕಾರ ಉಪಚುನಾವಣೆಯಲ್ಲಿ ಸೋತಿರುವ ತಮಗೆ ಕಡೆಪಕ್ಷ ಮೇಲ್ಮನೆಯಲ್ಲಿ ಸ್ಥಾನ ಕಲ್ಪಿಸಿ ಸಂಪುಟಕ್ಕೆ ಪರಿಗಣಿಸುವಂತೆ ಮನವಿ ಮಾಡಿದ್ದಾರೆ ಎನ್ನಲಾಗುತ್ತಿದೆ.

Facebook Comments