ಕೊರೋನಾ ವಾರಿಯರ್ಸ್‍ ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ : ಎಂಟಬಿ ನಾಗರಾಜ್

ಈ ಸುದ್ದಿಯನ್ನು ಶೇರ್ ಮಾಡಿ

ಹೊಸಕೋಟೆ , ಮೇ 27- ಕೊರೊನಾ ವೈರಸ್ ನಿಯಂತ್ರಣಕ್ಕೆ ಸೈನಿಕರಂತೆ ಜೀವದ ಹಂಗು ತೊರೆದು ದುಡಿಯುತ್ತಿರುವ ಕೊರೊನಾ ವಾರಿಯರ್ಸ್‍ಗೆ ಗೌರವ ಸಮರ್ಪಣೆ ಮಾಡುವುದು ದೇಶದ ಪ್ರತಿಯೊಬ್ಬ ನಾಗರಿಕರ ಆದ್ಯ ಕರ್ತವ್ಯವಾಗಬೇಕು ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು. ನಂದಗುಡಿಯ ಮುಗಬಾಳದ ಸರ್ಕಾರಿ ಕಿರಿಯ ಆರೋಗ್ಯ ಕೇಂದ್ರದ ಆವರಣದಲ್ಲಿ ಆಶಾ ಕಾರ್ಯಕರ್ತೆಯರು ಹಾಗೂ ಶೂಶ್ರುಕಿಯರಿಗೆ ಆಹಾರ ದಿನಸಿ ಸಾಮಗ್ರಿಗಳ ಕಿಟ್ ವಿತರಿಸಿ ಮಾತನಾಡಿದರು.

ಸರ್ಕಾರ ಆಶಾ ಕಾರ್ಯಕರ್ತೆಯರಿಗೆ ನೀಡುವ ಅಲ್ಪ ಸಹಾಯಧನದಲ್ಲೆ, ತಮ್ಮ ಪ್ರಾಣ ಲೆಕ್ಕಿಸದೆ, ಕೊರೊನಾ ಲಾಕ್ ಡೌನ್ ಸಂದಿಗ್ಧ ಪರಿಸ್ಥಿತಿಯಲ್ಲಿ ಹಳ್ಳಿಗಳಿಗೆ ತೆರಳಿ ಮನೆ ಮನೆಗೆ ಸುತ್ತಾಡಿ ಯಾವುದೇ ಲಕ್ಷಣ ಕಂಡುಬಂದರೂ ಜನ ಸಾಮಾನ್ಯರ ಆರೋಗ್ಯ ತಪಾಸಣೆಗೆ ಮುಂದಾಗಿದ್ದಾರೆ. ಅವರ ಸೇವೆ ನಿಜಕ್ಕೂ ಸ್ಮರಣಿಯವಾದುದು ಎಂದರು.

ಆಶಾ ಕಾರ್ಯಕರ್ತೆಯರು ತಮ್ಮ ಕುಟುಂಬದ ಬಗ್ಗೆ ಕಾಳಜಿ ವಹಿಸಿಕೊಂಡು ಕಾರ್ಯನಿರ್ವಹಿಸಬೇಕು. ತಮ್ಮ ವ್ಯಾಪ್ತಿಯಲ್ಲಿ ಯಾವುದೇ ರೋಗ ಲಕ್ಷಣ ಕಂಡು ಬಂದಲ್ಲಿ ವೈದ್ಯರಲ್ಲಿ ಚಿಕಿತ್ಸೆ ಕೊಡಿಸಬೇಕು. ಸಾಮಾಜಿಕ ಅಂತರ ಕಾಪಾಡುವುದಲ್ಲದೆ ಮಾಸ್ಕ್ ಧರಿಸುವಂತೆ, ಅನಗತ್ಯವಾಗಿ ಹೊರಗಡೆ ಸುತ್ತಾಡದಂತೆ ಜನರಲ್ಲಿ ಅರಿವು ಮೂಡಿಸುವುದರ ಜತೆಗೆ ಸ್ವಚ್ಛತೆ ಕಾಪಾಡುವ ಮೂಲಕ ಕೊರೊನಾ ತೊಲಗಿಸಲು ಶ್ರಮ ವಹಿಸಬೇಕು ಎಂದರು.

ಸಮಾಜ ಸೇವಕಿ ಸುಜತಾ ನಾಗರಾಜ್ ಮಾತನಾಡಿ, ಕೊರೊನಾ ತೊಲಗಿಸಲು ಸೇವೆಗೆ ಮುಂದಾಗಿರುವ ಕೊರೊನಾ ವಾರಿಯರ್ಸ್‍ಗಳನ್ನು ನಾಗರೀಕರು ಗೌರವಯುತವಾಗಿ ನಡೆಸಿಕೊಳ್ಳಬೇಕು. ಕೆಲವು ಕಿಡಿಗೇಡಿಗಳು ಹಲ್ಲೆಗೆ ಮುಂದಾಗುತ್ತಿರುವುದನ್ನು ದೇಶದ ಪ್ರತಿಯೊಬ್ಬ ನಾಗರೀಕನೂ ಖಂಡಿಸಬೇಕು. ಹಲ್ಲೆಕೋರರ ಮೇಲೆ ಗೂಂಡಾ ಕಾಯ್ದೆಯಡಿ ಕೇಸ್ ದಾಖಲಿಸಿ ಗಡಿಪಾರು ಮಾಡುವ ದಿಟ್ಟ ಕ್ರಮಕ್ಕೆ ಸರಕಾರ ಮುಂದಾಗಬೇಕು ಎಂದು ಹೇಳಿದರು.

ನಂದಗುಡಿ ಜಿಪಂ ಸದಸ್ಯ ಸಿ. ನಾಗರಾಜ್, ತಾಪಂ ಅಧ್ಯಕ್ಷ ಜಯದೇವಯ್ಯ, ಹೊಸಕೋಟೆ ಟೌನ್ ಅಧ್ಯಕ್ಷ ಸಿ. ಜಯರಾಜ್, ತಾಲೂಕು ಬಿಜೆಪಿ ಅಧ್ಯಕ್ಷ ಕೆ. ಸತೀಶ್, ಗ್ರಾಪಂ ಅಧ್ಯಕ್ಷೆ ಜ್ಯೋತಿ ಗೋಪಾಲ್, ಉಪಾಧ್ಯಕ್ಷ ಮಂಜುನಾಥ್, ಸದಸ್ಯ ನಾಗರಾಜ್, ಮುಖಂಡರಾದ ಹೇಮಂತ್, ಮುನಿಯಪ್ಪ ಡಾ. ವೀಣಾ ಶೂಶ್ರುಕಿಯರು ಹಾಗೂ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.

Facebook Comments