ಅಬಕಾರಿ ಖಾತೆ ನಂಗೆ ಬೇಕಿಲ್ಲ: ಎಂಟಿಬಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.21- ಖಾತೆ ಹಂಚಿಕೆ ಬೆನ್ನಲ್ಲೇ ಸಚಿವರಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು, ಅಬಕಾರಿ ಇಲಾಖೆ ನನಗೆ ಬೇಡ. ಅದರಲ್ಲಿ ಮಾಡುವ ಕೆಲಸ ಏನೂ ಇಲ್ಲ ಎಂದು ಎಂ.ಟಿ.ಬಿ.ನಾಗರಾಜ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ವಸತಿ ಖಾತೆಗೆ ರಾಜೀನಾಮೆ ನೀಡಿ ಬಂದಿದ್ದೇನೆ. ಸಿಎಂ ಉತ್ತಮ ಖಾತೆ ನೀಡುವ ಭರವಸೆ ನೀಡಿದ್ದರು. ಆದರೆ, ಈಗ ಅಬಕಾರಿ ಖಾತೆ ನೀಡಿದ್ದಾರೆ. ನನಗೆ ಈ ಖಾತೆ ಬೇಡ ಎಂದು ಹೇಳಿಬಂದಿದ್ದೇನೆ.

ಅಬಕಾರಿಯಲ್ಲಿ ಮಾಡುವ ಕೆಲಸ ಏನಿದೆ? ವಸತಿ ಖಾತೆಯಲ್ಲೇ ಆದರೆ ಮನೆಗಳನ್ನು ಕೊಡುವುದು, ಕಾಮಗಾರಿ ಮಾಡುವುದು ಇತ್ತು. ಈಗ ಅಬಕಾರಿ ಖಾತೆ ನೀಡಿದ್ದಾರೆ.ಇದು ನಾನು ಮಾಡುವ ಕೆಲಸ ಅಲ್ಲ , ಈ ಖಾತೆ ಬೇಡ ಎಂದು ಹೇಳಿಬಂದಿದ್ದೇನೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿದಾಗ ಎಂ.ಟಿ.ಬಿ.ನಾಗರಾಜ್ ಅವರು ವಸತಿ ಖಾತೆ ಸಚಿವರಾಗಿದ್ದರು. ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಅವರು ಬಿಜೆಪಿ ಸೇರ್ಪಡೆಯಾಗಿದ್ದರು. ಉಪಚುನಾವಣೆಯಲ್ಲಿ ಅವರು ಸೋಲನುಭವಿಸಿದ್ದರು. ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆ ಮಾಡಿ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ಆದರೆ, ಅವರು ಬಯಸಿದ ಸ್ಥಾನ ಸಿಕ್ಕಿಲ್ಲ ಎಂದು ಅವರು ತಮ್ಮ ಅತೃಪ್ತಿ ಹೊರಹಾಕಿದ್ದಾರೆ.

Facebook Comments