ಉಗ್ರರೂಪ ಪಡೆದುಕೊಂಡ ಕಬ್ಬು ಬೆಳೆಗಾರರ ಹೋರಾಟ

ಈ ಸುದ್ದಿಯನ್ನು ಶೇರ್ ಮಾಡಿ

balagaviಮುದೋಳ,ನ.18- ಕಳೆದ ಹಲವು ದಿನಗಳಿಂದ ತಾಲೂಕಿನಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಹೋರಾಟ ಉಗ್ರ ಸ್ವರೂಪ ತಾಳಿದ್ದು, ಹತ್ತಕ್ಕೂ ಹೆಚ್ಚು ಟ್ರ್ಯಾಕ್ಟರ್‍ಗಳನ್ನು ಪಲ್ಟಿ ಹೊಡಿಸಿ, ಅವುಗಳ ಲೈಟ್‍ಗಳನ್ನು ಜಖಂಗೊಳಿಸಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನಗರ ಹೊರವಲಯ ಮತ್ತು ಸಮೀಪದ ಮುಗಳಖೋಡದಲ್ಲಿ ರಾತ್ರಿ ನಡೆದಿದೆ. ಕಬ್ಬಿನ ಬಾಕಿ ಪಾವತಿ ಮತ್ತು ಸಮರ್ಪಕ ಬೆಲೆ ನಿಗದಿಗೆ ಒತ್ತಾಯಿಸಿ ರೈತರು ನಡೆಸುತ್ತಿದ್ದ ಪ್ರತಿಭಟನೆ ನಿನ್ನೆ ವಿಕೋಪಕ್ಕೆ ತಿರುಗಿದ ಪರಿಣಾಮ ರೊಚ್ಚಿಗೆದ್ದ ರೈತರು 10 ಟ್ರ್ಯಾಕ್ಟರ್‍ಗಳನ್ನು ಪಲ್ಟಿ ಹೊಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಘಟನೆ ನಂತರ ದಾಳಿಗೆ ತುತ್ತಾದ ಟ್ರ್ಯಾಕ್ಟರ್‍ಗಳು ರಸ್ತೆ ಪಕ್ಕ ಸಾಲು ಸಾಲಾಗಿ ಬಿದ್ದಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇದೀಗ ಈ ಭಾಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು ಕಟ್ಟೆಚ್ಚರ ವಹಿಸಲಾಗಿದೆ.

ಈ ನಡುವೆ ರಾತ್ರೋರಾತ್ರಿ ಕಬ್ಬು ತುಂಬಿದ ಮೂರು ಟ್ರ್ಯಾಕ್ಟರ್‍ಗಳಿಗೆ ಬೆಂಕಿ ಹಚ್ಚಿ ರೈತರು ಆಕ್ರೋಶ ವ್ಯಕ್ತಪಡಿಸಿರುವ ಘಟನೆಯೂ ನಡೆದಿದೆ. ಈ ವೇಳೆ ಟ್ರ್ಯಾಕ್ಟರ್‍ಗಳು ಹೊತ್ತಿ ಉರಿದು ಬೆಂಕಿಗೆ ಆಹುತಿಯಾಗಿವೆ. ಘಟನೆ ವಿಷಯ ತಿಳಿದ ಪಟ್ಟಣ ಅಗ್ನಿಶಾಮಕ ದಳದ ಸಿಬ್ಬಂದಿ ಕೂಡಲೇ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವ ಕಾರ್ಯ ಕೈಗೊಂಡು ಪರಿಸ್ಥಿತಿ ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಈ ಘಟನೆಯಲ್ಲೂ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಇನ್ನೂ ಇದೇ ವೇಳೆ ರನ್ನ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಮುಂದೆ ರೈತರು ಅಹೋರಾತ್ರಿ ಪ್ರತಿಭಟನೆ ಮುಂದುವರೆಸಿದ್ದಾರೆ.  ಈ ನಡುವೆ ಘಟನಾ ಸ್ಥಳಕ್ಕೆ ಬಾಗಲಕೋಟೆ ಎಸ್‍ಪಿ ಸಿಬಿ ರಿಷ್ಯಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಗ ಸ್ಥಳದಲ್ಲಿದ್ದ ರೈತರು ನಾವು ಟ್ರ್ಯಾಕ್ಟರ್‍ಗಳಿಗೆ ಬೆಂಕಿ ಹಚ್ಚಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ ಎನ್ನಲಾಗಿದೆ.  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಎದುರು ತಮ್ಮ ಬೇಡಿಕೆ ಮುಂದಿಟ್ಟ ರೈತರು ಕಬ್ಬಿಗೆ ಬೆಲೆ ನಿಗದಿ ಮಾಡದೇ ಕಾರ್ಖಾನೆ ಆರಂಭಿಸಬಾರದು ಒತ್ತಾಯಿಸಿದರು.

ಇಷ್ಟೆಲ್ಲಾ ಹೋರಾಟ ತೀವ್ರ ಸ್ವರೂಪ ಪಡೆಯುತ್ತಿರುವ ನಡುವೆಯೇ ಕೆಲವರು ಕಾರ್ಖಾನೆಗಳಿಗೆ ಕಬ್ಬು ಸಾಗಿಸಲು ಮುಂದಾಗಿರುವುದು ಮತ್ತಷ್ಟು ಸಂಘರ್ಷಕ್ಕೆ ಕಾರಣವಾಗುತ್ತಿದೆ. ಇದು ಕಬ್ಬು ಬೆಳೆಗಾರರನ್ನು ಇನ್ನಷ್ಟು ಕೆರಳಿಸುತ್ತಿದೆ. ಇದರಿಂದಾಗಿ ರೈತರು ಮತ್ತು ಸಕ್ಕರೆ ಕಾರ್ಖಾನೆಗಳ ನಡುವೆ ಸಂಘರ್ಷ ಹೆಚ್ಚಾಗುತ್ತಿದ್ದು ಇದು ಸದ್ಯಕ್ಕೆ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ.

Facebook Comments