ನಿರ್ಭಯಾ ಪ್ರಕರಣ : ಕ್ಷಮಾದಾನ ನಿರಾಕರಣೆ ಪ್ರಶ್ನಿಸಿ ಸುಪ್ರೀಂನಲ್ಲಿ ಮುಖೇಶ್ ಸಲ್ಲಿಸಿದ್ದ ಅರ್ಜಿ ವಜಾ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜ.29- ನೇಣು ಕುಣಿಕೆಯಿಂದ ಪಾರಾಗಲು ಕುಂಟುನೆಪಗಳನ್ನು ಒಡ್ಡಿ ಮರಣದಂಡನೆ ಶಿಕ್ಷೆ ವಿಳಂಬವಾಗುವಂತೆ ಮಾಡುತ್ತಿರುವ ನಿರ್ಭಯಾ ಗ್ಯಾಂಗ್‍ರೇಪ್ ಹಂತಕರಲ್ಲಿ ದೋಷಿ ಮುಖೇಶ್‍ಕುಮಾರ್ ಸಿಂಗ್ ಸಲ್ಲಿಸಿದ್ದ ಕ್ಷಮಾದಾನ ವಿರುದ್ಧದ ಮೇಲ್ಮನವಿಯನ್ನು ಇಂದು ಸುಪ್ರೀಂಕೋರ್ಟ್ ವಜಾಗೊಳಿಸಿದೆ.  ಇದರಿಂದಾಗಿ ನಿರ್ಭಯಾ ಪ್ರಕರಣದ ಎಲ್ಲ ನಾಲ್ವರು ಆರೋಪಿಗಳನ್ನು ಗಲ್ಲಿಗೇರಿಸಲು ಕಾಲ ಸನ್ನಿಹಿತವಾಗುತ್ತಿದೆ.

ತನ್ನ ಕ್ಷಮಾದಾನ ಅರ್ಜಿ ವಜಾಗೊಳಿಸಿದ್ದ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಕ್ರಮವನ್ನು ಪ್ರಶ್ನಿಸಿ ಮುಖೇಶ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ನ್ಯಾಯಮೂರ್ತಿ ಆರ್.ಭಾನುಮತಿ ನೇತೃತ್ವದ ತ್ರಿಸದಸ್ಯ ಪೀಠ ಇಂದು ವಜಾಗೊಳಿಸಿತು. ಕ್ಷಮಾದಾನ ನಿರಾಕರಿಸಿರುವ ರಾಷ್ಟ್ರಪತಿ ಅವರ ಕ್ರಮ ಸರಿಯಾಗಿದೆ. ಈ ನಿರ್ಧಾರ ಕೈಗೊಳ್ಳುವುದಕ್ಕೂ ಮುನ್ನ ರಾಷ್ಟ್ರಪತಿ ಅವರು ವಿಚಾರಣಾ ನ್ಯಾಯಾಲಯ, ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ತೀರ್ಪುಗಳನ್ನು ಕೂಲಂಕಶವಾಗಿ ಪರಿಶೀಲಿಸಿಯೇ ಈ ತೀರ್ಮಾನ ಕೈಗೊಂಡಿದ್ದಾರೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.

ಮುಖೇಶ್‍ಕುಮಾರ್ ಸಿಂಗ್ ಸಲ್ಲಿಸಿರುವ ಮೇಲ್ಮನವಿ ಅರ್ಜಿಯಲ್ಲಿ ಯಾವುದೇ ಹುರುಳಿಲ್ಲ. ಜೈಲಿನಲ್ಲಿ ಶಿಕ್ಷೆಯಲ್ಲಿರುವಾಗ ಅನುಭವಿಸಿದ ನೋವಿನ ನೆಪವೊಡ್ಡಿ ರಾಷ್ಟ್ರಪತಿ ಅವರ ಕ್ಷಮಾದಾನ ನಿರ್ಧಾರವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿರುವ ಮುಖೇಶ್ ಅರ್ಜಿಯನ್ನು ಮಾನ್ಯ ಮಾಡಲು ಯಾವುದೇ ಕಾರಣದಿಂದಲೂ ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಭಾನುಮತಿ ಸ್ಪಷ್ಟಪಡಿಸಿದರು.

ಈ ತೀರ್ಪಿನಿಂದಾಗಿ ಮುಖೇಶ್ ಕುಮಾರ್ ಸಿಂಗ್, ಅಕ್ಷಯ್‍ಕುಮಾರ್, ಪವನ್‍ಗುಪ್ತ ಮತ್ತು ವಿನಯ್ ಶರ್ಮ ಅವರಿಗೆ ಫೆ.1ರಂದು ಮುಂಜಾನೆ 6 ಗಂಟೆಗೆ ದೆಹಲಿಯ ಅತಿಭದ್ರತೆಯ ತಿಹಾರ್ ಜೈಲಿನಲ್ಲಿ ನೇಣುಗಂಬಕ್ಕೇರಿಸಲು ದಿನಾಂಕ ನಿಗದಿಯಾಗಿದೆ. ಆದರೆ, ಯಾವುದೇ ಕಾನೂನು ತೊಡಕು ಮತ್ತೆ ಎದುರಾಗದಿದ್ದರೆ ಇವರೆಲ್ಲರನ್ನೂ ಅದೇ ದಿನ ಗಲ್ಲಿಗೇರಿಸಲಾಗುವುದು.

Facebook Comments