ಬಚ್ಚೇಗೌಡ ವಿರುದ್ಧ ಸಿಎಂ ಯಡಿಯೂರಪ್ಪಗೆ ಎಂಟಿಬಿ ನಾಗರಾಜ್ ದೂರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.7- ಜಿದ್ದಾಜಿದ್ದಿನ ಕುರುಕ್ಷೇತ್ರವಾಗಿರುವ ಹೊಸಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ತಮ್ಮ ಪುತ್ರನ ಪರ ಸಂಸದ ಬಿ.ಎನ್.ಬಚ್ಚೇಗೌಡ ಕೆಲಸ ಮಾಡಿದರೆಂದು ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಮುಖ್ಯಮಂತ್ರಿಯವರಿಗೆ ದೂರು ನೀಡಿದ್ದಾರೆ.

ಇಂದು ಡಾಲರ್ಸ್ ಕಾಲೋನಿಯ ಧವಳಗಿರಿ ನಿವಾಸಕ್ಕೆ ಆಗಮಿಸಿದ್ದ ಎಂಟಿಬಿ ನಾಗರಾಜ್ ಅವರು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿಯಾಗಿ ಬಚ್ಚೇಗೌಡರ ವಿರುದ್ಧ ದೂರು ಸಲ್ಲಿಸಿದ್ದಾರೆ. ತಮ್ಮ ಪುತ್ರ ಶರತ್ ಬಚ್ಚೇಗೌಡ ಪರ ಹೊಸಕೋಟೆಯಲ್ಲಿ ನೇರವಾಗಿ ಪ್ರಚಾರ ನಡೆಸದಿದ್ದರೂ ಬಚ್ಚೇಗೌಡರು ತೆರೆಮರೆಯಲ್ಲೇ ಕುಳಿತು ತಮ್ಮ ಬೆಂಬಲಿಗರಿಗೆ ಮಗನ ಪರ ಮತ ಚಲಾಯಿಸುವಂತೆ ಸೂಚನೆ ಕೊಟ್ಟಿದ್ದರೆಂದು ಎಂಟಿಬಿ ದೂರು ನೀಡಿದರು.

ಬಚ್ಚೇಗೌಡರು ಮಗನ ಪರ ಕೆಲಸ ಮಾಡಿರುವುದಕ್ಕೆ ನನ್ನ ಬಳಿ ವಿಡಿಯೋ ದಾಖಲೆಗಳಿವೆ. ಕೇಂದ್ರ ಶಿಸ್ತು ಸಮಿತಿಗೆ ಇದನ್ನು ನೀಡಿ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕೆಂದು ನಾಗರಾಜ್ ಸಿಎಂಗೆ ಒತ್ತಾಯಿಸಿದರು. ಈ ಬಗ್ಗೆ ಮುಖ್ಯಮಂತ್ರಿಯವರು ಯಾವುದೇ ಭರವಸೆ ಕೊಡದಿದ್ದರೂ ಹೊಸಕೋಟೆ ಕ್ಷೇತ್ರದಲ್ಲಿ ನೀವು ಗೆದ್ದೇ ಗೆಲ್ಲುತ್ತೀರಿ. ನಾನು ಪ್ರತಿಯೊಂದು ಕ್ಷೇತ್ರದ ಇಂಚಿಂಚು ಮಾಹಿತಿಯನ್ನು ಪಡೆದಿದ್ದೇನೆ.

ಗುಪ್ತಚರ ವಿಭಾಗ ಮತ್ತು ವಿವಿಧ ಖಾಸಗಿ ಏಜೆನ್ಸಿಗಳು ನೀಡಿರುವ ವರದಿಯಲ್ಲಿ ನೀವೇ ಗೆಲ್ಲಲಿದ್ದೀರಿ. ಬಚ್ಚೇಗೌಡರ ವಿರುದ್ಧ ಕ್ರಮ ಕೈಗೊಳ್ಳುವುದು ಬಿಡುವುದು ನನ್ನ ಕೈಯಲ್ಲಿಲ್ಲ. ಕೇಂದ್ರ ವರಿಷ್ಠರು ಈ ಬಗ್ಗೆ ತೀರ್ಮಾನಿಸುತ್ತಾರೆ ಎಂದು ಹೇಳಿದ್ದಾರೆ. ಯಡಿಯೂರಪ್ಪನವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಂಟಿಬಿ ನಾಗರಾಜ್, ಈ ಬಾರಿ ಹೊಸಕೋಟೆಯಲ್ಲಿ ನನ್ನದೇ ಗೆಲುವು ಎಂಬ ವಿಶ್ವಾಸ ವ್ಯಕ್ತಪಡಿಸಿದರು.

Facebook Comments

Sri Raghav

Admin