‘ಮುಗಿಲ್ ಪೇಟೆ’ಗೆ ಶುಭಾರಂಭ

ಈ ಸುದ್ದಿಯನ್ನು ಶೇರ್ ಮಾಡಿ

ಮುಗಿಲ್‍ಪೇಟೆ ಮಡಿಕೇರಿ ಬಳಿಯ ಮಂದಾಲ ಪಟ್ಟಿ ಎಂಬ ಊರಿನ ಹೆಸರು. ಈಗ ಮುಗಿಲ್‍ಪೇಟೆ ಆಗಿದೆ. ಆದರೆ ಚಿತ್ರದಲ್ಲಿ ನಾಯಕಿಯ ಊರು ಮುಗಿಲ್‍ಪೇಟೆ. ಭರತ್ ಎಸ್.ನಾವುಂದ ಅವರ ನಿರ್ದೇಶನದಲ್ಲಿ , ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ಮನೋರಂಜನ್ ನಾಯಕನಾಗಿ ನಟಿಸುತ್ತಿರುವ ಮುಗಿಲ್ ಪೇಟೆ ಚಿತ್ರದ ಮುಹೂರ್ತ ಸಮಾರಂಭ ಕಳೆದ ಶುಕ್ರವಾರ ನಡೆದಿದೆ. ನಟ ಛಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಈ ಚಿತ್ರದ ಮುಹೂರ್ತಕ್ಕೆ ಕ್ಲಾಪ್ ಮಾಡಬೇಕಿತ್ತು.

ಆದರೆ ಕಾರಣಾಂತರಗಳಿಂದ ಅವರು ಈ ಕಾರ್ಯಕ್ರಮಕ್ಕೆ ಬರಲಾಗಲಿಲ್ಲ.ದರ್ಶನ್ ಅವರ ಅನುಪಸ್ಥಿತಿಯಲ್ಲಿ ಮುಗಿಲ್ ಪೇಟೆ ಸಿನಿಮಾ ಆರಂಭವಾಗಿದೆ. ಸಾಹೇಬ, ಬೃಹಸ್ಪತಿ ಹಾಗೂ ಪ್ರಾರಂಭ ಚಿತ್ರಗಳ ನಂತರ ಮನೋರಂಜನ್ ಅಭಿನಯದ ನಾಲ್ಕನೆ ಚಿತ್ರ ಮುಗಿಲ್ ಪೇಟೆ ಶುರುವಾಗಿದ್ದು, ಈ ಚಿತ್ರದಲ್ಲಿ ಮನೋರಂಜನ್ ಜೊತೆ ಡ್ಯುಯೆಟ್ ಹಾಡುವ ನಾಯಕಿಯಾಗಿ ಮುಂಬೈ ಮೂಲದ ನಟಿ ಖಯಾದು ಲೋಹರ್ ಅವರು ಆಯ್ಕೆಯಾಗಿದ್ದಾರೆ. ಈಕೆ ಮೂಲತಃ ಅಸ್ಸಾಂನವರು. ಸದ್ಯ ಮುಂಬೈನಲ್ಲಿ ನೆಲೆಸಿದ್ದಾರೆ.

ಈಗಾಗಲೇ ಮರಾಠಿಯಲ್ಲಿ ಒಂದು ಸಿನಿಮಾ ಮಾಡಿದ್ದಾರೆ. ಕನ್ನಡದಲ್ಲಿ ಇದು ಮೊದಲ ಸಿನಿಮಾ ಆಗಿದೆ. ಇನ್ನು ಮುಗಿಲ್‍ಪೇಟೆ ಚಿತ್ರದಲ್ಲಿ ಒಬ್ಬ ಚುರುಕಾದ ಹುಡುಗಿಯ ಪಾತ್ರದಲ್ಲಿ ನಟಿಸುತ್ತಿರುವ ಖಯಾದು ಅವರಿಗೆ ತನ್ನ ಪಾತ್ರ ನೋಡುಗರಿಗೆ ಇಷ್ಟವಾಗುತ್ತೆ ಎಂಬ ಭರವಸೆ ಹೊಂದಿದ್ದಾರಂತೆ. ಕನ್ನಡ ಕಲಿಯುವುದರ ಜೊತೆ ಈಕೆ ಕೆಲವು ಕನ್ನಡ ಸಿನಿಮಾಗಳನ್ನು ನೋಡಲು ನಿರ್ಧರಿಸಿದ್ದಾರಂತೆ.

ಈ ಚಿತ್ರದ ಮೂಲಕ ನಾಯಕ ಮನೋರಂಜನ್, ನ್ಯೂಮರಾಲಜಿ ಪ್ರಕಾರ ತನ್ನ ಹೆಸರನ್ನು ಮನುರಂಜನ್ ಅಂತ ಬದಲಾಯಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಅವರ ಹೆಸರು ಮನುರಂಜನ್ ಆಗಿರುತ್ತದೆ. ಇದರ ಕುರಿತು ಮಾತನಾಡಿದ ಅವರು ಈಗಲೂ ಮನೆಯಲ್ಲಿ ನನ್ನನ್ನು ಎಲ್ಲರೂ ಮನು ಅಂತಲೇ ಕರೀತಾರೆ. ಅದನ್ನೇ ಈಗ ಮನುರಂಜನ್ ಅಂತ ಇಟ್ಟುಕೊಂಡಿದ್ದೇನೆ.  ಚಿತ್ರದಲ್ಲಿ ನಾನು ಲೋನ್ ರೀಕವರಿ ಏಜೆಂಟ್ ಆಗಿ ಕಾಣಿಸಿಕೊಂಡಿದ್ದೇನೆ, ನನ್ನ ಪಾತ್ರಕ್ಕೆ ಎರಡು ಶೇಡ್ ಇದೆ ಎಂದು ಹೇಳಿದರು.

ಈ ಚಿತ್ರದಲ್ಲಿ 6 ಹಾಡುಗಳಿದ್ದು ಶ್ರೀಧರ್ ವಿ. ಸಂಭ್ರಮ್ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ರವಿವರ್ಮ ಛಾಯಾಗ್ರಾಹಕರು. ಶ್ರೀಮತಿ ರಕ್ಷ ವಿಜಯಕುಮಾರ್ ಈ ಚಿತ್ರದ ನಿರ್ಮಾಪಕರು. ಮೋತಿ ಮಹೇಶ್ ಚಿತ್ರದ ಸಹ ನಿರ್ಮಾಪಕರು.

Facebook Comments